ADVERTISEMENT

ಕೆರ್ಬರ್‌ಗೆ ಆಘಾತ ನೀಡಿದ ಪೊಟಪೋವಾ

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ರೋಜರ್‌ ಫೆಡರರ್‌ ಶುಭಾರಂಭ

ಏಜೆನ್ಸೀಸ್
Published 26 ಮೇ 2019, 20:00 IST
Last Updated 26 ಮೇ 2019, 20:00 IST
ಜರ್ಮನಿಯ ಏಂಜಲಿಕ್ ಕೆರ್ಬರ್‌ ಬಾರಿಸಿದ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ಅನಸ್ತೇಸಿಯಾ ‍ಪೊಟಪೋವಾ –ರಾಯಿಟರ್ಸ್‌ ಚಿತ್ರ
ಜರ್ಮನಿಯ ಏಂಜಲಿಕ್ ಕೆರ್ಬರ್‌ ಬಾರಿಸಿದ ಚೆಂಡನ್ನು ಹಿಂತಿರುಗಿಸಲು ಪ್ರಯತ್ನಿಸಿದ ಅನಸ್ತೇಸಿಯಾ ‍ಪೊಟಪೋವಾ –ರಾಯಿಟರ್ಸ್‌ ಚಿತ್ರ   

ಪ್ಯಾರಿಸ್‌ : ರಷ್ಯಾದ ಯುವ ಆಟಗಾರ್ತಿ ಅನಸ್ತೇಸಿಯಾ ಪೊಟಪೋವಾ, ಫಿಲಿಪ್‌ ಚಾಟ್ರಿಯರ್‌ ಅಂಗಳದಲ್ಲಿ ಭಾನುವಾರ ವೃತ್ತಿಬದುಕಿನ ಸ್ಮರಣೀಯ ಗೆಲುವು ದಾಖಲಿಸಿದರು.

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ದಿನ, 18 ವರ್ಷ ವಯಸ್ಸಿನ ಪೊಟಪೋವಾ ಅಚ್ಚರಿಯ ಫಲಿತಾಂಶ ನೀಡಿ ಟೆನಿಸ್‌ ಲೋಕದ ಗಮನ ಸೆಳೆದರು.

ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಅವರು 6–4, 6–2 ನೇರ ಸೆಟ್‌ಗಳಿಂದ ಜರ್ಮನಿಯ ಏಂಜಲಿಕ್‌ ಕೆರ್ಬರ್‌ಗೆ ಆಘಾತ ನೀಡಿದರು.

ADVERTISEMENT

31 ವರ್ಷ ವಯಸ್ಸಿನ ಕೆರ್ಬರ್‌, ಹೋದ ವರ್ಷ ನಡೆದಿದ್ದ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಆಸ್ಟ್ರೇಲಿಯಾ ಮತ್ತು ಅಮೆರಿಕ ಓಪನ್‌ಗಳಲ್ಲೂ ಚಾಂಪಿಯನ್‌ ಆಗಿದ್ದರು.

ಮೊದಲ ಸಲ ಗ್ರ್ಯಾನ್‌ಸ್ಲಾಮ್‌ ಟೂರ್ನಿಯ ಮುಖ್ಯ ಸುತ್ತಿನಲ್ಲಿ ಆಡಿದ ಪೊಟಪೋವಾ, ಶರವೇಗದ ಸರ್ವ್‌ ಮತ್ತು ಬಲಿಷ್ಠ ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಐದನೇ ಶ್ರೇಯಾಂಕದ ಕೆರ್ಬರ್‌ ಅವರನ್ನು ಕಂಗೆಡಿಸಿದರು. 28 ವಿನ್ನರ್‌ಗಳನ್ನು ಸಿಡಿಸಿ ಸಂಭ್ರಮಿಸಿದರು.

‘ಕೆರ್ಬರ್‌ ನನ್ನ ನೆಚ್ಚಿನ ಆಟಗಾರ್ತಿ. ಅವರ ಆಟವನ್ನು ನೋಡುತ್ತಾ ಬೆಳೆದವಳು, ಇಂದು ಅವರನ್ನೇ ಮಣಿಸಿದ್ದೇನೆ. ಇದು ಕನಸೋ, ನನಸೋ ಎಂಬುದು ತಿಳಿಯುತ್ತಿಲ್ಲ. ಈ ಸಂತಸವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ’ ಎಂದು ಪೊಟಪೋವಾ ಖುಷಿ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಆಟಗಾರ್ತಿ 2016ರ ಜೂನಿಯರ್‌ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ 5–7, 6–2, 6–2ರಲ್ಲಿ ಅಮೆರಿಕದ ಟೇಲರ್‌ ಟೌನ್‌ಸೆಂಡ್‌ ಅವರನ್ನು ಮಣಿಸಿದರು.

