ADVERTISEMENT

ಅಮೆರಿಕ ಓಪನ್‌: ನೊವಾಕ್ ಜೊಕೊವಿಚ್‌ಗೆ ಕ್ಲೀನ್ ಸ್ವೀಪ್ ಗುರಿ

ಅಮೆರಿಕ ಓಪನ್ ಟೆನಿಸ್ ಟೂರ್ನಿ ಇಂದಿನಿಂದ; ಮೂರನೇ ಪ್ರಶಸ್ತಿ ಮೇಲೆ ನವೊಮಿ ಒಸಾಕ ಕಣ್ಣು

ಏಜೆನ್ಸೀಸ್
Published 29 ಆಗಸ್ಟ್ 2021, 15:10 IST
Last Updated 29 ಆಗಸ್ಟ್ 2021, 15:10 IST
ಅಭ್ಯಾಸದ ನಡುವೆ ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ
ಅಭ್ಯಾಸದ ನಡುವೆ ನೊವಾಕ್ ಜೊಕೊವಿಚ್ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ವರ್ಷದ ಕೊನೆಯ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ ಅಮೆರಿಕ ಓಪನ್ ಸೋಮವಾರ ಆರಂಭಗೊಳ್ಳಲಿದ್ದು ಸರ್ಬಿಯಾದ ನೊವಾಕ್ ಜೊಕೊವಿಚ್ ಈ ಋತುವಿನ ಎಲ್ಲ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಕನಸಿನೊಂದಿಗೆ ಕಣಕ್ಕೆ ಇಳಿಯಲಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಜಪಾನ್‌ನ ನವೊಮಿ ಒಸಾಕ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

ಪುರುಷರ ವಿಭಾಗದಲ್ಲಿ ಐವರು ಮಾಜಿ ಚಾಂಪಿಯನ್ನರು ಈ ಬಾರಿ ಆಡುತ್ತಿಲ್ಲ. ರೋಜರ್ ಫೆಡರರ್‌, ರಫೆಲ್ ನಡಾಲ್‌, ಸ್ಟ್ಯಾನ್ ವಾವ್ರಿಂಕ, ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಮತ್ತು ಡೊಮಿನಿಕ್ ಥೀಮ್ ಗಾಯದಿಂದಾಗಿ ಆಡದೇ ಇರಲು ನಿರ್ಧರಿಸಿದ್ದಾರೆ. ಆದರೆ ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್‌, ಗ್ರೀಸ್‌ನ ಸ್ಟೆಫನೋಸ್ ತಿತ್ಸಿಪಾಸ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಅವರ ಸವಾಲನ್ನು ಜೊಕೊವಿಚ್‌ ಮೀರಿ ನಿಲ್ಲಬೇಕಾಗಿದೆ.‌

ಫ್ರೆಂಚ್ ಓಪನ್‌ನಲ್ಲಿ ವಿವಾದ ಸೃಷ್ಟಿಸಿ ಹೊರನಡೆದಿದ್ದ ಒಸಾಕ ನಂತರ ವಿಂಬಲ್ಡನ್‌ ಟೂರ್ನಿಯಿಂದ ಕೂಡ ಹಿಂದೆ ಸರಿದಿದ್ದರು. ತವರಿನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಎರಡನೇ ಸುತ್ತಿನಲ್ಲಿ ಸೋತು ಹೊರಬಿದ್ದಿದ್ದರು. ಅಮೆರಿಕ ಓಪನ್‌ನಲ್ಲಿ ಕಳೆದ ಬಾರಿ ಮತ್ತು 2018ರಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ವರ್ಷದ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆರೆನಾ ವಿಲಿಯಮ್ಸ್ ಹಾಗೂ ಗಾರ್ಬೈನ್ ಮುಗುರುಜಾ ಅವರನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಫೈನಲ್‌ನಲ್ಲಿ ಜೆನಿಫರ್ ಬ್ರಾಡಿಗೆ ಸೋಲುಣಿಸಿದ್ದರು.

ADVERTISEMENT

ವಿಂಬಲ್ಡನ್ ಟೂರ್ನಿಯ ಚಾಂಪಿಯನ್‌ ಆ್ಯಶ್ಲಿ ಬಾರ್ಟಿ ಕೂಡ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. 83 ವಾರ ವಿಶ್ವ ರ‍್ಯಾಂಕಿಂಗ್‌ನ ಅಗ್ರ ಸ್ಥಾನ ಕಾಯ್ದುಕೊಂಡಿದ್ದ ಬಾರ್ಟಿ ಈ ವರ್ಷದ ವಿಂಬಲ್ಡನ್ ಮತ್ತು ಸಿನ್ಸಿನಾಟಿ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.

ಸೆರೆನಾ ವಿಲಿಯಮ್ಸ್ ಗಾಯದ ಕಾರಣದಿಂದ ಅಮೆರಿಕ ಓಪನ್‌ನಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ. ಬಾರ್ಬೊರಾ ಕ್ರೆಜಿಕೋವ, ಸಬಲೆಂಕಾ, ಕರೊಲಿನಾ ಪ್ಲಿಸ್ಕೋವ, ಸೋಫಿಯಾ ಕೆನಿನ್‌, ಬಿಯಾಂಕ ಆ್ಯಂಡ್ರ್ಯುಸ್ಕು, ಇಗಾ ಸ್ವೆಟೆಕ್‌ ಅವರೂ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.