ADVERTISEMENT

ವಿದಾಯದ ಫ್ರೆಂಚ್‌ ಓಪನ್: ನಡಾಲ್ ಎದುರಾಳಿ ಜ್ವರೇವ್

​ಪ್ರಜಾವಾಣಿ ವಾರ್ತೆ
Published 23 ಮೇ 2024, 20:12 IST
Last Updated 23 ಮೇ 2024, 20:12 IST
ರಫೆಲ್ ನಡಾಲ್
ರಫೆಲ್ ನಡಾಲ್   

ಪ್ಯಾರಿಸ್‌: ಹಾಲಿ ಚಾಂಪಿಯನ್‌ ರಫೆಲ್ ನಡಾಲ್ ಅವರು ತಮ್ಮ ವಿದಾಯದ ಫ್ರೆಂಚ್‌ ಓಪನ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದ ಆಟಗಾರ ಅಲೆಕ್ಸಾಂಡರ್‌ ಜ್ವರೇವ್‌ ಅವರನ್ನು ಎದುರಿಸಲಿದ್ದಾರೆ. ಮಹಿಳೆಯರ ವಿಭಾಗದ  ಹಾಲಿ ಚಾಂಪಿಯನ್ ಇಗಾ ಶ್ವಾಂಟೆಕ್ (ಪೋಲೆಂಡ್‌) ಅವರಿಗೆ ಎರಡನೇ ಸುತ್ತಿನ ಸಂಭಾವ್ಯ ಎದುರಾಳಿ ಜಪಾನ್‌ನ ನವೊಮಿ ಒಸಾಕ.

24 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಜಯಿಸಿರುವ ನೊವಾಕ್ ಜೊಕೊವಿಚ್‌ ಅವರು ಮೊದಲ ಪಂದ್ಯದಲ್ಲಿ ಫ್ರಾನ್ಸ್‌ನ ಪಿಯರೆ ಹ್ಯೂಸ್‌ ಹರ್ಬರ್ಟ್‌ ಅವರನ್ನು ಎದುರಿಸಲಿದ್ದಾರೆ. ಗುರುವಾರ ಮುಖಾ ಮುಖಿಯ ‘ಡ್ರಾ’ಗಳನ್ನು ಎತ್ತಲಾಯಿತು.

ರೋಲಂಡ್‌ ಗ್ಯಾರೋಸ್‌ನಲ್ಲಿ 14 ಬಾರಿ ಟ್ರೋಫಿ ಎತ್ತಿಹಿಡಿದಿರುವ ನಡಾಲ್‌ ಈ ಬಾರಿ ಇಲ್ಲಿ ಶ್ರೇಯಾಂಕರಹಿತ ಆಟಗಾರ. ಗಾಯಾಳಾಗಿ ಹಲವು ಟೂರ್ನಿಗಳನ್ನು ಕಳೆದುಕೊಂಡಿರುವ ಕಾರಣ ಅವರ ರ‍್ಯಾಂಕಿಂಗ್ ಈಗ 276ಕ್ಕೆ ಕುಸಿದಿದೆ. 2022ರ ಚಾಂಪಿಯನ್‌ಷಿಪ್‌ ಸೆಮಿ ಫೈನಲ್‌ನಲ್ಲಿ ನಡಾಲ್– ಜ್ವರೇವ್ ಮುಖಾಮುಖಿ ಆಗಿದ್ದರು.

ADVERTISEMENT

ಆಗ ಪಾದದ ನೋವಿನಿಂದ ಜ್ವರೇವ್ ಅರ್ಧದಲ್ಲೇ ನಿವೃತ್ತರಾಗಿದ್ದರು. ನಡಾಲ್ ಒಟ್ಟಾರೆ ಮುಖಾಮುಖಿಯಲ್ಲಿ 27 ವರ್ಷದ ಜ್ವರೇವ್ ವಿರುದ್ಧ 7–3 ಗೆಲುವಿನ ದಾಖಲೆ ಹೊಂದಿದ್ದಾರೆ.

ನಡಾಲ್ ಮುಂದಿನ ವಾರ 38ನೇ ಜನ್ಮದಿನ ಆಚರಿಸಲಿದ್ದು, ಇದು ತಮ್ಮ ವೃತ್ತಿಜೀವನದ ಕೊನೆಯ ವರ್ಷ ಎಂದು ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ನಡಾಲ್‌ 112 ಗೆಲುವು, ಕೇವಲ ಮೂರು ಸೋಲು ಕಂಡಿದ್ದಾರೆ. ಇವುಗಳಲ್ಲಿ ಎರಡು ಜೊಕೊವಿಚ್‌ ವಿರುದ್ಧ ಬಂದಿತ್ತು.

ಬುಧವಾರ 37ನೇ ವರ್ಷಕ್ಕೆ ಕಾಲಿಟ್ಟ ಸರ್ಬಿಯಾದ ಜೊಕೊ ಇಲ್ಲಿ ನಾಲ್ಕನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಜಿನೇವಾ ಟೂರ್ನಿಯಲ್ಲಿ ಈಚೆಗೆ ಜೊಕೊ ವೃತ್ತಿ ಜೀವನದ 1,100ನೇ ಪಂದ್ಯ ಗೆದ್ದಿದ್ದರು.

ವಿಶ್ವದ ಎರಡನೇ ಕ್ರಮಾಂಕದ ಯಾನಿಕ್ ಸಿನ್ನರ್, ಅಮೆರಿಕದ ಕ್ರಿಸ್ಟೋಫರ್‌ ಯುಬಾಂಕ್ಸ್‌ ವಿರುದ್ಧ, ಮೂರನೇ ಶ್ರೇಯಾಂಕದ ಕಾರ್ಲೊಸ್‌ ಅಲ್ಕರಾಜ್, ಅರ್ಹತಾ ಸುತ್ತಿನಿಂದ ಬರುವ ಆಟಗಾರನನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.