ADVERTISEMENT

ರ‍್ಯಾಂಕಿಂಗ್‌: ಪೀಟ್‌ ಸಾಂಪ್ರಾಸ್‌ ದಾಖಲೆ ಸಮಗಟ್ಟಿದ ಜೊಕೊವಿಚ್‌

ರಾಯಿಟರ್ಸ್
Published 7 ನವೆಂಬರ್ 2020, 14:55 IST
Last Updated 7 ನವೆಂಬರ್ 2020, 14:55 IST
ನೊವಾಕ್‌ ಜೊಕೊವಿಚ್‌–ರಾಯಿಟರ್ಸ್ ಚಿತ್ರ
ನೊವಾಕ್‌ ಜೊಕೊವಿಚ್‌–ರಾಯಿಟರ್ಸ್ ಚಿತ್ರ   

ಬೆಲ್‌ಗ್ರೇಡ್‌: ಎಟಿಪಿ ಸಿಂಗಲ್ಸ್ ವಿಭಾಗದ ರ‍್ಯಾಂಕಿಂಗ್‌ನಲ್ಲಿ ಆರು ವರ್ಷಾಂತ್ಯಗಳು ಅಗ್ರಸ್ಥಾನದಲ್ಲಿದ್ದ ಸರ್ಬಿಯಾ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ದಿಗ್ಗಜ ಪೀಟ್‌ ಸಾಂಪ್ರಾಸ್‌ ಅವರ ದಾಖಲೆ ಸರಿಗಟ್ಟಿದ್ದಾರೆ. ಜೊಕೊವಿಚ್‌ ಅವರ ಸಮೀಪದ ಪ್ರತಿಸ್ಪರ್ಧಿ ರಫೆಲ್‌ ನಡಾಲ್‌ ಅವರು ಮುಂದಿನ ವಾರದಿಂದ ಆರಂಭವಾಗುವ ಸೋಫಿಯಾ ಟೂರ್ನಿಯಿಂದ ಹೊಗುಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ ಜೊಕೊವಿಚ್‌ ಅಗ್ರಸ್ಥಾನ ಅಬಾಧಿತವಾಗಿದೆ.

2011, 2012, 2014, 2015 ಮತ್ತು 2018 ಹಾಗೂ 2020ರ ವರ್ಷಗಳನ್ನು ಮೊದಲ ರ‍್ಯಾಂಕಿಂಗ್‌ನಲ್ಲಿ ಕೊನೆಗೊಳಿಸಿದ ಜೊಕೊವಿಚ್‌ ಈ ಸಾಧನೆ ಮಾಡಿದ್ದಾರೆ. ಅಮೆರಿಕದ ಸಾಂಪ್ರಾಸ್‌ ಅವರು 1993ರಿಂದ 1998ರವರೆಗೆ ಸತತ ಆರು ವರ್ಷಗಳನ್ನು ಅಗ್ರಸ್ಥಾನದಲ್ಲಿ ಅಂತ್ಯಗೊಳಿಸಿದ್ದರು.

20 ಗ್ರ್ಯಾನ್‌ಸ್ಲಾಮ್‌ ವಿಜೇತ, ಸ್ಪೇನ್‌ ಆಟಗಾರ ನಡಾಲ್‌ ಸದ್ಯ ಎರಡನೇ ರ‍್ಯಾಂಕ್‌ನಲ್ಲಿದ್ದು, ವರ್ಷಾಂತ್ಯದಲ್ಲಿ ಜೊಕೊವಿಚ್‌ ಅವರಿಂದ ಅಗ್ರಸ್ಥಾನ ಕಸಿದುಕೊಳ್ಳುವ ಅವಕಾಶ ಇತ್ತು.

ADVERTISEMENT

‘ಬಾಲ್ಯದಿಂದಲೂ ಸಾಂಪ್ರಾಸ್‌ ಅವರ ಆಟವನ್ನು ನೋಡುತ್ತ ಬೆಳೆದಿದ್ದೇನೆ. ಈ ಸಾಧನೆ ಮಾಡಿದ್ದು ನನ್ನ ಕನಸು ನನಸಾದಂತಾಗಿದೆ‘ ಎಂದು ಜೊಕೊವಿಚ್ ಹೇಳಿದ್ದಾರೆ.

ಈ ವರ್ಷ ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದ ಜೊಕೊವಿಚ್‌, ಸಿನ್ಸಿನಾಟಿ ಹಾಗೂ ರೋಮ್‌ನಲ್ಲಿ ಎಟಿಪಿ ಮಾಸ್ಟರ್ಸ್‌ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದರು.

ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ವಾರಗಳ ಕಾಲ ಅಗ್ರಸ್ಥಾನ ಅಲಂಕರಿಸಿದ್ದ, ಪೀಟ್‌ ಸಾಂಪ್ರಾಸ್‌ ಅವರ ದಾಖಲೆಯನ್ನು ಜೊಕೊವಿಚ್‌ ಅಳಿಸಿಹಾಕಿದ್ದರು. ಸದ್ಯ ಜೊಕೊವಿಚ್‌ ಅಗ್ರಸ್ಥಾನದಲ್ಲಿದ್ದು 293 ವಾರಗಳು ಕಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.