ADVERTISEMENT

ಟೆನಿಸ್‌: ಸೆಮಿಗೆ ಜೊಕೊವಿಚ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 19:45 IST
Last Updated 17 ಆಗಸ್ಟ್ 2019, 19:45 IST
ಲುಕಾಸ್‌ ಪೌವಿಲ್‌ ಎದುರಿನ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಸರ್ವ್‌ ಮಾಡಿದ ರೀತಿ –ಎಪಿ/ಪಿಟಿಐ ಚಿತ್ರ
ಲುಕಾಸ್‌ ಪೌವಿಲ್‌ ಎದುರಿನ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಸರ್ವ್‌ ಮಾಡಿದ ರೀತಿ –ಎಪಿ/ಪಿಟಿಐ ಚಿತ್ರ   

ಸಿನ್ಸಿನಾಟಿ (ಎಎಫ್‌ಪಿ): ಸರ್ಬಿಯಾದ ನೊವಾಕ್‌ ಜೊಕೊವಿಚ್‌, ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸೆಂಟರ್‌ ಕೋರ್ಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೊವಿಚ್‌ 7–6, 6–1 ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಲುಕಾಸ್‌ ಪೌವಿಲ್‌ ಎದುರು ಗೆದ್ದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ನೊವಾಕ್‌, ಮೊದಲ ಸೆಟ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ಆದರೆ ಎರಡನೇ ಸೆಟ್‌ನಲ್ಲಿ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

ADVERTISEMENT

ನಾಲ್ಕರ ಘಟ್ಟದ ಹೋರಾಟದಲ್ಲಿ ನೊವಾಕ್‌, ರಷ್ಯಾದ ಡೇನಿಯಲ್‌ ಮೆಡ್ವೆಡೇವ್‌ ಎದುರು ಸೆಣಸಲಿದ್ದಾರೆ.

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಒಂಬತ್ತನೇ ಶ್ರೇಯಾಂಕದ ಆಟಗಾರ ಡೇನಿಯಲ್‌ 6–2, 6–3ರಲ್ಲಿ ಆ್ಯಂಡ್ರೆ ರುಬ್ಲೇವ್‌ ಅವರನ್ನು ಮಣಿಸಿದರು.

ಮತ್ತೊಂದು ಪಂದ್ಯದಲ್ಲಿ ಫ್ರಾನ್ಸ್‌ನ ರಿಚರ್ಡ್‌ ಗ್ಯಾಸ್ಕ್ವೆಟ್‌ 7–6, 3–6, 6–2ರಲ್ಲಿ ರಾಬರ್ಟೊ ಬಟಿಸ್ಟಾ ಅಗತ್‌ ಎದುರು ಗೆದ್ದರು.

ವೀನಸ್‌ಗೆ ಸೋಲುಣಿಸಿದ ಕೀಸ್‌: ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಅಮೆರಿಕದ ಮ್ಯಾಡಿಸನ್ ಕೀಸ್‌ ಸೆಮಿಫೈನಲ್‌ ಪ್ರವೇಶಿಸಿದರು.

ಕ್ವಾರ್ಟರ್‌ ಫೈನಲ್‌ನಲ್ಲಿ ಮ್ಯಾಡಿಸನ್‌ 6–2, 6–3 ನೇರ ಸೆಟ್‌ಗಳಿಂದ ವೀನಸ್‌ ವಿಲಿಯಮ್ಸ್‌ಗೆ ಆಘಾತ ನೀಡಿದರು.

ಸೋಫಿಯಾ ಕೆನಿನ್‌ ಎದುರಿನ ಹೋರಾಟದ ಮೂರನೇ ಸೆಟ್‌ ವೇಳೆ ಗಾಯಗೊಂಡ ಜಪಾನ್‌ನ ನವೊಮಿ ಒಸಾಕ ಪಂದ್ಯದಿಂದ ಹಿಂದೆ ಸರಿದರು.

ಮೊದಲ ಸೆಟ್‌ನಲ್ಲಿ ಸೋತಿದ್ದ ಒಸಾಕ, ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ್ದರು.

ಇತರ ಪಂದ್ಯಗಳಲ್ಲಿ ಆ್ಯಷ್ಲೆ ಬಾರ್ಟಿ 5–7, 6–2, 6–0ರಲ್ಲಿ ಮರಿಯಾ ಸಕ್ಕಾರಿ ಎದುರೂ, ಸ್ವೆಟ್ಲಾನ ಕುಜ್ನೆತ್ಸೋವಾ 3–6, 7–6, 6–3ರಲ್ಲಿ ಕ್ಯಾರೋಲಿನ ಪ್ಲಿಸ್ಕೋವಾ ವಿರುದ್ಧವೂ ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.