ADVERTISEMENT

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸ್ವಾಟೆಕ್ ಜನ್ಮದಿನಕ್ಕೆ ಜಯದ ಸಂಭ್ರಮ

ಡ್ಯಾನಿಯಲ್ ಮೆಡ್ವೆಡೆವ್‌ಗೆ ‘ಮೊದಲ’ ಗೆಲುವು

ಏಜೆನ್ಸೀಸ್
Published 31 ಮೇ 2021, 15:04 IST
Last Updated 31 ಮೇ 2021, 15:04 IST
ಇಗಾ ಸ್ವಾಟೆಕ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ರಾಯಿಟರ್ಸ್ ಚಿತ್ರ
ಇಗಾ ಸ್ವಾಟೆಕ್ ಚೆಂಡನ್ನು ರಿಟರ್ನ್ ಮಾಡಿದ ರೀತಿ –ರಾಯಿಟರ್ಸ್ ಚಿತ್ರ   

ಪ್ಯಾರಿಸ್: ಹಾಲಿ ಚಾಂಪಿಯನ್, ಪೋಲೆಂಡ್‌ನ ಇಗಾ ಸ್ವಾಟೆಕ್ ಅವರು ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದರು. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ತಮ್ಮ ಆತ್ಮೀಯ ಗೆಳತಿ, ಸ್ಲೊವೇನಿಯಾದ ಕಾಜಾ ಜುವಾನ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಅವರು ಎರಡನೇ ಸುತ್ತು ಪ್ರವೇಶಿಸಿದರು.

ಸೋಮವಾರ 20ನೇ ಜನ್ಮದಿನ ಆಚರಿಸಿದ ಸ್ವಾಟೆಕ್ ಎದುರಾಳಿಯನ್ನು 6-0, 7-5ರಲ್ಲಿ ಸೋಲಿಸಿದರು. ಪಂದ್ಯದ ನಂತರ ಅವರಿಗೆ ಹೂಗುಚ್ಛ ನೀಡಿ ಜನ್ಮದಿನದ ಶುಭಾಶಯ ಕೋರಲಾಯಿತು.

ಎಂಟನೇ ಶ್ರೇಯಾಂಕದ ಸ್ವಾಟೆಕ್ ಮೊದಲ ಸೆಟ್‌ನಲ್ಲಿ ಎದುರಾಳಿಗೆ ಒಂದು ಗೇಮ್ ಕೂಡ ಬಿಟ್ಟುಕೊಡಲಿಲ್ಲ. ಆದರೆ ಎರಡನೇ ಸೆಟ್‌ನಲ್ಲಿ ಚೇತರಿಸಿಕೊಂಡ ಜುವಾನ್ ಪ್ರಬಲ ಪೈಪೋಟಿ ನೀಡಿದರು. 3–1ರ ಹಿನ್ನಡೆಯಲ್ಲಿದ್ದಾಗ ತಿರುಗೇಟು ನೀಡಿದ ಅವರು ಕೆಲವು ಗೇಮ್‌ಗಳಲ್ಲಿ ಆಧಿಪತ್ಯ ಸ್ಥಾಪಿಸಿದರು. ಆದರೆ ನಂತರ ಎರಡು ಬ್ರೇಕ್ ಪಾಯಿಂಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದರು. ನಂತರದ ಗೇಮ್‌ನಲ್ಲಿ 0–40ರ ಹಿನ್ನಡೆಯಿಂದ ಅಮೋಘ ಚೇತರಿಕೆ ಕಂಡ ಸ್ವಾಟೆಕ್ ಗೆಲುವಿನತ್ತ ಸಾಗಿದರು.

ADVERTISEMENT

ಮಹಿಳೆಯರ ವಿಭಾಗದ ಮತ್ತೊಂದು ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಕಿಕಿ ಬರ್ಟನ್ಸ್‌ 6-1, 3-6, 6-4ರಲ್ಲಿ ಸ್ಲೊವೇನಿಯಾದ ಪೊಲೊನಾ ಹೆರ್ಕಾಗ್‌ ವಿರುದ್ಧ ಜಯ ಗಳಿಸಿದರು.

ಮೆಡ್ವೆಡೆವ್‌ಗೆ ‘ಮೊದಲ’ ಗೆಲುವು
ಎರಡನೇ ಶ್ರೇಯಾಂಕದ ರಷ್ಯಾ ಆಟಗಾರ ಡ್ಯಾನಿಯಲ್ ಮೆಡ್ವೆಡೆವ್ ಅವರು ರೊಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಜಯದ ಸಂಭ್ರಮ ಅನುಭವಿಸಿದರು. ಹಿಂದಿನ ನಾಲ್ಕು ಬಾರಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಮೆಡ್ವೆಡೆವ್‌ ಸೋಮವಾರ ನಡೆದ ಪಂದ್ಯದಲ್ಲಿ6-3, 6-3, 7-5ರಲ್ಲಿ ಕಜಕಸ್ತಾನದ ಅಲೆಕ್ಸಾಂಡರ್ ಬುಬ್ಲಿಕ್ ವಿರುದ್ಧ ಜಯ ಗಳಿಸಿದರು.

ಇತರ ಪಂದ್ಯಗಳ ಫಲಿತಾಂಶಗಳು
ಸರ್ಬಿಯಾದ ಫಿಲಿಪ್ ಕ್ರಾಜಿನೊವಿಚ್‌ಗೆ ಜರ್ಮನಿಯ ಮ್ಯಾಕ್ಸಿಮಿಲಿಯನ್ ಎದುರು 6-4, 6-1, 7-6 (7/3)ರಲ್ಲಿ ಗೆಲುವು; ಅಮೆರಿಕದ ಜಾನ್ ಇಸ್ನೇರ್‌ಗೆ ತಮ್ಮದೇ ದೇಶದ ಸ್ಯಾಮ್ ಕೆರಿ ವಿರುದ್ಧ 7-6 (7/2), 6-3, 6-4ರಲ್ಲಿ ಜಯ; ಬ್ರೆಜಿಲ್‌ನ ಥಿಯಾಗೊ ಮೊಂಟೆರೊಗೆ ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೊಲೊ ವಿರುದ್ಧ 6-3, 6-4, 6-3ರಲ್ಲಿ ಜಯ.

ಅಮೆರಿಕದ ಮ್ಯಾಡಿಸನ್ ಬ್ರೆಂಗಲ್ಸ್‌ಗೆ ಕೊಲಂಬಿಯಾದ ಮರಿಯಾ ಕಮಿಲಾ ಎದುರು 7-5, 6-4ರಲ್ಲಿ, ‍ಫ್ರಾನ್ಸ್‌ನ ಹಾರ್ಮನಿ ಟ್ಯಾನ್‌ಗೆ ತಮ್ಮದೇ ದೇಶದ ಅಲಿಜ್ ಕಾರ್ನೆಟ್ ಎದುರು 6-4, 6-4ರಲ್ಲಿ, ಜೆಕ್ ಗಣರಾಜ್ಯದ ಮರ್ಕೆಟಾ ವೊಂಡ್ರೋಜಾಗೆ ಎಸ್ಟೊನಿಯಾದ ಕಿಯಾ ಕನೆಪಿ ವಿರುದ್ಧ 4-6, 6-3, 6-0ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.