ADVERTISEMENT

ಪ್ರೀ ಕ್ವಾರ್ಟರ್ ಪ್ರವೇಶಿಸಿದ ಪ್ರಜ್ಞೇಶ್‌

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ರಾಮಕುಮಾರ್‌ಗೆ ಗೆಲುವು

ಜಿ.ಶಿವಕುಮಾರ
Published 12 ಫೆಬ್ರುವರಿ 2020, 20:00 IST
Last Updated 12 ಫೆಬ್ರುವರಿ 2020, 20:00 IST
ಪ್ರಜ್ಞೇಶ್‌ ಗುಣೇಶ್ವರನ್‌ ಸಂಭ್ರಮ –ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಪ್ರಜ್ಞೇಶ್‌ ಗುಣೇಶ್ವರನ್‌ ಸಂಭ್ರಮ –ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌   

ಬೆಂಗಳೂರು: ಮಿಂಚಿನ ಏಸ್, ಶರವೇಗದ ಸರ್ವ್‌ ಹಾಗೂ ಬೇಸ್‌ಲೈನ್‌ ಹೊಡೆತಗಳ ಮೂಲಕ ‘ಸಿಲಿಕಾನ್‌ ಸಿಟಿ’ಯ ಅಭಿಮಾನಿಗಳನ್ನು ಪುಳಕಿತರ ನ್ನಾಗಿಸಿದ ಪ್ರಜ್ಞೇಶ್‌ ಗುಣೇಶ್ವರನ್‌, ಬೆಂಗ ಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಬುಧವಾರ ಜಯದ ಸಿಹಿ ಸವಿದರು.

ಕಬ್ಬನ್‌ ಉದ್ಯಾನದಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ‘ಸೆಂಟರ್‌ ಕೋರ್ಟ್‌’ನಲ್ಲಿ ನಡೆದ ಪುರು ಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪೈಪೋಟಿಯಲ್ಲಿ ಪ್ರಜ್ಞೇಶ್‌ 6–2, 4–6, 6–4ರಲ್ಲಿ ಜರ್ಮನಿಯ ಸೆಬಾಸ್ಟಿಯನ್‌ ಫೆನ್ಸೆಲೋವ್‌ ಅವರನ್ನು ಪರಾಭವಗೊಳಿಸಿದರು.

ಎರಡು ಗಂಟೆ ಒಂದು ನಿಮಿಷ ನಡೆದ ಈ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್‌ ಪ್ರಜ್ಞೇಶ್‌ ಅನೇಕ ತಪ್ಪುಗಳನ್ನು ಮಾಡಿದರು. ಹೀಗಿದ್ದರೂ ಛಲ ಬಿಡದೆ ಹೋರಾಡಿ ಖುಷಿಯ ಕಡಲಲ್ಲಿ ತೇಲಿದರು.

ADVERTISEMENT

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 122ನೇ ಸ್ಥಾನದಲ್ಲಿರುವ ಪ್ರಜ್ಞೇಶ್‌, ಪಂದ್ಯದಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದರು. ನಂತರ ಸರ್ವ್‌ ಉಳಿಸಿಕೊಂಡು 2–0 ಮುನ್ನಡೆ ಪಡೆದರು. ಈ ಹಂತದಲ್ಲಿ ಪುಟಿದೆದ್ದ ಫೆನ್ಸೆಲೋವ್‌ ನಾಲ್ಕನೇ ಗೇಮ್‌ನಲ್ಲಿ ಭಾರತದ ಆಟಗಾರನ ಸರ್ವ್‌ ಮುರಿದು 2–2 ಸಮಬಲ ಸಾಧಿಸಿದರು.

