ಕರಾಚಿ: ‘ಮುಂಬರುವ ಡೇವಿಸ್ ಕಪ್ ಟೆನಿಸ್ ಪಂದ್ಯದಲ್ಲಿ ನಾವು ಬಲಿಷ್ಠ ಭಾರತ ತಂಡಕ್ಕೆ ಆಘಾತ ನೀಡುತ್ತೇವೆ’ ಎಂದು ಪಾಕಿಸ್ತಾನದ ಅನುಭವಿ ಸಿಂಗಲ್ಸ್ ಆಟಗಾರ ಅಕ್ವೀಲ್ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ 13 ವರ್ಷಗಳ ನಂತರ ಡೇವಿಸ್ ಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೋರಾಟ ಸೆಪ್ಟೆಂಬರ್ 14 ಮತ್ತು 15ರಂದು ಇಸ್ಲಾಮಬಾದ್‌ನಲ್ಲಿ ಆಯೋಜನೆಯಾಗಿದೆ. ಭಾರತ ತಂಡವು 55 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಪಂದ್ಯ ಆಡುತ್ತಿದೆ.
‘ಭಾರತದಲ್ಲಿ ಅತ್ಯಾಧುನಿಕ ಮೂಲ ಸೌಲಭ್ಯವಿದೆ. ಹೆಚ್ಚು ಮಂದಿ ಪ್ರತಿಭಾನ್ವಿತರು ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಭಾರತವು ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವುದಕ್ಕೆ ಇದು ಕಾರಣ. ವಿಶ್ವ ಗುಂಪಿಗೆ ಅರ್ಹತೆ ಗಳಿಸುವ ನಮ್ಮ ಹಾದಿ ಅಷ್ಟು ಸುಲಭದ್ದಲ್ಲ. ಹಾಗಂತ ನಾವು ಕೈಕಟ್ಟಿ ಕೂರುವುದಿಲ್ಲ. ಭಾರತ ತಂಡಕ್ಕೆ ಆಘಾತ ನೀಡಲು ಶಕ್ತಿಮೀರಿ ಪ್ರಯತ್ನಿಸುತ್ತೇವೆ’ ಎಂದಿದ್ದಾರೆ.
‘ನಾನು ಮತ್ತು ಐಸಾಮ್ ಉಲ್ ಹಕ್ ಖುರೇಷಿ ಹಲವು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿದ್ದೇವೆ. ಈ ಹಿಂದೆ ಡಬಲ್ಸ್‌ನಲ್ಲೂ ಜೊತೆಯಾಗಿ ಹೋರಾಡಿದ್ದೇವೆ. ಈ ಬಾರಿ ತವರಿನಲ್ಲೇ ಭಾರತವನ್ನು ಎದುರಿಸುತ್ತಿದ್ದೇವೆ. ಇದು ನಮಗೆ ವರವಾಗಿ ಪರಿಣಮಿಸಲಿದೆ’ ಎಂದು ನುಡಿದಿದ್ದಾರೆ.
39 ವರ್ಷದ ಅಕ್ವೀಲ್, ಈ ತಿಂಗಳ ಆರಂಭದಲ್ಲಿ ಕರಾಚಿಯಲ್ಲಿ ನಡೆದಿದ್ದ ರಾಷ್ಟ್ರೀಯ ರ‍್ಯಾಂಕಿಂಗ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.
‘ಭಾರತವು ನಮ್ಮ ನೆಲದಲ್ಲಿ ಪಂದ್ಯ ಆಡಲು ಬರುತ್ತಿರುವುದು ಖುಷಿಯ ವಿಚಾರ. ಡೇವಿಸ್ ಕಪ್ ಹಣಾಹಣಿಯ ನಂತರ ಪಾಕಿಸ್ತಾನದ ಟೆನಿಸ್‌ನಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಯುವಕರು ಈ ಕ್ರೀಡೆಯನ್ನು ವೃತ್ತಿಪರವಾಗಿ ಸ್ವೀಕರಿಸಲು ಮುಂದೆ ಬರುತ್ತಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.