
ಮೆಲ್ಬರ್ನ್: ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರಿಗೆ ಐದು ಸೆಟ್‌ಗಳ ಸುದೀರ್ಘ ಪಂದ್ಯದಲ್ಲಿ ಸೋಲುಣಿಸಿದ ನೊವಾಕ್ ಜೊಕೊವಿಚ್ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಫೈನಲ್‌ಗೆ ದಾಪುಗಾಲಿಟ್ಟರು. ಇತಿಹಾಸ ನಿರ್ಮಾಣದ ಹೊಸ್ತಿಲಲ್ಲಿರುವ ಜೊಕೊವಿಚ್ ಭಾನುವಾರ ನಡೆಯುವ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಅವರನ್ನು ಎದುರಿಸಲಿದ್ದಾರೆ.
ಸರ್ಬಿಯಾದ 38 ವರ್ಷ ವಯಸ್ಸಿನ ಆಟಗಾರ 3–6, 6–3, 4–6, 6–4, 6–4 ರಿಂದ ಇಟಲಿಯ ಎದುರಾಳಿಯನ್ನು ಸೋಲಿಸಿದರು. ಫೈನಲ್‌ನಲ್ಲಿ ಅವರು ತಮಗಿಂತ 16 ವರ್ಷ ಕಿರಿಯ ಆಟಗಾರನ್ನು ಸೋಲಿಸಿದರೆ ಸಾರ್ವಕಾಲಿಕ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಕಿರೀಟ ಮುಡಿಗೇರಿಸುವ ಅವಕಾಶ ಪಡೆಯಲಿದ್ದಾರೆ.
ಆಸ್ಟ್ರೇಲಿಯಾ ಮಾರ್ಗರೇಟ್ ಕೋರ್ಟ್ ಅವರೂ 24 ಗ್ರ್ಯಾನ್‌ಸ್ಲಾಮ್ ಸಿಂಗಲ್ಸ್ ಪ್ರಶಸ್ತಿ ಜಯಿಸಿದ ದಾಖಲೆ ಹೊಂದಿದ್ದಾರೆ. ವಿಶೇಷವೆಂದರೆ ಶನಿವಾರ ಬೆಳಿಗ್ಗಿನ ಜಾವದವರೆಗೆ ನಡೆದ ಪಂದ್ಯಕ್ಕೆ ಅವರು ಸಾಕ್ಷಿಯಾದರು.
ಇನ್ನೊಂದು ಸುದೀರ್ಘ ಸೆಮಿಫೈನಲ್ ನಲ್ಲಿ ಸ್ನಾಯುಸೆಳೆತ, ಬಳಲಿಕೆಯನ್ನು ನಿಭಾಯಿಸಿದ ಸ್ಪೇನ್‌ನ ಆಟಗಾರ ಅಲ್ಕರಾಜ್ 6–4, 7–6 (7–5), 6–7 (3–7), 6–7 (4–7), 7–5 ರಿಂದ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿದರು. ಸುದೀರ್ಘ 5 ಗಂಟೆ 27 ನಿಮಿಷಗಳ ಹೋರಾಟದಲ್ಲಿ ಯಶಸ್ಸು ಪಡೆದ ಅಲ್ಕರಾಜ್ ಇಲ್ಲಿ ಮೊದಲ ಬಾರಿ ಫೈನಲ್ ತಲುಪಿದರು.
ಇತರ ಮೂರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಅವರು ಇಲ್ಲಿ ಮೊದಲ ಪ್ರಶಸ್ತಿ ಗೆದ್ದು ‘ಕ್ಯಾರೀರ್ ಗ್ರ್ಯಾನ್‌ಸ್ಲಾಮ್’ ಸಾಧಿ ಸಿದ ಅತಿ ಕಿರಿಯ ಆಟಗಾರ ಎನಿಸುವ ಹಾದಿಯಲ್ಲಿದ್ದಾರೆ. ಈ ದಾಖಲೆ ಸ್ಪೇನ್‌ನವರೇ ಆದ ರಫೆಲ್ ನಡಾಲ್ (24ನೇ ವಯಸ್ಸಿನಲ್ಲಿ) ಹೆಸರಿನಲ್ಲಿದೆ.
ಜೊಕೊವಿಚ್ 2023ರ ಅಮೆರಿಕ ಓಪನ್‌ನಲ್ಲಿ ತಮ್ಮ ಕೊನೆಯ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಅಂದಿನಿಂದ ಅಲ್ಕರಾಜ್ ಮತ್ತು ಸಿನ್ನರ್ ಅವರೇ ವಿಶ್ವ ಟೆನಿಸ್‌ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. 2025ರಲ್ಲಿ ಅವರು ನಾಲ್ಕೂ ಗ್ರ್ಯಾನ್‌ಸ್ಲಾಮ್ ಟೂರ್ನಿಗಳ ಸೆಮಿಫೈನಲ್ ತಲುಪಿದ್ದರು. ಆದರೆ ಶುಕ್ರವಾರ ಆಡಿದ ರೀತಿ ನೋಡಿದರೆ, ಅವರಲ್ಲಿ ಇನ್ನೂ ಸಾಕಷ್ಟು ಆಟ ಉಳಿದಿರುವಂತೆ ಕಂಡಿತು.
