ADVERTISEMENT

ಟೆನಿಸ್ | ಪ್ರಶಸ್ತಿಗೆ ಸೌಜನ್ಯ - ಪ್ರಾಂಜಲ ಸೆಣಸು

ಪೈಪೋಟಿ ನೀಡಿದ ಶ್ರೀವಲ್ಲಿ, ಋತುಜಾ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 13:58 IST
Last Updated 4 ಡಿಸೆಂಬರ್ 2021, 13:58 IST
ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಸೌಜನ್ಯ ಬಾವಿಸೆಟ್ಟಿ (ಎಡ) ಮತ್ತು ಋತುಜಾ ಭೋಸಲೆ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌
ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಸೌಜನ್ಯ ಬಾವಿಸೆಟ್ಟಿ (ಎಡ) ಮತ್ತು ಋತುಜಾ ಭೋಸಲೆ –ಪ್ರಜಾವಾಣಿ ಚಿತ್ರ/ಎಸ್‌.ಕೆ.ದಿನೇಶ್‌   

ಬೆಂಗಳೂರು: ಹೈದರಾಬಾದ್‌ನ ಆಟಗಾರ್ತಿಯರಾದ ಸೌಜನ್ಯ ಬಾವಿಸೆಟ್ಟಿ ಮತ್ತು ಪ್ರಾಂಜಲ ಯಡ್ಲಪಲ್ಲಿ ಅವರು ಮಹಿಳೆಯರ ವಿಶ್ವ ಟೆನಿಸ್ ಟೂರ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಗಾಗಿ ಭಾನುವಾರ ಸೆಣಸುವರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಪ್ರಾಂಜಲ 3-6, 6-3, 7-5ರಲ್ಲಿ ಶ್ರೀವಲ್ಲಿ ರಶ್ಮಿಕಾ ಅವರನ್ನೂ ಸೌಜನ್ಯ 4-6, 6-4, 6-2ರಲ್ಲಿ ಋತುಜಾ ಭೋಲಸೆ ಅವರನ್ನೂ ಮಣಿಸಿದರು.

ಅರ್ಹತಾ ಸುತ್ತಿನಲ್ಲಿ ಆಡಿ ಮುಖ್ಯ ಸುತ್ತು ಪ್ರವೇಶಿಸಿದ್ದ ಶ್ರೀವಲ್ಲಿ ಅವರು ಪ್ರಾಂಜಲ ಅವರಿಗೆ ಭಾರಿ ‍ಪೈಪೋಟಿ ನೀಡಿದರು. ನಿರ್ಣಾಯಕ ಸೆಟ್‌ನ ಐದನೇ ಗೇಮ್‌ ವರೆಗೂ ಅವರು ಛಲದಿಂದ ಕಾದಾಡಿದರು.

ADVERTISEMENT

ಮೊದಲ ಸೆಟ್‌ನಲ್ಲಿ ಸೋತ ಪ್ರಾಂಜಲ ಎರಡನೇ ಸೆಟ್‌ನಲ್ಲಿ ಪುಟಿದೆದ್ದು ತಿರುಗೇಟು ನೀಡಿದರು. ಮೂರನೇ ಸೆಟ್‌ನ ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಅನಾರೋಗ್ಯವೂ ಕಾಣಿಸಿಕೊಂಡ ಕಾರಣ ವೈದ್ಯಕೀಯ ನೆರವು ಪಡೆದುಕೊಂಡರು. ಚೇತರಿಸಿಕೊಂಡು ಕಣಕ್ಕೆ ವಾಪಸಾದ ಅವರು ಅಮೋಘ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. ತಪ್ಪುಗಳನ್ನು ಎಸಗಿದ ಶ್ರೀವಲ್ಲಿ ಸೋಲಿಗೆ ಶರಣರಾದರು.

ಸೌಜನ್ಯ ಮತ್ತು ಋತುಜಾ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರು. ‌ ಎದುರಾಳಿಯ ದೌರ್ಬಲ್ಯಗಳನ್ನು ಅರಿತುಕೊಂಡು ಇಬ್ಬರೂ ಪಾಯಿಂಟ್ ಕಲೆ ಹಾಕಲು ಪ್ರಯತ್ನಿಸಿದರು. 27 ವರ್ಷದ ಸೌಜನ್ಯ ಹೆಚ್ಚು ಯಶಸ್ಸು ಕಂಡರು.

