ADVERTISEMENT

Australian Open 2023: ನಡಾಲ್‌, ಇಗಾ ಶುಭಾರಂಭ

ಆಸ್ಟ್ರೇಲಿಯಾ ಓಪನ್‌ ಟೆನಿಸ್: ಹಿಂದೆ ಸರಿದ ಕಿರ್ಗಿಯೊಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 14:23 IST
Last Updated 16 ಜನವರಿ 2023, 14:23 IST
ಪೋಲೆಂಡ್‌ನ ಇಗಾ ಶ್ವಾಂಟೆಕ್ ಆಟದ ವೈಖರಿ –ಎಎಫ್‌ಪಿ ಚಿತ್ರ
ಪೋಲೆಂಡ್‌ನ ಇಗಾ ಶ್ವಾಂಟೆಕ್ ಆಟದ ವೈಖರಿ –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌ : ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಅಗ್ರಶ್ರೇಯಾಂಕ ಪಡೆದಿರುವ ರಫೆಲ್‌ ನಡಾಲ್‌ ಹಾಗೂ ಇಗಾ ಶ್ವಾಂಟೆಕ್‌ ಅವರು ಆಸ್ಟ್ರೇಲಿಯಾ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಸತತ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ 36 ವರ್ಷದ ನಡಾಲ್‌ ಸೋಮವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 7-5, 2-6, 6-4, 6-1 ರಲ್ಲಿ ಬ್ರಿಟನ್‌ನ ಜಾಕ್‌ ಡ್ರೇಪರ್‌ ಅವರನ್ನು ಮಣಿಸಿದರು.

ಮೊದಲ ಸೆಟ್‌ ಪ್ರಯಾಸದಿಂದ ಗೆದ್ದ ಸ್ಪೇನ್‌ನ ಆಟಗಾರ, ಎರಡನೇ ಸೆಟ್‌ನಲ್ಲಿ ಸೋತರು. ಆ ಬಳಿಕ ಲಯ ಕಂಡುಕೊಂಡರಲ್ಲದೆ. ಐದು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟು ಕೊನೆಯ ಎರಡು ಸೆಟ್‌ಗಳನ್ನು ಗೆದ್ದುಕೊಂಡರು.

ADVERTISEMENT

ಅಮೆರಿಕದ ಫ್ರಾನ್ಸೆಸ್‌ ಟೈಫೊ 6–3, 6–3, 6–7, 7–6 ರಲ್ಲಿ ಜರ್ಮನಿಯ ಡೇನಿಯಲ್‌ ಅಲ್ಟ್‌ಮಯೆರ್‌ ವಿರುದ್ಧ ಗೆದ್ದರೆ, ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ 6–3, 6–4, 7–6 ರಲ್ಲಿ ಫ್ರಾನ್ಸ್‌ನ ಕ್ವೆಂಟಿನ್ ಹೇಯ್ಸ್‌ ಅವರನ್ನು ಮಣಿಸಿದರು.

ಪುರುಷರ ಸಿಂಗಲ್ಸ್‌ ವಿಭಾಗದ ಇತರ ಪಂದ್ಯಗಳಲ್ಲಿ ಬ್ರಿಟನ್‌ನ ಕ್ಯಾಮರಾನ್‌ ನೋರಿ 7–6, 6–0, 6–3 ರಲ್ಲಿ ಫ್ರಾನ್ಸ್‌ನ ಲುಕಾ ವಾನ್ ಅಶೆ ವಿರುದ್ಧ; ಇಟಲಿಯ ಯಾನಿಕ್‌ ಸಿನೆರ್‌ 6–4, 6–0, 6–2 ರಲ್ಲಿ ಬ್ರಿಟನ್‌ನ ಕೈಲ್‌ ಎಡ್ಮಂಡ್‌ ವಿರುದ್ಧ ಜಯಿಸಿದರು.

ಕಿರ್ಗಿಯೊಸ್‌ಗೆ ಗಾಯ: ಆತಿಥೇಯ ದೇಶದ ಭರವಸೆ ಎನಿಸಿದ್ದ ನಿಕ್‌ ಕಿರ್ಗಿಯೊಸ್‌ ಅವರು ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದರು. ‘ಮಂಡಿನೋವಿನ ಕಾರಣ ಹಿಂದೆ ಸರಿಯುತ್ತಿದ್ದೇನೆ. ಇದರಿಂದ ತುಂಬಾ ನಿರಾಸೆಯಾಗಿದೆ’ ಎಂದು ಸೋಮವಾರ ತುರ್ತು ಪತ್ರಿಕಾಗೋಷ್ಠಿ ಕರೆದು ಅವರು ತಿಳಿಸಿದರು.

ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿರುವ ಪೋಲೆಂಡ್‌ನ ಇಗಾ ಶ್ವಾಂಟೆಕ್ 6–4, 7–5 ರಲ್ಲಿ ಜರ್ಮನಿಯ ಯೂಲಾ ನೀಮಯೆರ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.