ADVERTISEMENT

ಎಐಟಿಎ ಟೆನಿಸ್ ಟೂರ್ನಿ: ಪ್ರಶಸ್ತಿಗಾಗಿ ಪ್ರಜ್ವಲ್‌–ನಿಕ್ಕಿ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 13:55 IST
Last Updated 15 ಜನವರಿ 2021, 13:55 IST
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಸರ್ವ್ ಮಾಡಿದ ಸಂದರ್ಭ
ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಪ್ರಜ್ವಲ್ ದೇವ್ ಸರ್ವ್ ಮಾಡಿದ ಸಂದರ್ಭ   

ಬೆಂಗಳೂರು: ಅಗ್ರ ಶ್ರೇಯಾಂಕಿತ ನಿಕ್ಕಿ ಪೂಣಚ್ಚ ಮತ್ತು ಎರಡನೇ ಶ್ರೇಯಾಂಕಿತ ಪ್ರಜ್ವಲ್ ದೇವ್ ಅವರು ರಾಜ್ಯ ಟೆನಿಸ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಗಾಗಿ ಸೆಣಸುವರು. ಮಹಿಳೆಯರ ವಿಭಾಗದಲ್ಲಿ ಎರಡನೇ ಶ್ರೇಯಾಂಕಿತೆ ಸಾಯಿ ಸಂಹಿತಾ ಮತ್ತು ಮೂರನೇ ಶ್ರೇಯಾಂಕಿತೆ ಸೋಹಾ ಸಾದಿಕ್ ಫೈನಲ್‌ನಲ್ಲಿ ಮುಖಾಮುಖಿಯಾಗುವರು.

ರೋಹನ್ ಬೋಪಣ್ಣ ದಿ ಸ್ಪೋರ್ಟ್ಸ್ ಸ್ಕೂಲ್ ಟೆನಿಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸೆಮಿಫೈನಲ್ ಪಂದ್ಯದಲ್ಲಿ ಮಾಜಿ ರಾಷ್ಟ್ರೀಯ ಚಾಂಪಿಯನ್ ನಿಕ್ಕಿ ಪೂಣಚ್ಚ 6-2, 6-1ರಲ್ಲಿ ಸೂರಜ್ ಪ್ರಬೋಧ್ ಅವರನ್ನು ಗುರುವಾರ ಮಣಿಸಿದರು. ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಋಷಿ ರೆಡ್ಡಿ ವಿರುದ್ಧ ಪ್ರಜ್ವಲ್ ದೇವ್3-6, 6-3, 6-0ರಲ್ಲಿ ಗೆಲುವು ಸಾಧಿಸಿದರು.

ನಿಕ್ಕಿ ಅವರ ಬಲಶಾಲಿ ಹೊಡೆತಗಳಿಗೆ ಉತ್ತರ ನೀಡಲಾಗದ ಸೂರಜ್ ಪ್ರಬೋಧ್ ಸರ್ವ್‌ಗಳಲ್ಲೂ ಮುಗ್ಗರಿಸಿದರು. ಹೀಗಾಗಿ ನಿಕ್ಕಿ ಗೆಲುವು ಸುಲಭವಾಯಿತು. ಪ್ರಜ್ವಲ್‌ಗೆ ನಾಲ್ಕನೇ ಶ್ರೇಯಾಂಕದ ಋಷಿ ರೆಡ್ಡಿ ಕಠಿಣ ಸವಾಲೊಡ್ಡಿದ್ದರು. ಮೊದಲ ಸೆಟ್‌ನಲ್ಲಿ 3–4ರ ಹಿನ್ನಡೆಯಲ್ಲಿದ್ದಾಗ ಎದುರಾಳಿಯ ಸರ್ವ್ ಮುರಿದ ಋಷಿ 5–3ರ ಮುನ್ನಡೆ ಸಾಧಿಸಿದರು. ಅಮೋಘ ಸರ್ವ್ ಮೂಲಕ ಸೆಟ್‌ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನ ಆರಂಭದಲ್ಲಿ ಇಬ್ಬರೂ ಸಮಬಲದ ಪೈಪೋಟಿ ನಡೆಸಿದರು. ಆದರೆ ನಿಧಾನಕ್ಕೆ ಹಿಡಿತ ಬಿಗಿಗೊಳಿಸಿದ ಪ್ರಜ್ವಲ್ ಸೆಟ್‌ ಗೆದ್ದರು. ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಋಷಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಸಮಚಿತ್ತದಿಂದ ಆಡಿದ ಪ್ರಜ್ವಲ್ ಸುಲಭವಾಗಿ ಸೆಟ್ ತಮ್ಮದಾಗಿಸಿಕೊಂಡು ಪಂದ್ಯ ಗೆದ್ದರು.

