ADVERTISEMENT

ಬೆಂಗಳೂರು ಓಪನ್ ಟೆನಿಸ್‌ ಟೂರ್ನಿ: ವೆಸ್ಲಿ ಎದುರು ಸೋತ ಪ್ರಜ್ಞೇಶ್‌

ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2022, 15:09 IST
Last Updated 10 ಫೆಬ್ರುವರಿ 2022, 15:09 IST
ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಬುಧವಾರ ಪ್ರಜ್ಞೇಶ್ ಗುಣೇಶ್ವರನ್ ಎದುರಿನ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಿರಿ ವೆಸ್ಲಿ ಚೆಂಡನ್ನು ರಿಟರ್ನ್ ಮಾಡಲು ಮುಂದಾದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್
ಬೆಂಗಳೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯಲ್ಲಿ ಬುಧವಾರ ಪ್ರಜ್ಞೇಶ್ ಗುಣೇಶ್ವರನ್ ಎದುರಿನ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಜಿರಿ ವೆಸ್ಲಿ ಚೆಂಡನ್ನು ರಿಟರ್ನ್ ಮಾಡಲು ಮುಂದಾದರು –ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್ ಪಿ.ಎಸ್   

ಬೆಂಗಳೂರು: ಮುನ್ನಡೆಯನ್ನು ಉಳಿಸಿಕೊಳ್ಳಲಾಗದ ಭಾರತದ ಪ್ರಜ್ಞೇಶ್ ಗುಣೇಶ್ವರನ್‌ ಅವರು ಅಗ್ರಶ್ರೇಯಾಂಕದ ಆಟಗಾರ ಜಿರಿ ವೆಸ್ಲಿ ಎದುರು ನಿರಾಸೆ ಅನುಭವಿಸಿದರು. ಇದರೊಂದಿಗೆ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಯಿತು.

ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಗುರುವಾರ ಪ್ರಜ್ಞೇಶ್‌ 6–3, 2–6, 1–6ರಿಂದ ಜೆಕ್ ಗಣರಾಜ್ಯದ ಆಟಗಾರನ ಎದುರು ಎಡವಿದರು.

ಜಿದ್ದಾಜಿದ್ದಿನ ಪೈಪೋಟಿಯ ಪಂದ್ಯದ ಮೊದಲ ಎರಡು ಗೇಮ್‌ಗಳಲ್ಲಿ ಉಭಯ ಆಟಗಾರರ ಪರಸ್ಪರ ಸರ್ವ್‌ಗಳನ್ನು ಮುರಿದರು. ವೆಸ್ಲಿ ಮಾಡಿದ ಲೋಪಗಳ ಲಾಭ ಪಡೆದ ಪ್ರಜ್ಞೇಶ್ ನಾಲ್ಕನೇ ಗೇಮ್‌ನಲ್ಲೂ ಸರ್ವ್ ಮುರಿದರು. ಅದೇ ಲಯದೊಂದಿಗೆ ಸೆಟ್‌ ವಶಪಡಿಸಿಕೊಂಡರು.

ADVERTISEMENT

ಎರಡನೇ ಸೆಟ್‌ನ ನಾಲ್ಕನೇ ಹಾಗೂ ಎಂಟನೇ ಗೇಮ್‌ಗಳಲ್ಲಿ ಪ್ರಜ್ಞೇಶ್ ಸರ್ವ್‌ ಮುರಿದು ಮುನ್ನುಗ್ಗಿದ ವೆಸ್ಲಿ ಚುರುಕಿನ ಆಟದೊಂದಿಗೆ ಸೆಟ್‌ ವಶಡಿಸಿಕೊಂಡರು. ಆದರೆ ಮೂರನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಜೆಕ್‌ ಆಟಗಾರ ಸಂಪೂರ್ಣ ಪಾರಮ್ಯ ಮೆರೆದರು. ಆರಂಭದಲ್ಲೇ 5–0 ಮುನ್ನಡೆಯೊಂದಿಗೆ ಸಾಗಿ ಸೆಟ್‌ ಗೆದ್ದು ಸಂತಸದಲ್ಲಿ ಮಿಂದೆದ್ದರು.

