ADVERTISEMENT

ನಡಾಲ್‌, ನವೊಮಿ, ಕ್ವಿಟೋವ ಫೈನಲ್‌ಗೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಸಿಸಿಪಸ್‌ಗೆ ನಿರಾಸೆ; ಪ್ಲಿಸ್ಕೋವ, ಕಾಲಿನ್ಸ್‌ ಹೊರಕ್ಕೆ

ಏಜೆನ್ಸೀಸ್
Published 24 ಜನವರಿ 2019, 18:29 IST
Last Updated 24 ಜನವರಿ 2019, 18:29 IST
ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ಅವರ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಸ್ಪೇನ್‌ನ ರಫೆಲ್ ನಡಾಲ್‌ –ಎಎಫ್‌ಪಿ ಚಿತ್ರ
ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ಅವರ ಎದುರಿನ ಪಂದ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡಿದ ಸ್ಪೇನ್‌ನ ರಫೆಲ್ ನಡಾಲ್‌ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಹಾಲಿ ಚಾಂಪಿಯನ್ ರೋಜರ್ ಫೆಡರರ್ ಅವರನ್ನು ಮಣಿಸಿ ಗಮನ ಸೆಳೆದಿದ್ದ ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್‌ ಗುರುವಾರ ನಿರಾಸೆ ಅನುಭವಿಸಿದರು.

ಸ್ಪೇನ್‌ನ ರಫೆಲ್ ನಡಾಲ್ ಎದುರಿನ ಪಂದ್ಯದಲ್ಲಿ ನೀರಸ ಆಟವಾಡಿದ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು. ಸೆಮಿಫೈನಲ್ ಹಣಾಹಣಿಯಲ್ಲಿ ಸಿಸಿಪಸ್ ಅವರನ್ನು 6–2, 6–4, 6–0ಯಿಂದ ಮಣಿಸಿದ ನಡಾಲ್‌ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದರು.

ಶುಕ್ರವಾರ ನಡೆಯಲಿರುವ ನೊವಾಕ್‌ ಜೊಕೊವಿಚ್ ಮತ್ತು ಲೂಕಾಸ್ ಪೌಲಿ ನಡುವಿನ ಪಂದ್ಯದಲ್ಲಿ ಗೆದ್ದವರನ್ನು ನಡಾಲ್ ಫೈನಲ್‌ನಲ್ಲಿ ಎದುರಿಸುವರು.

ADVERTISEMENT

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಜಪಾನ್‌ನ ನವೊಮಿ ಒಸಾಕ ಮತ್ತು ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ ನಡುವೆ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದೆ.

ನಡಾಲ್‌ಗೆ ಸಾಟಿಯಾಗದ ಸಿಸಿಪಸ್‌: ನವತಾರೆ ಸ್ಟೆಫನೋಸ್‌ ಸಿಸಿಪಸ್‌ಗೆ ಟೆನಿಸ್‌ ಪಾಠ ಹೇಳಿದಂತಿತ್ತು, ಗುರುವಾರ ನಡಾಲ್ ಅವರ ಆಟದ ವೈಖರಿ. ಪಂದ್ಯದಲ್ಲಿ ಎದುರಾಳಿಗೆ ಕೇವಲ ಆರು ಗೇಮ್‌ಗಳನ್ನು ಬಿಟ್ಟುಕೊಟ್ಟ ನಡಾಲ್‌ 6–2, 6–4, 6–0ಯಿಂದ ಜಯ ಸಾಧಿಸಿದರು. ಒಂದು ತಾಸು 46 ನಿಮಿಷಗಳ ಪಂದ್ಯದ ಎರಡನೇ ಸೆಟ್‌ನಲ್ಲಿ ಮಾತ್ರ ಸಿಸಿಪಸ್ ಸ್ವಲ್ಪ ಪ್ರತಿರೋಧ ತೋರಿದರು. ಮೂರನೇ ಸೆಟ್‌ನಲ್ಲಿ ಸಂಪೂರ್ಣ ಕಳೆಗುಂದಿದರು.

