ಬೆಂಗಳೂರು: ಎರಡೂ ಸೆಟ್‌ಗಳಲ್ಲಿ ಆಧಿಪತ್ಯ ಸ್ಥಾಪಿಸಿದ ಆಸ್ಟ್ರೆಲಿಯಾದ ಅಲೆಕ್ಸಾಂಡರ್ ವುಕಿಚ್ ಅವರು ಬೆಂಗಳೂರು ಓಪನ್–2 ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಭಾನುವಾರ ಮಧ್ಯಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಅವರು ಬಲ್ಗೇರಿಯಾದ ದಿಮಿತರ್ ಕುಜ್ಮನೊವ್ ಎದುರು6-4, 6-4ರಲ್ಲಿ ಜಯ ಸಾಧಿಸಿದರು.
25 ವರ್ಷದ ವುಕಿಚ್ ಈ ಪ್ರಶಸ್ತಿಯನ್ನು ತಮ್ಮ ಕುಟುಂಬಕ್ಕೆ ಸಮರ್ಪಿಸಿದ್ದಾರೆ. ನಿರ್ಣಾಯಕ ಘಟ್ಟಗಳಲ್ಲಿ ಕುಟುಂಬವು ತಮ್ಮ ಬೆಂಬಲಕ್ಕೆ ನಿಂತ ಕಾರಣದಿಂದ ಸಾಧನೆಯ ಹಾದಿ ಸುಗಮವಾಗಿದೆ ಎಂದು ಅವರು ಪಂದ್ಯದ ನಂತರ ಹೇಳಿದರು.
ಉದ್ಯಾನ ನಗರಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯಾಸವಾಗಿದೆ ಎಂದು ಹೇಳಿದ್ದ ವುಕಿಚ್ ಕಳೆದ ವಾರ ನಡೆದ ಮೊದಲ ಟೂರ್ನಿಯ ಎರಡನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಫೈನಲ್‌ಗೇರಿದ್ದ ಕ್ರೊವೇಷ್ಯಾದ ಬೋರ್ನ ಗೋಜೊ ಆ ಪಂದ್ಯದಲ್ಲಿ ವುಕಿಚ್ ಅವರನ್ನು ಮಣಿಸಿದ್ದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಸೋಲಿನ ಸುಳಿಯಿಂದ ಮೇಲೆದ್ದು ಬಂದು ಜಯ ಗಳಿಸಿದ್ದ 28 ವರ್ಷದ ಕುಜ್ಮನೊವ್ ಫೈನಲ್‌ನಲ್ಲೂ ಮಿಂಚುವ ಭರವಸೆಯಿಂದಾಗಿ ಟೆನಿಸ್ ಪ್ರಿಯರು ಕುತೂಹಲಗೊಂಡಿದ್ದರು. ಆದರೆ ಅಗ್ರಶ್ರೇಯಾಂಕದ ವುಕಿಚ್ ಎದುರು ಅವರು ನಿರುತ್ತರರಾದರು. ಅಮೋಘ ಸರ್ವ್‌ಗಳ ಮೂಲಕ ಮಿನುಗಿದ ವುಕಿಚ್ ಎದುರಾಳಿ ಎಸಗಿದ ತಪ್ಪುಗಳ ಲಾಭವನ್ನೂ ಪಡೆದುಕೊಂಡರು.
ಮೊದಲ ಸೆಟ್ ಸುಲಭವಾಗಿ ಗೆದ್ದುಕೊಂಡ ವುಕಿಚ್ ಎರಡನೇ ಸೆಟ್‌ನಲ್ಲೂ ಅದೇ ಲಯವನ್ನು ಮುಂದುವರಿಸಿದರು. ಈ ಸೆಟ್‌ನಲ್ಲಿ ಕುಜ್ಮನೊವ್ ಮತ್ತಷ್ಟು ನೀರಸ ಆಟವಾಡಿದರು. ಮೂರನೇ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡ ಅವರು ಐದನೇ ಗೇಮ್‌ನಲ್ಲೂ ಅದೇ ಸ್ಥಿತಿ ಮುಂದುವರಿದಾಗ ರ‍್ಯಾಕೆಟ್ ಎಸೆದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ‘ಪೆನಾಲ್ಟಿ’ ರೂಪದಲ್ಲಿ ಎದುರಾಳಿಗೆ ಒಂದು ಪಾಯಿಂಟ್ ಕೊಡುಗೆ ನೀಡಬೇಕಾಯಿತು.
ಈ ಹಂತದಲ್ಲಿ ಮತ್ತಷ್ಟು ಹುರುಪು ಪಡೆದುಕೊಂಡ ವುಕಿಚ್ ಸತತ ಎರಡು ಸೇರಿದಂತೆ ಮೂರು ಏಸ್‌ಗಳನ್ನು ಸಿಡಿಸಿ ಪಂದ್ಯಕ್ಕೆ ತೆರೆ ಎಳೆದು ಸಂಭ್ರಮಿಸಿದರು. ವುಕಿಚ್ ಈ ಮೂಲಕ ಕುಜ್ಮನೊವ್ ಎದುರಿನ ಎಲ್ಲ ಐದು ಪಂದ್ಯಗಳನ್ನೂ ಗೆದ್ದ ಸಾಧನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.