
ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಭಾರತದ ಸಿಂಗಲ್ಸ್ ಆಟಗಾರರು. (ಎಡದಿಂದ) ಸಾಕೇತ್ ಮೈನೇನಿ, ಮಾನಸ್ ಧಮ್ಮ, ಸುಮಿತ್ ನಾಗಲ್, ಪ್ರಜ್ವಲ್ ದೇವ್, ಆರ್ಯನ್ ಶಾ, ದಕ್ಷಿಣೇಶ್ವರ್ ಸುರೇಶ್
ಬೆಂಗಳೂರು: ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಮಹತ್ವಾಕಾಂಕ್ಷೆಯ
‘ಬೆಂಗಳೂರು ಓಪನ್ ಟೆನಿಸ್ ಟೂರ್ನಿ’ಗೆ ಈಗ ದಶಕದ ಸಂಭ್ರಮ. ಎಟಿಪಿ 125 ಚಾಲೆಂಜರ್ ಟೂರ್ನಿಯ ದರ್ಜೆಗೇರಿರುವ ಹತ್ತನೇ ಆವೃತ್ತಿಯ ಮುಖ್ಯ ಸುತ್ತುಗಳು ಸೋಮವಾರದಿಂದ ನಡೆಯಲಿವೆ.
ಕಳೆದ ಕೆಲವು ತಿಂಗಳುಗಳಿಂದ ಕೆಎಸ್‌ಎಲ್‌ಟಿಎ ಮಹತ್ವದ ಟೂರ್ನಿ ಗಳನ್ನು ಆಯೋಜಿಸಿದೆ. ಅದರಲ್ಲಿ ಮುಖ್ಯವಾಗಿ ಬಿಲ್ಲಿ ಜೀನ್ ಕಿಂಗ್ ಕಪ್ ಮತ್ತು ವಿಶ್ವ ಟೆನಿಸ್ ಲೀಗ್ ಟೂರ್ನಿಗಳು ಈಚೆಗೆ ನಡೆದಿದ್ದವು. ಬೆಂಗಳೂರು ಓಪನ್ ಟೂರ್ನಿಯಲ್ಲಿ 19 ದೇಶಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ.
‘ಮುಂದಿನ ಒಂದು ವರ್ಷದಲ್ಲಿ ಟೆನಿಸ್ ಟೂರ್ನಿಗಳಲ್ಲಿ ಆಡಲು ಸಿದ್ಧ ರಾಗಿರುವವರಿಗೆ ಬೆಂಗಳೂರು ಓಪನ್ ಮುನ್ನುಡಿಯಾಗಿದೆ. ಅದಕ್ಕಾಗಿ ಕೆಎಸ್ಎಲ್‌ಟಿಎಗೆ ಅಭಿನಂದನೆ ಸಲ್ಲಿಸು ತ್ತೇನೆ’ ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗಲ್ಸ್‌ನ ಅಗ್ರಶ್ರೇಯಾಂಕದ ಆಟಗಾರ ಸುಮಿತ್ ನಾಗಲ್ ಹೇಳುತ್ತಾರೆ.
ಹರಿಯಾಣದ 28 ವರ್ಷದ ಸುಮಿತ್ ಅವರು 2025ರಲ್ಲಿ ಕೆಲವು ವೈಫಲ್ಯಗಳನ್ನು ಕಂಡಿದ್ದರು. ‘2017ರಲ್ಲಿ ನನ್ನ ಮೊದಲ ಚಾಲೆಂಜರ್ಸ್ ಪ್ರಶಸ್ತಿ ಯನ್ನು ಇಲ್ಲಿ ಜಯಿಸಿದ್ದೆ. ಅದಕ್ಕಾಗಿಯೇ ಬೆಂಗಳೂರು ನನಗೆ ಅಚ್ಚುಮೆಚ್ಚು. ಇಲ್ಲಿಯ ಜನರ ಪ್ರೋತ್ಸಾಹ ಮತ್ತು ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಮನೆಗೆ ಮರಳಿ ಬಂದ ಅನುಭವವಾಗುತ್ತದೆ’ ಎಂದರು.
