ADVERTISEMENT

Bengaluru Open Tennis: ಸ್ಕೂಲ್ಕೇಟ್‌ಗೆ ಹ್ಯಾರಿಸ್‌ ಆಘಾತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 1:23 IST
Last Updated 1 ಮಾರ್ಚ್ 2025, 1:23 IST
<div class="paragraphs"><p>ಬ್ರಿಟನ್‌ನ ಬಿಲಿ ಹ್ಯಾರಿಸ್‌ ಆಟದ ವೈಖರಿ</p></div>

ಬ್ರಿಟನ್‌ನ ಬಿಲಿ ಹ್ಯಾರಿಸ್‌ ಆಟದ ವೈಖರಿ

   

ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಶ್ರೇಯಾಂಕರಹಿತ ಆಟಗಾರ ಬಿಲಿ ಹ್ಯಾರಿಸ್‌ ಅವರು ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ 125 ಟೆನಿಸ್‌ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕದ ಟ್ರಿಸ್ಟನ್ ಸ್ಕೂಲ್ಕೇಟ್‌ ಅವರಿಗೆ ಆಘಾತ ನೀಡಿ ಸೆಮಿಫೈನಲ್‌ಗೆ ಮುನ್ನಡೆದರು.

ADVERTISEMENT

ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಐದನೇ ದಿನವಾದ ಶುಕ್ರವಾರ ನಡೆದ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಿಟನ್‌ನ ಹ್ಯಾರಿಸ್‌ 6-2, 1-6, 7-5ರ ಮೂರು ಸೆಟ್‌ಗಳ ಸೆಣಸಾಟದಲ್ಲಿ ಆಸ್ಟ್ರೇಲಿಯಾದ ಸ್ಕೂಲ್ಕೇಟ್‌ ಅವರನ್ನು ಹಿಮ್ಮೆಟ್ಟಿಸಿದರು.

ಕೊನೆಗಳಿಗೆಯಲ್ಲಿ ಟೂರ್ನಿಯ ಕ್ವಾಲಿಫೈಯಿಂಗ್‌ ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶ ಪಡೆದಿದ್ದ 30 ವರ್ಷ ವಯಸ್ಸಿನ ಹ್ಯಾರಿಸ್‌ ಎರಡನೇ ಸುತ್ತಿನಲ್ಲಿ ಮುಗ್ಗರಿ
ಸಿದ್ದರು. ಆದರೆ, ಪ್ರಧಾನ ಸುತ್ತಿನಲ್ಲಿ ಆಡಬೇಕಾಗಿದ್ದ ಕೆನಡಾದ ಅಲೆಕ್ಸಿಸ್‌ ಗಲರ್ನೆ ಹಿಂದೆ ಸರಿದ ಕಾರಣ ‘ಲಕ್ಕಿ ಲೂಸರ್’ ಆಗಿ ಮುಖ್ಯಸುತ್ತಿಗೆ ಅವಕಾಶ ಪಡೆದಿದ್ದರು.

ಮೊದಲ ಸೆಟ್‌ನಲ್ಲಿ ಹ್ಯಾರಿಸ್‌ ಪಾರಮ್ಯ ಮೆರೆದರೆ, ಎರಡನೇ ಸೆಟ್‌ನಲ್ಲಿ 26 ವರ್ಷ ವಯಸ್ಸಿನ ಸ್ಕೂಲ್ಕೇಟ್‌ ಹಿಡಿತ ಸಾಧಿಸಿದರು. ರೋಚಕತೆ ಪಡೆದ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಹ್ಯಾರಿಸ್‌ ಮೇಲುಗೈ ಸಾಧಿಸಿ ಮುನ್ನಡೆದರು. ಅವರು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಮೂರನೇ ಶ್ರೇಯಾಂಕದ ಬ್ರಾಂಡನ್‌ ಹಾಲ್ಟ್‌ ಅವರನ್ನು ಎದುರಿಸಲಿದ್ದಾರೆ.

ಅಮೆರಿಕದ 26 ವರ್ಷ ವಯಸ್ಸಿನ ಹಾಲ್ಟ್‌ 6–4, 6–4ರಿಂದ ರಷ್ಯಾದ ಪೀಟರ್‌ ಬಾರ್ ಬಿರ್ಯುಕೋವ್ ಅವರನ್ನು ಸೋಲಿಸಿದರು. ಮೊದಲೆರಡು ಶ್ರೇಯಾಂಕದ ಆಟಗಾರರು ಟೂರ್ನಿ ಯಿಂದ ಹೊರಬಿದ್ದಿರುವುದರಿಂದ ಹಾಲ್ಟ್‌ ಕಣದಲ್ಲಿ ಉಳಿದಿರುವ ಉನ್ನತ ಶ್ರೇಯಾಂಕದ ಆಟಗಾರನಾಗಿದ್ದಾರೆ.

ಝೆಕ್‌ ಗಣರಾಜ್ಯದ ಕ್ವಾಲಿಫೈಯರ್‌ ಆಟಗಾರ ಹೈನೆಲ್‌ ಬಾರ್ಟನ್‌ ಅವರ ಕನಸಿನ ಓಟಕ್ಕೆ ವಿರಾಮ ಬಿತ್ತು. ಏಳನೇ ಶ್ರೇಯಾಂಕದ ಶಿಂಟಾರೊ ಮೊಚಿಜುಕಿ 7-6(5), 6-3ರಿಂದ 20 ವರ್ಷ ವಯಸ್ಸಿನ ಬಾರ್ಟನ್‌ ಅವರನ್ನು ಮಣಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಜಪಾನ್‌ನ ಶಿಂಟಾರೊ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜೇಮ್ಸ್‌ ಮೆಕ್‌ಕ್ಯಾಬ್ ಅವರ ಸವಾಲನ್ನು ಎದುರಿಸುವರು. ಜೇಮ್ಸ್‌ 4-6, 6-4, 6-3ರಿಂದ ಕೊಲಂಬಿಯಾದ ನಿಕೋಲಸ್ ಮೆಜಿಯಾ ಅವರನ್ನು ಮಣಿಸಿದರು.

ಭಾರತದ ಜೋಡಿಗಳಿಗೆ ನಿರಾಸೆ: ಹಾಲಿ ಚಾಂಪಿಯನ್‌ ಭಾರತದ ಸಾಕೇತ್ ಮೈನೇನಿ– ರಾಮಕುಮಾರ್‌ ರಾಮನಾಥನ್‌ ಜೋಡಿ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಹೊರಬಿತ್ತು. ಸಿದ್ಧಾಂತ್‌ ಬಂಥಿಯಾ – ಪರೀಕ್ಷಿತ್‌ ಸೊಮಾನಿ ಅವರಿಗೂ ನಿರಾಸೆಯಾಯಿತು.

ಅಗ್ರ ಶ್ರೇಯಾಂಕದ ಅನಿರುದ್ಧ ಚಂದ್ರಶೇಖರ್‌ (ಭಾರತ)– ರೇ ಹೊ (ತೈವಾನ್‌) ಮತ್ತು ಎರಡನೇ ಶ್ರೇಯಾಂಕದ ಬ್ಲೇಕ್ ಬೇಲ್ಡನ್– ಮ್ಯಾಥ್ಯೂ ಕ್ರಿಸ್ಟೋಫರ್ ರೋಮಿಯೋಸ್ (ಆಸ್ಟ್ರೇಲಿಯಾ) ಜೋಡಿಗಳು ಶನಿವಾರ ಫೈನಲ್‌ನಲ್ಲಿ ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.