ADVERTISEMENT

ಹಾಲ್ ಆಫ್‌ ಫೇಮ್‌ಗೆ ಶರಪೋವಾ: ಬ್ರಯನ್‌ ಬ್ರದರ್ಸ್ ಜೋಡಿಗೂ ಗೌರವ

ಏಜೆನ್ಸೀಸ್
Published 24 ಆಗಸ್ಟ್ 2025, 4:57 IST
Last Updated 24 ಆಗಸ್ಟ್ 2025, 4:57 IST
   

ಲಂಡನ್: ರಷ್ಯಾದ ಮರಿಯಾ ಶರಪೋವಾ ಹಾಗೂ ಅಮೆರಿಕದ ಡಬಲ್ಸ್‌ ಬ್ರದರ್ಸ್ ಖ್ಯಾತಿಯ ಬಾಬ್ ಮತ್ತು ಮೈಕ್ ಬ್ರಯನ್ ಅವರಿಗೆ ಅವರು ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವ ನೀಡಲಾಯಿತು. 

ಈ ಸಂದರ್ಭದಲ್ಲಿ ‘ವಾವ್, ಬಹಳಷ್ಟು ತ್ಯಾಗ ಮತ್ತು ಅಪಾರವಾದ ಕಠಿಣ ಪರಿಶ್ರಮ ಇದೆ’ ಎಂದು ಶರಪೋವಾ ಶುಕ್ರವಾರ ಸಂತಸ ವ್ಯಕ್ತಪಡಿಸಿದರು. 

ಅವರಿಗೆ ಶುಕ್ರವಾರ ರೋಡ್ ಐಲ್ಯಾಂಡ್‌ನ ನ್ಯೂಪೋರ್ಟ್‌ನಲ್ಲಿರುವ ಹಾಲ್‌ ಆಫ್‌ ಫೇಮ್  ಗೌರವ ಪಡೆದರು.

ADVERTISEMENT

ಶರಪೋವಾ 2004ರಲ್ಲಿ ಅವರು ವಿಂಬಲ್ಡನ್ ಫೈನಲ್‌ನಲ್ಲಿ ‘ಚಾಂಪಿಯನ್’ ಸೆರೆನಾ ವಿಲಿಯಮ್ಸ್‌ ಅವರನ್ನು ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಅದರೊಂದಿಗೆ ಅವರ ತಾರಾವರ್ಚಸ್ಸು ಬೆಳೆಯಲು ಆರಂಭಿಸಿತು. 2006ರಲ್ಲಿ ಅಮೆರಿಕ ಓಪನ್, 2008ರಲ್ಲಿ ಆಸ್ಟ್ರೇಲಿಯನ್ ಓಪನ್, 2012 ಹಾಗೂ 2014ರಲ್ಲಿ ಫ್ರೆಂಚ್ ಓಪನ್  ಪ್ರಶಸ್ತಿ ಗೆದ್ದರು. ಡಬ್ಲ್ಯುಟಿಎ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ರಷ್ಯಾದ ಮೊದಲ ಆಟಗಾರ್ತಿಯಾದರು. 

2008ರಲ್ಲಿ ಶರಪೋವಾ ಅವರ ನೆರವಿನಿಂದ ರಷ್ಯಾ ತಂಡವು ಬಿಲ್ಲಿ ಜೀನ್ ಕಿಂಗ್ ಕಪ್ ಗೆದ್ದಿತು. 2012ರ ಒಲಿಂಪಿಕ್ಸ್‌ ಟೆನಿಸ್ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದರು. ಅವರು ಟೆನಿಸ್ ಲೋಕದ ತಾರಾ ಆಟಗಾರ್ತಿಯಾಗಿ ಹಲವಾರು ಪ್ರತಿಷ್ಠಿತ ಉತ್ಪನ್ನಗಳ ಪ್ರಚಾರ ರಾಯಭಾರಿಯಾದರು. ತಮ್ಮ 15 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಗಾಯದ ಸಮಸ್ಯೆಯನ್ನೂ ಅನುಭವಿಸಿದರು. ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ 15 ತಿಂಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು. 2020ರಲ್ಲಿ ಟೆನಿಸ್‌ಗೆ ವಿದಾಯ ಘೋಷಿಸಿದ್ದರು. 

ಅಮೆರಿಕದ ಅವಳಿ ಸಹೋದರರಾದ ಬಾಬ್ ಮತ್ತು ಮೈಕ್ ಬ್ರಯನ್ ಅವರು ಪುರುಷರ ಡಬಲ್ಸ್‌ನಲ್ಲಿ 16 ಗ್ರ್ಯಾನ್‌ಸ್ಲಾಂ ಕಿರೀಟಗಳನ್ನು ಮುಡಿಗೇರಿಸಿಕೊಂಡ ದಾಖಲೆ ಹೊಂದಿದ್ದಾರೆ. ಸತತ 438 ವಾರಗಳವರೆಗೆ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದ ಜೋಡಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.