ಐದು ಮತ್ತು ಆರನೇ ಗೇಮ್‌ಗಳಲ್ಲಿ ಪ್ರಜ್ಞೇಶ್‌ ಮೇಲುಗೈ ಸಾಧಿಸಿದರು. 12 ನಿಮಿಷ ನಡೆದ ಏಳನೇ ಗೇಮ್‌ನಲ್ಲಿ ಇಬ್ಬರೂ ಜಿದ್ದಿಗೆ ಬಿದ್ದವರ ಹಾಗೆ ಸೆಣಸಿದರು. ‘ಸುದೀರ್ಘ ರ‍್ಯಾಲಿ’ಯ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಚೆಂಡನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡಿ ಗೇಮ್‌ ಪಾಯಿಂಟ್‌ ಕಲೆಹಾಕಲು ಪ್ರಯತ್ನಿಸಿದ ಫೆನ್ಸೆಲೋವ್‌ ಕೈಸುಟ್ಟುಕೊಂಡರು. ಚೆಂಡನ್ನು ಅಂಗಳದ ಆಚೆ ಬಾರಿಸಿ ಸರ್ವ್‌ ಕೈಚೆಲ್ಲಿದ ಅವರು ನಂತರದ ಗೇಮ್‌ನಲ್ಲಿ ಪ್ರಜ್ಞೇಶ್‌ ಸಿಡಿಸಿದ ಏಸ್‌ಗಳಿಗೆ ನಿರುತ್ತರರಾದರು. ಹೀಗಾಗಿ 39 ನಿಮಿಷಗಳ ಕಾಲ ನಡೆದ ಈ ಸೆಟ್‌ ಭಾರತದ ಆಟಗಾರನ ಕೈವಶವಾಯಿತು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 609ನೇ ಸ್ಥಾನದಲ್ಲಿರುವ ಫೆನ್ಸೆಲೋವ್‌ 40 ನಿಮಿಷ ನಡೆದ ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದರು. ಮೂರನೇ ಗೇಮ್‌ನಲ್ಲಿ ಸರ್ವ್‌ ಕಳೆದುಕೊಂಡ ಜರ್ಮನಿಯ ಆಟಗಾರ 1–3 ಹಿನ್ನಡೆ ಕಂಡಿದ್ದರು. ಹೀಗಿದ್ದರೂ ಛಲ ಬಿಡದ ಅವರು ಆರು ಮತ್ತು 10ನೇ ಗೇಮ್‌ಗಳಲ್ಲಿ ಭಾರತದ ಆಟಗಾರನ ಸರ್ವ್‌ಗಳನ್ನು ಮುರಿದು 1–1 ಸಮಬಲ ಸಾಧಿಸಿದರು.

ನಿರ್ಣಾಯಕ ಮೂರನೇ ಸೆಟ್‌ನ ಮೊದಲ ಆರು ಗೇಮ್‌ಗಳಲ್ಲಿ ಇಬ್ಬರೂ ಸಮಬಲದಿಂದ ಸೆಣಸಿದರು. ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದ ಪ್ರಜ್ಞೇಶ್‌, ನಂತರ ಅನೇಕ ಬಾರಿ ಡಬಲ್‌ ಫಾಲ್ಟ್‌ಗಳನ್ನು ಮಾಡಿದರು. ಫೋರ್‌ಹ್ಯಾಂಡ್‌ ರಿಟರ್ನ್‌ ವೇಳೆ ಚೆಂಡನ್ನು ಪದೇ ಪದೇ ನೆಟ್‌ಗೆ ಬಾರಿಸಿ ಪಾಯಿಂಟ್‌ ಕೈಚೆಲ್ಲಿದರು. ಈ ತಪ್ಪುಗಳನ್ನು ಬೇಗನೇ ತಿದ್ದಿಕೊಂಡ ಅವರು ನಂತರ ಗುಣಮಟ್ಟದ ಆಟ ಆಡಿ ಪಂದ್ಯ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ರಾಮಕುಮಾರ್‌ ರಾಮನಾಥನ್‌ 6–1, 6–3ರಲ್ಲಿ ಅಭಿನವ್‌ ಸಂಜೀವ್‌ ಷಣ್ಮುಗಂ ಅವರನ್ನು ಸೋಲಿಸಿದರು. ಈ ಹೋರಾಟ ಕೇವಲ 47 ನಿಮಿಷಗಳಲ್ಲಿ ಮುಗಿಯಿತು.

2 ಗಂಟೆ 21 ನಿಮಿಷ ನಡೆದ ಮತ್ತೊಂದು ಹೋರಾಟದಲ್ಲಿ ಪೋರ್ಚುಗಲ್‌ನ ಫೆಡೆರಿಕೊ ಪೆರೇರಾ ಸಿಲ್ವಾ 6–3, 3–6, 7–5ರಲ್ಲಿ ಕಿಮ್ಮರ್‌ ಕೊಪ್ಪೆಜನ್ಸ್‌ ವಿರುದ್ಧ ಗೆದ್ದರು.

ಆಸ್ಟ್ರೇಲಿಯಾದ ಆಟಗಾರ, ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿರುವ ಜೇಮ್ಸ್‌ ಡಕ್ವರ್ಥ್‌ 6–4, 7–6ರಲ್ಲಿ ಖುಮೊಯುನ್‌ ಸುಲ್ತಾನೋವ್‌ ಅವರನ್ನು ಮಣಿಸಿದರು.

ಇಟಲಿಯ ಜೂಲಿಯನ್‌ ಒಸ್ಲೆಪ್ಪೊ 6–1, 6–3 ನೇರ ಸೆಟ್‌ಗಳಿಂದ ಚೀನಾದ ಜಿಜೆನ್‌ ಜಾಂಗ್‌ಗೆ ಆಘಾತ ನೀಡಿದರು. ಜಿಜೆನ್‌ ಅವರು 10ನೇ ಶ್ರೇಯಾಂಕ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.