ADVERTISEMENT

ಚೆನ್ನೈ ಓಪನ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ: ಸೆಮಿಯಲ್ಲಿ ಆಘಾತ ಕಂಡ ಪ್ರಜ್ಞೇಶ್‌

ಪಿಟಿಐ
Published 9 ಫೆಬ್ರುವರಿ 2019, 15:56 IST
Last Updated 9 ಫೆಬ್ರುವರಿ 2019, 15:56 IST
ಶಶಿಕುಮಾರ್‌ ಮುಕುಂದ್‌
ಶಶಿಕುಮಾರ್‌ ಮುಕುಂದ್‌   

ಚೆನ್ನೈ: ಅಗ್ರಶ್ರೇಯಾಂಕದ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಚೆನ್ನೈ ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಆಘಾತ ಕಂಡಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪೈಪೋಟಿಯಲ್ಲಿ ಶ್ರೇಯಾಂಕ ರಹಿತ ಆಟಗಾರ ಆ್ಯಂಡ್ರ್ಯೂ ಹ್ಯಾರಿಸ್‌ 6–4, 3–6, 6–0ರಲ್ಲಿ ಪ್ರಜ್ಞೇಶ್‌ ಅವರನ್ನು ಸೋಲಿಸಿದರು.

ಭಾರತದ ಪ್ರಮುಖ ಸಿಂಗಲ್ಸ್‌ ಆಟಗಾರ ಪ್ರಜ್ಞೇಶ್‌, ಮೊದಲ ಸೆಟ್‌ನಲ್ಲಿ ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ ಮತ್ತು ವಿನ್ನರ್‌ಗಳನ್ನು ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು.

ADVERTISEMENT

ಆದರೆ ಎರಡನೇ ಸೆಟ್‌ನಲ್ಲಿ ಆಸ್ಟ್ರೇಲಿಯಾದ ಹ್ಯಾರಿಸ್‌ ಮೋಡಿ ಮಾಡಿದರು. ಬೇಸ್‌ಲೈನ್‌ ಮತ್ತು ಗ್ರೌಂಡ್‌ಸ್ಟ್ರೋಕ್‌ ಹೊಡೆತಗಳ ಮೂಲಕ ಭಾರತದ ಆಟಗಾರನಿಗೆ ಆಘಾತ ನೀಡಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲೂ ಅಲೆಕ್ಸಾಂಡರ್‌ ಮಿಂಚಿದರು. ತಮ್ಮ ಸರ್ವ್‌ ಉಳಿಸಿಕೊಳ್ಳುವ ಜೊತೆಗೆ ಭಾರತದ ಆಟಗಾರನ ಎಲ್ಲಾ ಸರ್ವ್‌ಗಳನ್ನೂ ಮುರಿದ ಅವರು ಏಕಪಕ್ಷೀಯವಾಗಿ ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ 16ನೇ ಶ್ರೇಯಾಂಕದ ಆಟಗಾರ ಶಶಿಕುಮಾರ್‌ ಮುಕುಂದ್‌ 6–3, 4–6, 2–6ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಕೋರೆಂಟಿನ್‌ ಮೌಟೆಟ್‌ ಎದುರು ಪರಾಭವಗೊಂಡರು.

ಮೊದಲ ಸೆಟ್‌ನಲ್ಲಿ ನಿರಾಸೆ ಕಂಡ ಫ್ರಾನ್ಸ್‌ನ ಮೌಟೆಟ್‌ ನಂತರದ ಎರಡೂ ಸೆಟ್‌ಗಳಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿ ಗೆಲುವಿನ ತೋರಣ ಕಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.