ಮೈಸೂರಿನ ಪ್ರಜ್ವಲ್ ದೇವ್ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದಾರೆ. ಹೋದ ತಿಂಗಳು ಭುವನೇಶ್ವರದಲ್ಲಿ ನಡೆದಿದ್ದ ಐಟಿಎಫ್ ವಿಶ್ವ ಟೆನಿಸ್ ಟೂರ್ (ಎಂ15) ನಲ್ಲಿ ಯಶಸ್ಸು ಸಾಧಿಸಿದ ವಿಶ್ವಾಸದೊಂದಿಗೆ ದೇವ್ ಅವರು ಇಲ್ಲಿಗೆ ಬಂದಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 629ನೇ ಸ್ಥಾನದಲ್ಲಿದ್ದಾರೆ.
ಆದರೆ ಬೆಂಗಳೂರು ಓಪನ್ ಕಣದಲ್ಲಿ ಚಾಂಪಿಯನ್ ಪಟ್ಟವು ಭಾರತೀಯ ಆಟಗಾರರಿಗೆ ಹೆಚ್ಚು ಒಲಿದಿಲ್ಲ. ಅದರಲ್ಲೂ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದವರು ಹೆಚ್ಚು. 2018ರಲ್ಲಿ ಪ್ರಜ್ಞೇಶ್ ಗುಣೇಶ್ವರನ್ ಅವರು ಫೈನಲ್‌ನಲ್ಲಿ ಭಾರತದವರೇ ಆದ ಸಾಕೇತ್ ಮೈನೇನಿ ವಿರುದ್ಧ ಜಯಿಸಿದ್ದರು.
ಈ ಸಲ ವಿಶ್ವ ರ‍್ಯಾಂಕಿಂಗ್‌ನಲ್ಲಿ 95ನೇ ಸ್ಥಾನದಲ್ಲಿರುವ ಸ್ಪೇನ್‌ನ ಪೆಡ್ರೊ ಮಾರ್ಟಿನೇಜ್ ಅವರು ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದ್ದಾರೆ. 2021ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. 2025ರಲ್ಲಿ ಸಿನ್ಸಿನಾಟಿ ಮಾಸ್ಟರ್ಸ್ ಮತ್ತು ಅಮೆರಿಕ ಓಪನ್ ಟೂರ್ನಿಗಳಲ್ಲಿ ಬೇಗನೆ
ನಿರ್ಗಮಿಸಿದ್ದರು. ವಿಂಬಲ್ಡನ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಯಾನಿಕ್ ಸಿನ್ನರ್ ಎದುರು ಸೋತಿದ್ದರು.
ಫ್ರಾನ್ಸ್‌ನ ಹೆರಾಲ್ಡ್ ಮೆಯೊಟ್ (ಎಟಿಪಿ 163) ಅವರು ತಮಗೆ ಲಭಿಸಿರುವ ಅವಕಾಶವನ್ನು ಪೂರ್ಣ
ಪ್ರಮಾಣದಲ್ಲಿ ಬಳಸಿಕೊಳ್ಳುವ ಗುರಿಯಿಟ್ಟುಕೊಂಡಿದ್ದಾರೆ. ಎರಡನೇ ಸುತ್ತಿನಲ್ಲಿ ಅವರು ನಾಗಲ್ ಅವರನ್ನು ಎದುರಿಸುವ ಸಾಧ್ಯತೆ ಇದೆ.