ಸೆಮಿಫೈನಲ್ ಫಲಿತಾಂಶಗಳು: ಸೌಜನ್ಯ ಬಾವಿಸೆಟ್ಟಿಗೆ4-6, 6-4, 6-2ರಲ್ಲಿ ಋತುಜಾ ಭೋಜಲೆ ವಿರುದ್ಧ ಜಯ; ಪ್ರಾಂಜಲ ಯಡ್ಲಪಲ್ಲಿಗೆ3-6, 6-3, 7-5ರಲ್ಲಿ ಶ್ರೀವಲ್ಲಿ ರಶ್ಮಿಕಾ ಎದುರು ಗೆಲುವು.

ಋತುಜಾ ಜೋಡಿಗೆ ಪ್ರಶಸ್ತಿ

ಸೆಮಿಫೈನಲ್‌ನಲ್ಲಿ ಸೆಣಸಿದ್ದ ಸೌಜನ್ಯ ಮತ್ತು ಋತುಜಾ ಅವರು ಡಬಲ್ಸ್‌ನಲ್ಲಿ ಜೊತೆಯಾಗಿ ಆಡಿ ಪ್ರಶಸ್ತಿ ಗೆದ್ದುಕೊಂಡರು. ಫೈನಲ್‌ನಲ್ಲಿ ಅವರು ವೈದೇಹಿ ಚೌಧರಿ ಮತ್ತು ಮಿಹಿಕಾ ಯಾದವ್ ವಿರುದ್ಧ 6–0, 6–3ರಲ್ಲಿ ಗೆಲುವು ಸಾಧಿಸಿದರು. ಶುಕ್ರವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸಾಯಿ ಸಂಹಿತಾ ಮತ್ತು ಸೋಹಾ ಸಾದಿಕ್ ವಿರುದ್ಧ ಅವರು 7-5, 6-1ರಲ್ಲಿ ಜಯ ಗಳಿಸಿದ್ದರು.

***

ಗೆಲ್ಲುವುದೊಂದೇ ನನ್ನ ಗುರಿಯಾಗಿತ್ತು. ಅದು ಹೇಗೆ ಸಾಧ್ಯವಾಯಿತು ಎಂದೇ ಗೊತ್ತಾಲಿಲ್ಲ. ಎದುರಾಳಿಯ ಸಾಮರ್ಥ್ಯ ಗೊತ್ತಿದ್ದ ಕಾರಣ ನರೀಕ್ಷೆ ಇತ್ತು.

- ಪ್ರಾಂಜಲ ಯಡ್ಲಪ‌ಲ್ಲಿ ಹೈದರಾಬಾದ್ ಆಟಗಾರ್ತಿ

***

ಋತುಜಾಗೆ ನನ್ನ ಸಾಮರ್ಥ್ಯ ಮತ್ತು ದೌರ್ಬಲ್ಯದ ಬಗ್ಗೆ ಗೊತ್ತು. ಆದ್ದರಿಂದ ನಾನು ಆರಂಭದಲ್ಲಿ ಆತಂಕಕ್ಕೆ ಒಳಗಾಗಿದ್ದೆ. ಪಂದ್ಯ ಮುಂದೆ ಸಾಗಿದಂತೆ ಹಿಡಿತ ಸಾಧಿಸಿದೆ.

- ಸೌಜನ್ಯ ಬಾವಿಸೆಟ್ಟಿ ಹೈದರಾಬಾದ್ ಆಟಗಾರ್ತಿ

***

ಫೈನಲ್ ಹಣಾಹಣಿ

ಸೌಜನ್ಯಾ ಬಾವಿಸೆಟ್ಟಿ–ಪ್ರಾಂಜಲ ಯಡ್ಲಪಲ್ಲಿ

ಆರಂಭ: ಬೆಳಿಗ್ಗೆ 11.00

ಸ್ಥಳ: ಕೆಎಸ್‌ಎಲ್‌ಟಿಎ ಅಂಗಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.