4 ಗಂಟೆ 9 ನಿಮಿಷಗಳವರೆಗೆ ನಡೆದ ಈ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಅನೇಕ ತಪ್ಪುಗಳನ್ನು ಎಸಗುವ ಮೂಲಕ 24 ವರ್ಷ ವಯಸ್ಸಿನ ಸಿನ್ನರ್ ಎದುರಾಳಿಯ ಸರ್ವ್ ಮುರಿಯುವ ಉತ್ತಮ ಅವಕಾಶಗಳನ್ನು ಕೈಚೆಲ್ಲಿದರು. ಇದರೊಂದಿಗೆ ಇಲ್ಲಿ ಹ್ಯಾಟ್ರಿಕ್ ಪ್ರಶಸ್ತಿಗೆ ಮುತ್ತಿಕ್ಕುವ ಸಿನ್ನರ್ ಕನಸು ಭಗ್ನಗೊಂಡಿತು.
ದಾಖಲೆಯ ಹತ್ತು ಪ್ರಶಸ್ತಿ ಗೆದ್ದು ‘ಮೆಲ್ಬರ್ನ್ ಪಾರ್ಕ್‌ನ ನಿರ್ವಿವಾದ ಚಕ್ರವರ್ತಿ’ ಎನಿಸಿರುವ ಮಾಜಿ ಅಗ್ರಮಾನ್ಯ ಆಟಗಾರನಿಗೆ ಈ ಬಾರಿ ಅದೃಷ್ಟದ ಬಲವೂ ಜೊತೆ ನೀಡಿದೆ. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಎರಡು ಸೆಟ್ ಹಿನ್ನಡೆಯಲ್ಲಿದ್ದಾಗ ಇಟಲಿಯ ಎದುರಾಳಿ ಲೊರೆಂಜೊ ಮುಸೆಟ್ಟಿ ಕಾಲುನೋವಿನಿಂದ ಪಂದ್ಯ ಬಿಟ್ಟುಕೊಟ್ಟಿ ದ್ದರು. ನಾಲ್ಕನೇ ಸುತ್ತಿನಲ್ಲೂ ಅವರ ಎದುರಾಳಿ ಯಾಕುಬ್ ಮೆನ್ಸಿಕ್ ಗಾಯದ ಸಮಸ್ಯೆಯಿಂದ ಹಿಂದೆ ಸರಿದಿದ್ದರು. ಸಿನ್ನರ್ ಎದುರೂ ಅವರು ನೆಚ್ಚಿನ ಆಟಗಾರ ಎನಿಸಿರಲಿಲ್ಲ. ಆದರೆ ಅಚ್ಚುಮೆಚ್ಚಿನ ಮೈದಾನದಲ್ಲಿ ಅವರ ಕೆಚ್ಚಿನ ಆಟ ಯಶ ಕಂಡಿತು.
ದಣಿದ ಅಲ್ಕರಾಜ್: ಅಲ್ಕರಾಜ್ ಸೆಮಿಫೈನಲ್ ಪಂದ್ಯದ ಮೂರನೇ ಸೆಟ್‌ನಲ್ಲಿ 4–4 ಸಮ ಮಾಡಿಕೊಂಡಿದ್ದರು. ಈ ವೇಳೆ ಸ್ನಾಯುಸೆಳೆತ ಅವರನ್ನು ಬಾಧಿಸಿದಂತೆ ಕಂಡಿತು. ಅವರಿಗೆ ‘ವೈದ್ಯಕೀಯ ಟೈಮ್‌ಔಟ್’ ನೀಡಲಾಯಿತು. ಇದು ಮೂರನೇ ಶ್ರೇಯಾಂಕದ ಜ್ವರೇವ್ ಅವರನ್ನು ಕೆರಳಿಸಿತು. ಇದನ್ನು ಅವರು ರೆಫ್ರಿ ಜೊತೆ ಪ್ರಶ್ನಿಸಿದರು.
ಪೂರ್ಣ ಸಾಮರ್ಥ್ಯದಿಂದ ಆಡಲಾಗದಿದ್ದರೂ ಅಲ್ಕರಾಜ್ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ‘ಯಾವ ಹಂತದಲ್ಲೂ ನಾನು ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ’ ಎಂದು ಆರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಪ್ರತಿಕ್ರಿಯಿಸಿದರು. ಹಾಲಿ ರನ್ನರ್ ಅಪ್ ಆಗಿರುವ ಜರ್ಮನಿಯ ಜ್ವರೇವ್ ಮತ್ತೊಮ್ಮೆ ನಿರಾಶೆ ಅನುಭವಿಸಿದರು.
ಮಹಿಳಾ ಸಿಂಗಲ್ಸ್ ಫೈನಲ್ ಇಂದು
ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರು ಶನಿವಾರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಕಜಾಕಸ್ತಾನದ ಎಲಿನಾ ರಿಬಾಕಿನಾ ಅವರನ್ನು ಎದುರಿಸಲಿದ್ದಾರೆ.
2023 ಮತ್ತು 2024ರ ಚಾಂಪಿಯನ್ ಸಬಲೆಂಕಾ ಅವರು ಇಲ್ಲಿ ಮೂರನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಐದನೇ ಶ್ರೇಯಾಂಕದ ರಿಬಾಕಿನಾ 2022ರ ವಿಂಬಲ್ಡರ್ ಕಿರೀಟದ ಬಳಿಕ ಎರಡನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವ ಛಲದಲ್ಲಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 2, ನೇರಪ್ರಸಾರ: ಸೋನಿ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.