ADVERTISEMENT

ಸಂಹಿತಾ, ಸೋಹಾಗೆ ಗೆಲುವು

ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸಂಹಿತಾ ಸೊಗಸಾದ ಆಟವಾಡಿದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಸಂಜನಾ ಶ್ರೀಮಲ್ಲ ಪ್ರಬಲ ಪೈಪೋಟಿ ನೀಡಿದರೂ ಗೆಲುವು ಅವರಿಗೆ ಮರೀಚಿಕೆಯಾಯಿತು. ಮೊದಲ ಸೆಟ್‌ನಲ್ಲಿ 4–3ರ ಮುನ್ನಡೆಯಲ್ಲಿದ್ದಾಗ ಎದುರಾಳಿಯ ಸರ್ವ್ ಮುರಿದ ಸಂಹಿತಾ 5–3ರಿಂದ ಮುನ್ನಡೆದು ಪ್ರಬಲ ಸರ್ವ್ ಮೂಲಕ ಸೆಟ್‌ ಗೆದ್ದುಕೊಂಡರು. ಎರಡನೇ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಸರ್ವ್‌ಗಳನ್ನು ಮುರಿದು ಗಮನ ಸೆಳೆದರು. ಆದರೆ ಸಂಜನಾ ಜಯದ ನಗೆ ಬೀರಿದರು.

ಎರಡನೇ ಸೆಮಿಫೈನಲ್‌ನಲ್ಲಿ ಸೋಹಾ ಸಾದಿಕ್ ಎಂಟನೇ ಶ್ರೇಯಾಂಕಿತೆ ರೇಷ್ಮಾ ಮರೂರಿ ಎದುರು ಸುಲಭ ಗೆಲುವು ಸಾಧಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದರು. ಶನಿವಾರ ಸಂಜೆ 3 ಗಂಟೆಗೆ ಮಹಿಳೆಯರ ಫೈನಲ್ ಪಂದ್ಯ ಮತ್ತು ನಂತರ ಪುರುಷರ ಫೈನಲ್ ನಡೆಯಲಿದೆ.

ಫಲಿತಾಂಶಗಳು: ಪುರುಷರ ಸೆಮಿಫೈನಲ್: ತೆಲಂಗಾಣದ ನಿಕ್ಕಿ ಪೂಣಚ್ಚಗೆ ಕರ್ನಾಟಕದ ಸೂರಜ್ ಪ್ರಬೋಧ್ ವಿರುದ್ಧ 6-2, 6-1ರಲ್ಲಿ ಜಯ; ಕರ್ನಾಟಕದ ಪ್ರಜ್ವಲ್ ದೇವ್‌ಗೆ ಕರ್ನಾಟಕದ ಋಷಿ ರೆಡ್ಡಿ ಎದುರು 3-6, 6-3, 6-0ರಲ್ಲಿ ಗೆಲುವು.

ಮಹಿಳೆಯರ ಸೆಮಿಫೈನಲ್‌: ತಮಿಳುನಾಡಿನ ಸಾಯಿ ಸಂಹಿತಾ ಚಮರ್ಥಿಗೆ6-3, 6-3ರಲ್ಲಿ ತೆಲಂಗಾಣದ ಸಂಜನಾ ಶ್ರೀಮಲ್ಲ ವಿರುದ್ಧ ಗೆಲುವು; ಕರ್ನಾಟಕದ ಸೋಹಾ ಸಾದಿಕ್‌ಗೆ ಕರ್ನಾಟಕದ ರೇಷ್ಮಾ ಮರೂರಿ ವಿರುದ್ಧ 6-3, 6-1ರಲ್ಲಿ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.