ಟೂರ್ನಿಯಲ್ಲಿ 19ನೇ ಶ್ರೇಯಾಂಕ ಹೊಂದಿರುವ ಮುಗುರುಜಾ ಮೊದಲ ಸೆಟ್‌ನಲ್ಲಿ ಮುಗ್ಗರಿಸಿದರು. ಇದರಿಂದ ವಿಶ್ವಾಸ ಕಳೆದುಕೊಳ್ಳದ ಅವರು ನಂತರದ ಎರಡು ಸೆಟ್‌ಗಳಲ್ಲಿ ಮಿಂಚಿನ ಸಾಮರ್ಥ್ಯ ತೋರಿ ಅಭಿಮಾನಿಗಳನ್ನು ರಂಜಿಸಿದರು.

ಇತರ ಪಂದ್ಯಗಳಲ್ಲಿ ಬೆಲಿಂದಾ ಬೆನ್‌ಸಿಸ್‌ 6–1, 6–4ರಲ್ಲಿ ಜೆಸ್ಸಿಕಾ ಪೊಂಚೆಟ್‌ ಎದುರೂ, ಲೌರಾ ಸಿಗ್ಮಂಡ್‌ 6–3, 6–3ರಲ್ಲಿ ಸೋಫಿಯಾ ಜುಕ್‌ ಮೇಲೂ, ಕ್ಯಾತರಿನಾ ಕೊಜ್ಲೊವಾ 6–2, 7–6ರಲ್ಲಿ ಬರ್ನಾರ್ಡ ಪೆರಾ ವಿರುದ್ಧವೂ ವಿಜಯಿಯಾದರು.

ಫೆಡರರ್ ಶುಭಾರಂಭ: ನಾಲ್ಕು ವರ್ಷಗಳ ನಂತರ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಕಣಕ್ಕಿಳಿದಿರುವ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌, ಶುಭಾರಂಭ ಮಾಡಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಫೆಡರರ್ 6–2, 6–4, 6–4ರಲ್ಲಿ ಇಟಲಿಯ ಲೊರೆಂಜೊ ಸೊನೆಗೊ ಅವರನ್ನು ಸೋಲಿಸಿದರು.

ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರ ಹೋರಾಟ ಮೊದಲ ಸುತ್ತಿನಲ್ಲೇ ಮುಕ್ತಾಯವಾಯಿತು.

ಪ್ರಜ್ಞೇಶ್‌ 1–6, 3–6, 1–6ರಲ್ಲಿ ಹ್ಯೂಗೊ ಡೆಲಿನ್‌ ಎದುರು ಸೋತರು.

ಜಪಾನ್‌ನ ಕೀ ನಿಶಿಕೋರಿ 6–2, 6–3, 6–4ರಲ್ಲಿ ಕ್ವೆಂಟಿನ್‌ ಹೆಲಿಸ್‌ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.

ನಿಕೋಲಸ್‌ ಮಹುತ್‌ ಮತ್ತು ಮಾರ್ಕೊ ಸೆಚ್ಚಿನಾಟೊ ನಡುವಣ ಮ್ಯಾರಥಾನ್‌ ಹೋರಾಟದಲ್ಲಿ ಮಹುತ್‌ 2–6, 6–7, 6–4, 6–2, 6–4ರಿಂದ ಗೆದ್ದರು.

ಇತರ ಪಂದ್ಯಗಳಲ್ಲಿ ಸ್ಟೆಫಾನೊಸ್‌ ಸಿತಿಪಸ್‌ 6–2, 6–2, 7–6ರಲ್ಲಿ ಮ್ಯಾಕ್ಸಿಮಿಲಿಯನ್‌ ಮರ್ಟೆರರ್‌ ಎದುರೂ, ಆಸ್ಕರ್‌ ಒಟ್ಟೆ 6–3, 6–1, 4–6, 6–0ರಲ್ಲಿ ಮಲೆಕ್‌ ಜಜಿರಿ ಮೇಲೂ, ಗ್ರಿಗರ್‌ ಡಿಮಿಟ್ರೊವ್‌ 6–3, 6–0, 3–6, 6–7, 6–4ರಲ್ಲಿ ಜಾಂಕೊ ತಿಪ್ಸರೆವಿಚ್‌ ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.