ಭಾರತದ ಇನ್ನೊಬ್ಬ ಪ್ರತಿಭಾನ್ವಿತ ಆಟಗಾರ ದಕ್ಷಿಣೇಶ್ವರ್ ಸುರೇಶ್ ಅವರು ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದ ಕೋರ್ಟ್‌ನಲ್ಲಿ ತಮ್ಮ ಛಾಪು ಮೂಡಿಸುವ ವಿಶ್ವಾಸದಲ್ಲಿದ್ದಾರೆ.
‘ಸುಮಿತ್ ಅವರು ಕೆಲವು ದಿನಗಳಿಂದ ಇಲ್ಲಿ ಅಭ್ಯಾಸ ಮಾಡಿದ್ದಾರೆ. ಪ್ರಜ್ವಲ್ ಸ್ಥಳೀಯ ಆಟಗಾರ. ಹೋದ ತಿಂಗಳು ನಾನು ಕೂಡ ಇಲ್ಲಿ ಆಡಿದ್ದೆ. ಅದರಿಂದಾಗಿ ಇಲ್ಲಿಯ ವಾತಾವರಣ ಮತ್ತು ಕೋರ್ಟ್‌ಗಳ ಬಗ್ಗೆ ಅರಿವು ಚೆನ್ನಾಗಿದೆ. ನಮ್ಮಲ್ಲಿ ಯಾರು ಅಗ್ರ ಸಾಧನೆ ಮಾಡುತ್ತಾರೆಂಬುದನ್ನು ನೋಡೋಣ’ ಎಂದು ಸುರೇಶ್ ಹೇಳುತ್ತಾರೆ.
ಪಂದ್ಯ ಅರಂಭ: ಬೆಳಿಗ್ಗೆ 11
ನೇರಪ್ರಸಾರ: ಫ್ಯಾನ್‌ಕೋಡ್ ಆ್ಯಪ್
ಸಿದ್ಧಾರ್ಥ್ ರಾವತ್ ಅವರು ಬೆಂಗಳೂರು ಓಪನ್ ಅರ್ಹತಾ ಪಂದ್ಯಗಳ ಎರಡನೇ ಸುತ್ತು ಪ್ರವೇಶಿಸಿದ ಭಾರತದ ಏಕೈಕ ಆಟಗಾರನಾದರು.
ಭಾನುವಾರ ಸಿದ್ಧಾರ್ಥ್ 6–3, 7–5ರಿಂದ ನಿತಿನ್ ಕುಮಾರ್ ಎದುರು ಗೆದ್ದರು. ಉಳಿದ ಪಂದ್ಯಗಳಲ್ಲಿ ಭಾರತದ ಆಟಗಾರರು ನಿರಾಶೆ ಅನುಭವಿಸಿದರು.
ಅಜೀಜ್ ಒವುಕಾ (ಟ್ಯೂನಿಷಿಯಾ) 6–4, 7–6ರಿಂದ ಆದಿತ್ಯ ವಿಶಾಲ್ ಬಾಲಶೇಖರ್ ವಿರುದ್ಧ; ನೆದರ್ಲೆಂಡ್ಸ್‌ನ ನೀಲ್ಸ್ ವಿಸ್ಕರ್ 6–3, 6–3ರಿಂದ ಮನೀಷ್ ಸುರೇಶ್ ಕುಮಾರ್ ಎದುರು; ಫ್ರಾನ್ಸ್‌ನ ಆರ್ಥರ್ ರೇಮಂಡ್ 7–5, 7–6 ರಿಂದ ರಾಮಕುಮಾರ್ ರಾಮನಾಥನ್ ಎದುರು; ಜೆಕ್ ಗಣರಾಜ್ಯದ ಡಾಮ್ನಿಕ್ ಪಲಾನ್ ಅವರು ದೇವ್ ಜಾವಿಯಾ 3–6, 7–5, 7–6ರಿಂದ, ಫಿನ್ಲೆಂಡ್‌ನ ಈರೊ ವಾಸಾ 3–6, 6–3, 6–0ಯಿಂದ ಆದಿಲ್ ಕಲ್ಯಾಣಪುರ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.