ಎಂಟರಘಟ್ಟದ ಹಣಾಹಣಿಯಲ್ಲಿ ವೆಸ್ಲಿ ಅವರು ಫ್ರಾನ್ಸ್‌ನ ಎನ್‌ಜೊ ಕೌಸಾಡ್‌ ಅವರನ್ನು ಎದುರಿಸುವರು. ಪ್ರೀಕ್ವಾರ್ಟರ್‌ಫೈನಲ್‌ನ ಮತ್ತೊಂದು ಪಂದ್ಯದಲ್ಲಿ ಎನ್‌ಜೊ6-4, 3-6, 6-2ರಿಂದ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಸವಾಲು ಮೀರಿದರು.

ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಇನ್ನುಳಿದ ಹಣಾಹಣಿಗಳಲ್ಲಿ ಟರ್ಕಿಯ ಸೆಮ್‌ ಇಲ್‌ಕೆಲ್‌2-6, 6-3, 7-5ರಿಂದ ರಷ್ಯಾದ ಇವ್‌ಜೆನಿ ಡಾನ್‌ಸ್ಕಿ ಎದುರು, ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್‌7-6 (4), 6-4ರಿಂದ ಬಲ್ಗೇರಿಯಾದ ಡಿಮಿಟಾರ್‌ ಕುಜ್ಮನೊವ್ ವಿರುದ್ಧ ಜಯ ಸಾಧಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.

ಸೆಮಿಗೆ ಸಾಕೇತ್‌– ರಾಮ್‌ಕುಮಾರ್‌: ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾಕೇತ್ ಮೈನೇನಿ ಮತ್ತು ರಾಮಕುಮಾರ್ ರಾಮನಾಥನ್ ಜೋಡಿ ಮಾತ್ರ ಸೆಮಿಫೈನಲ್ ಪ್ರವೇಶಿಸಿತು. ಅವರ ಎದುರಾಳಿಗಳಾಗಿದ್ದ ಕೆನಡಾದ ಸ್ಟೀವನ್‌ ಡಿಯಜ್‌ ಮತ್ತು ಟ್ಯುನಿಷಿಯಾದ ಮಾಲೆಕ್‌ ಜಾಜಿರಿ ಅವರು ವಾಕ್‌ಓವರ್‌ ನೀಡಿದ ಕಾರಣ ಭಾರತದ ಜೋಡಿಗೆ ಈ ಅವಕಾಶ ಲಭಿಸಿತು.

ಇನ್ನುಳಿದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಯೂಕಿ ಭಾಂಬ್ರಿ– ದಿವಿಜ್ ಶರಣ್‌ 4–6, 3–6ರಿಂದ ಅಸ್ಟ್ರಿಯಾದ ಅಲೆಕ್ಸಾಂಡರ್‌ ಎರ್ಲರ್‌, ಜೆಕ್‌ ಗಣರಾಜ್ಯದ ವಿಟ್‌ ಕೊಪ್ರಿವಾ ಎದುರು ಸೋತರೆ, ಜೀವನ್ ನೆಡುಂಚೇರಿಯನ್‌–ಪೂರವ್ ರಾಜಾ2–6, 1–6ರಿಂದ ಬ್ರಿಟನ್‌ನ ಜಾಯ್‌ ಕ್ಲಾರ್ಕ್‌– ಆಸ್ಟ್ರೇಲಿಯಾದ ಮಾರ್ಕ್ ಪೊಲ್ಮನ್ಸ್ ಎದುರು ಎಡವಿದರು. ಎನ್‌.ಶ್ರೀರಾಮ್ ಬಾಲಾಜಿ– ವಿಷ್ಣುವರ್ಧನ್ ಜೋಡಿಯು 4–6, 6–7, 4–10ರಿಂದ ಫ್ರಾನ್ಸ್‌ನ ಹ್ಯೂಗೊ ಗ್ರೇನಿಯರ್‌– ಅಲೆಕ್ಸಾಂಡರ್ ಮುಲ್ಲರ್‌ ಎದುರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.