ADVERTISEMENT

ಐಟಿಎಫ್‌ ಕಲಬುರಗಿ ಓಪನ್‌ ಟೆನಿಸ್‌ ಟೂರ್ನಿ: ಮುಖ್ಯ ಸುತ್ತಿಗೆ ರಿಷಿ, ಭರತ್‌

ಬಸವರಾಜ ದಳವಾಯಿ
Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಮವಾರ ಕರ್ನಾಟಕದ ರಿಷಿ ರೆಡ್ಡಿ ಆಟದ ವೈಖರಿ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಮವಾರ ಕರ್ನಾಟಕದ ರಿಷಿ ರೆಡ್ಡಿ ಆಟದ ವೈಖರಿ–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌   

ಕಲಬುರಗಿ: ಜಿದ್ದಾಜಿದ್ದಿಯ ಸ್ಪರ್ಧೆಯಲ್ಲಿ ಗೆದ್ದ ರಿಷಿ ರೆಡ್ಡಿ ಹಾಗೂ ಭರತ್‌ ನಿಶೋಕ್ ಕುಮಾರನ್ ಸೇರಿದಂತೆ ಭಾರತದ ಏಳು ಆಟಗಾರರು ಕಲಬುರಗಿ ಓಪನ್ ಟೆನಿಸ್ ಟೂರ್ನಿಯ ಮುಖ್ಯಸುತ್ತು ಪ್ರವೇಶಿಸಿದರು.

ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಟೂರ್ನಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಕರ್ನಾಟಕದ ರಿಷಿ 6–2, 7–6 (4)ರಿಂದ ತಮಿಳುನಾಡಿನ ಓಜಸ್‌ ತೇಜೊ ಜಯಪ್ರಕಾಶ್ ಅವರನ್ನು ಮಣಿಸಿದರು.

ಮೊದಲ ಸೆಟ್‌ನಲ್ಲಿ  ಸುಲಭ ಜಯಸಾಧಿಸಿದ  ರಿಷಿ ಅವರಿಗೆ ಎರಡನೇ ಸೆಟ್‌ನಲ್ಲಿ ಓಜಸ್‌ ಅವರಿಂದ ತೀವ್ರ ಪೈಪೋಟಿ ಎದುರಾಯಿತು. ಈ ಸೆಟ್‌ನ ಮೊದಲ ಗೇಮ್‌ ರಿಷಿ ಜಯಿಸಿದರು. ಆದರೆ, ಡ್ರಾಪ್‌ ಶಾಟ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದ ಓಜಸ್‌, ಎರಡು ಮತ್ತು ಮೂರನೇ ಗೇಮ್‌ಗಳನ್ನು ಒಲಿಸಿಕೊಂಡರು. ನಾಲ್ಕನೇ ಗೇಮ್‌ ರಿಷಿ ಪಾಲಾಯಿತು. 

ADVERTISEMENT

ಕರಾರುವಾಕ್ ಹೊಡೆತಗಳನ್ನು ಪ್ರಯೋಗಿಸಿದ ಓಜಸ್‌, ಐದು ಮತ್ತು ಆರನೇ ಗೇಮ್‌ಗಳನ್ನು ಗೆದ್ದು 4–2ರ ಮುನ್ನಡೆ ಸಾಧಿಸಿದರು. ಇಬ್ಬರೂ ಆಕರ್ಷಕ ಸರ್ವ್‌ಗಳನ್ನು ಪ್ರಯೋಗಿಸಿದರು. ಬಳಿಕ ರಿಷಿ ಕೂಡ ಸತತ ಎರಡು ಗೇಮ್‌ (7 ಮತ್ತು 8ನೇ) ತಮ್ಮದಾಗಿಸಿಕೊಂಡರು. ಸ್ಕೋರ್ 4–4ರಿಂದ ಸಮಬಲವಾಯಿತು. ಸೋಲೊಪ್ಪಿಕೊಳ್ಳದ ಮನೋಭಾವ ಇಬ್ಬರಲ್ಲೂ ಕಂಡುಬಂತು. ಒಂಬತ್ತನೇ ಗೇಮ್‌ ಓಜಸ್‌, 10 ಮತ್ತು 11ನೇ ಗೇಮ್‌ ರಿಷಿ ಮತ್ತು 12ನೇ ಗೇಮ್‌ ಓಜಸ್‌ ಜಯಿಸಿದರು. ಕೊನೆಗೆ ಟೈಬ್ರೇಕರ್‌ನ ಒತ್ತಡ ಮೀರುವಲ್ಲಿ ರಿಷಿ ಯಶಸ್ವಿಯಾದರು. 1 ತಾಸು 58 ನಿಮಿಷಗಳ ಕಾಲ ಈ ಹಣಾಹಣಿ ನಡೆಯಿತು.

ಅರ್ಹತಾ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಭರತ್‌ 6–3, 6–1ರಿಂದ ತುಷಾರ್ ಮದನ್ ಎದುರು, ಶಿವಾಂಕ್ ಭಟ್ನಾಗರ್ 7–6 (5), 4–6, 12–10ರಿಂದ ಪಾರ್ಥ್ ಅಗರವಾಲ್ ವಿರುದ್ಧ, ಆರ್ಯನ್ ಶಾ 6–2, 6–2ರಿಂದ ಸಂದೇಶ್ ಕುರಳೆ ಎದುರು, ಅಜಯ್ ಮಲಿಕ್ 6–4, 6–4ರಿಂದ ನೇಪಾಳದ ಅಭಿಷೇಕ್ ಬಸ್ತೋಲಾ ಎದುರು, ಅರ್ಜುನ್ ಮಹದೇವನ್‌ 6–2, 6–2ರಿಂದ ಯಶ್ ಚೌರಾಸಿಯಾ ಎದುರು, ವಿಯೆಟ್ನಾಂನ ಹಾ ಮಿನ್ ಡುಚ್ ವು 6–3, 6–3ರಿಂದ ಭಾರತದ ಮುನಿ ಅನಂತ ಮಣಿ ಎದುರು ಗೆದ್ದು ಮುಖ್ಯ ಸುತ್ತಿಗೆ ಮುನ್ನಡೆದರು.

ಧ್ರುವ ಹಿರ್ಪಾರ 6–0, 3–0ಯಿಂದ ಮುನ್ನಡೆಯಲ್ಲಿದ್ದಾಗ ಅವರ ಎದುರಾಳಿ ಯಶ್ ಯಾದವ್‌ ಗಾಯಗೊಂಡು ನಿವೃತ್ತಿಯಾದರು. ಇದರೊಂದಿಗೆ ಧ್ರುವ ಮುಖ್ಯ ಸುತ್ತಿಗೆ ಕಾಲಿಟ್ಟರು.

ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸೋಮವಾರ ಕರ್ನಾಟಕದ ರಿಷಿ ರೆಡ್ಡಿ ಆಟದ ವೈಖರಿ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.