ADVERTISEMENT

ಸೆಮಿಫೈನಲ್‌ಗೆ ನಡಾಲ್‌, ಸ್ವಾರ್ಟ್ಜ್‌ಮನ್‌

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಡೊಮಿನಿಕ್‌ ಥೀಮ್‌ಗೆ ಆಘಾತ

ಏಜೆನ್ಸೀಸ್
Published 7 ಅಕ್ಟೋಬರ್ 2020, 12:11 IST
Last Updated 7 ಅಕ್ಟೋಬರ್ 2020, 12:11 IST
ರಫೆಲ್‌ ನಡಾಲ್‌ ಆಟದ ಶೈಲಿ–ರಾಯಿಟರ್ಸ್ ಚಿತ್ರ
ರಫೆಲ್‌ ನಡಾಲ್‌ ಆಟದ ಶೈಲಿ–ರಾಯಿಟರ್ಸ್ ಚಿತ್ರ   

ಪ್ಯಾರಿಸ್‌: ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ 13ನೇ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಪ್ರಶಸ್ತಿ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ. ಬುಧವಾರ ನಸುಕಿನ ಜಾವ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿಅವರು 7–6, 6–4, 6–1ರಿಂದ ಇಟಲಿಯ ಯುವ ಆಟಗಾರ ಜಾನಿಕ್ ಸಿನ್ನರ್‌ ಸವಾಲು ಮೀರಿದರು.

ಕೊರೆಯುವ ಚಳಿಯಲ್ಲಿ (ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು) ಇಬ್ಬರು ಆಟಗಾರರ ನಡುವಿನ ಆಟ ಬಿಸಿ ಹೆಚ್ಚಿಸಿತ್ತು. ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಆಡಿದ 100 ಪಂದ್ಯಗಳ ಪೈಕಿ ನಡಾಲ್‌ಗೆಇದು 98ನೇ ಗೆಲುವು.

ಪ‍ಂದ್ಯದಲ್ಲಿ ಸಿನ್ನರ್‌ ಅವರ ಬಲಿಷ್ಠ ಹೊಡೆತಗಳು ಗಮನಸೆಳೆದವು. ಫಿಲಿಪ್‌ ಚಾಟ್ರಿಯರ್‌ ಅಂಗಣದಲ್ಲಿ ನಡದ ಹಣಾಹಣಿಯ ಮೊದಲ ಸೆಟ್‌ನ ಐದನೇ ಗೇಮ್‌ನಲ್ಲಿ ಅವರು ಮೊದಲ ಬ್ರೇಕ್‌ ಪಾಯಿಂಟ್‌ ಗಳಿಸಿದರು. ಆದರೆ ಬಳಿಕ ಹಲವು ಲೋಪಗಳನ್ನು ಎಸಗಿದರು.

ADVERTISEMENT

ಒಂದು ಹಂತದಲ್ಲಿ 5–5ರಿಂದ ಸೆಟ್‌ ಸಮಬಲವಾಗಿತ್ತು. ಟೈಬ್ರೇಕ್‌ವರೆಗೆ ಸಾಗಿದ ಈ ಸೆಟ್‌ ವಶಪಡಿಸಿಕೊಳ್ಳುವಲ್ಲಿ ನಡಾಲ್‌ ಯಶಸ್ವಿಯಾದರು. ಎರಡನೇ ಸೆಟ್‌ನಲ್ಲೂ 19 ವರ್ಷದ ಸಿನ್ನರ್, 12 ಬಾರಿಯ ಫ್ರೆಂಚ್‌ ಓಪನ್‌ ಚಾಂಪಿಯನ್‌ಗೆ ಪ್ರಬಲ ಪೈಪೋಟಿಯನ್ನೇ ಒಡ್ಡಿದರು. ಆರಂಭದಲ್ಲಿ 3–1 ಗೇಮ್‌ಗಳ ಮುನ್ನಡೆಯಲ್ಲಿದ್ದರು. ಆದರೆ ನಡಾಲ್‌ ತಿರುಗೇಟು ನೀಡಿದರು.

ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಸ್ಪೇನ್‌ ಆಟಗಾರಮೂರನೇ ಸೆಟ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ಪಂದ್ಯ ಗೆದ್ದರು.ವಿಶ್ವ ರ‍್ಯಾಂಕಿಂಗ್‌ನಲ್ಲಿ 45ನೇ ಸ್ಥಾನದಲ್ಲಿರುವ ಸಿನ್ನರ್‌ ಅವರು ಇಲ್ಲಿ ಗೆದ್ದಿದ್ದರೆ, ಫ್ರೆಂಚ್‌ ಓಪನ್‌ ಟೂರ್ನಿಯ ಪದಾರ್ಪಣೆಯಲ್ಲೇ ಸೆಮಿಫೈನಲ್‌ ತಲುಪಿದ ಎರಡನೇ ಆಟಗಾರ ಎನಿಸಿಕೊಳ್ಳುವ ಅವಕಾಶವಿತ್ತು. 2005ರಲ್ಲಿ ನಡಾಲ್‌ ಈ ಸಾಧನೆ ಮಾಡಿದ್ದರು.

ನಡಾಲ್‌ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾದ ಡಿಗೊ ಸ್ವಾರ್ಟ್ಜ್‌ಮನ್‌ ಅವರನ್ನು ಎದುರಿಸಲಿದ್ದಾರೆ

ಥೀಮ್‌ ಮಣಿಸಿದ ಸ್ವಾರ್ಟ್ಜ್‌ಮನ್‌: ಅಮೆರಿಕ ಓಪನ್‌ ಚಾಂಪಿಯನ್‌, ಮೂರನೇ ಶ್ರೇಯಾಂಕದ ಡೊಮಿನಿಕ್‌ ಥೀಮ್‌ ಅವರಿಗೆ 7–6, 5–7, 6–7, 7–6, 6–2ರಿಂದ ಸೋಲುಣಿಸಿದಸ್ವಾರ್ಟ್ಜ್‌ಮನ್ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟರು.

ಐದು ತಾಸುಗಳ ಈ ಮ್ಯಾರಥಾನ್‌ ಪಂದ್ಯದಲ್ಲಿ ಇಬ್ಬರೂ ಆಟಗಾರರು ದಣಿದರು. ನಾಲ್ಕನೇ ಸುತ್ತಿನ ಪಂದ್ಯದಲ್ಲೂ ಥೀಮ್‌ ಅವರು ಹ್ಯುಗೊ ಗ್ಯಾಸ್ಟನ್‌ ಎದುರು ಗೆಲ್ಲಲು ಮೂರುವರೆ ತಾಸು ಹಿಡಿದಿತ್ತು.

ಪೊದೊರೊಸ್ಕಾ ಜಯಭೇರಿ: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅರ್ಜೆಂಟೀನಾದ ನಾದಿಯಾ ಪೊದೊರೊಸ್ಕಾ 6–2, 6–4ರಿಂದ ಎಲಿನಾ ಸ್ವಿಟೋಲಿನಾ ಅವರಿಗೆ ಆಘಾತ ನೀಡಿ ಸೆಮಿಫೈನಲ್‌ಗೆ ಕಾಲಿಟ್ಟರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರ್ತಿಯೊಬ್ಬರು ಮೊದಲ ಬಾರಿ ಟೂರ್ನಿಯ ನಾಲ್ಕರ ಘಟ್ಟಕ್ಕೆ ತಲುಪಿದ ಹೆಗ್ಗಳಿಕೆ ಅವರದಾಯಿತು.

ಸೆಮಿಫೈನಲ್‌ನಲ್ಲಿ ನಾದಿಯಾ ಅವರು ಐಗಾ ಸ್ವಾಟೆಕ್‌ ಅವರನ್ನು ಎದುರಿಸಲಿದ್ದಾರೆ.ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಪಂದ್ಯದಲ್ಲಿ ಐಗಾ 6–3, 6–1ರಿಂದ ಇಟಲಿಯ ಮಾರ್ಟಿನಾ ಟ್ರೆವಿಸಾನ್ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.