ಈ ಜಯದೊಂದಿಗೆ ನಡಾಲ್‌ ಒಂದು ಸರ್ವ್ ಕೂಡ ಡ್ರಾಪ್ ಮಾಡದೆ ಸತತ 63 ಗೇಮ್‌ಗಳನ್ನು ಗೆದ್ದಂತಾಯಿತು. ಟೂರ್ನಿಯಲ್ಲಿ ಈ ವರೆಗೆ ಎಲ್ಲ ಪಂದ್ಯಗಳನ್ನೂ ಅವರು ಏಕಪಕ್ಷೀಯವಾಗಿ ಗೆದ್ದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅವರು ಐದು ಬಾರಿ ಫೈನಲ್‌ಗೆ ಏರಿದ ಸಾಧನೆ ಮಾಡಿದ್ದು ಈ ಬಾರಿ ಪ್ರಶಸ್ತಿ ಗೆದ್ದರೆ ಎಲ್ಲ ಗ್ರಾನ್‌ಸ್ಲಾಂ ಟೂರ್ನಿಗಳನ್ನು ಎರಡು ಬಾರಿ ಗೆದ್ದ ಮೊದಲ ಆಟಗಾರ ಎನಿಸಲಿದ್ದಾರೆ.

ನವೊಮಿ, ಕ್ವಿಟೋವಗೆ ಜಯ: ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ನವೊಮಿ ಒಸಾಕ, ಚೆಕ್‌ ಗಣರಾಜ್ಯದ ಕರೋಲಿನ ಪ್ಲಿಸ್ಕೋವ ಅವರನ್ನು 6–2, 4–6, 6–4ರಿಂದ ಮಣಿಸಿದರು.

ಬುಧವಾರ ಸೆರೆನಾ ವಿಲಿಯಮ್ಸ್‌ ಅವರನ್ನು ಕೊನೆಯ ಕ್ಷಣದಲ್ಲಿ ದಂಗುಬಡಿಸಿ ಗೆದ್ದಿದ್ದ ಪ್ಲಿಸ್ಕೋವ 21 ವರ್ಷದ ನವೊಮಿ ಎದುರು ಮಂಕಾದರು. ಸತತ 10ನೇ ಗೆಲುವಿನ ಕನಸು ಕಂಡು ಕಣಕ್ಕೆ ಇಳಿದಿದ್ದ ಅವರು ನಾಲ್ಕನೇ ಶ್ರೇಯಾಂಕದ ಒಸಾಕ ಹೆಣೆದ ತಂತ್ರಗಳಿಗೆ ನಿರುತ್ತರರಾದರು. ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿ ಭರವಸೆ ಮೂಡಿಸಿದರೂ ಮೂರನೇ ಸೆಟ್‌ನಲ್ಲಿ ಜಪಾನ್ ಆಟಗಾರ್ತಿ ಮುಂದೆ ಸೋಲೊಪ್ಪಿಕೊಂಡರು.

ಕಾಲಿನ್ಸ್‌ಗೆ ನಿರಾಸೆ: ಎಂಟನೇ ಶ್ರೇಯಾಂಕದ ಪೆಟ್ರಾ ಕ್ವಿಟೋವಗೆ ಅಮೆರಿಕದ ಡ್ಯಾನಿಯೆಲಿ ಕಾಲಿನ್ಸ್‌ ಮೊದಲ ಸೆಟ್‌ನಲ್ಲಿ ಭಾರಿ ಪೈಪೋಟಿ ನೀಡಿದರು. 7–6(7/2)ರಿಂದ ಗೆದ್ದ ಕ್ವಿಟೋವ ಎರಡನೇ ಸೆಟ್‌ನಲ್ಲಿ ಎದುರಾಳಿಗೆ ಒಂದು ಗೇಮ್ ಕೂಡ ಬಿಟ್ಟುಕೊಡದೆ ಗೆಲುವಿನ ನಗೆ ಸೂಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.