ADVERTISEMENT

ಕೆಂಪು ಮಣ್ಣಿನಂಗಳದಲ್ಲಿ ನಡಾಲ್‌ಗಿಲ್ಲ ಸಾಟಿ

ಬಸವರಾಜ ದಳವಾಯಿ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
12ನೇ ಪ್ರಶಸ್ತಿ ಎತ್ತಿಹಿಡಿದ ನಡಾಲ್‌–ರಾಯಿಟರ್ಸ್ ಚಿತ್ರ
12ನೇ ಪ್ರಶಸ್ತಿ ಎತ್ತಿಹಿಡಿದ ನಡಾಲ್‌–ರಾಯಿಟರ್ಸ್ ಚಿತ್ರ   

ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಫ್ರೆಂಚ್‌ ಓಪನ್‌ ಕಿರೀಟವನ್ನು 12ನೇ ಬಾರಿ ಧರಿಸುವ ಮೂಲಕ ಕೆಂಪು ಮಣ್ಣಿನ ಅಂಗಣಕ್ಕೆ ತಾನೇ ‘ದೊರೆ’ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇದು ಅವರ ಒಟ್ಟು 18ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಕೂಡ ಹೌದು.

ಇದೇ ಜೂನ್‌ 9ರಂದು ನಡೆದ ಫ್ರೆಂಚ್‌ ಓಪನ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಅಸ್ಟ್ರಿಯಾದ ಡೊಮಿನಿಕ್‌ ಥೀಮ್‌ ಅವರನ್ನು ನಡಾಲ್‌ ಸುಲಭವಾಗಿ ಮಣಿಸಿದರು. 2018ರ ಫೈನಲ್‌ನಲ್ಲೂ ನಡಾಲ್‌–ಥೀಮ್‌ ಮುಖಾಮುಖಿಯಾಗಿದ್ದರು ಎಂಬುದು ವಿಶೇಷ.

2005ರಿಂದ ಆರಂಭವಾದ ಫ್ರೆಂಚ್‌ ಅಭಿಯಾನ

ADVERTISEMENT

19 ವರ್ಷದವರಿದ್ದಾಗ 2005ರಲ್ಲಿ ಮೊದಲ ಬಾರಿ ಈ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ನಡಾಲ್‌ ಸತತ ನಾಲ್ಕು ವರ್ಷ ಪ್ರಶಸ್ತಿ ಮೇಲೆ ಒಡೆತನ ಸಾಧಿಸಿದ್ದರು. 2009ರ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಅವರಿಗೆ ಸೋಲು ಕಾದಿತ್ತು. ಸ್ವೀಡನ್‌ ಆಟಗಾರ ರಾಬಿನ್‌ ಸೋಡರ್ಲಿಂಗ್‌ ಎದುರು ‘ರಫಾ’ ಮುಗ್ಗರಿಸಿದ್ದರು. ಆ ಟೂರ್ನಿಯ ಪ್ರಶಸ್ತಿ ಫೆಡರರ್‌ ಪಾಲಾಗಿತ್ತು. ಮರುವರ್ಷವೇ ಪುಟಿದೆದ್ದ ನಡಾಲ್‌ 2010ರಿಂದ 2014ರವರೆಗೆ ಕೆಂಪು ಮಣ್ಣಿನ ಅಂಗಣವನ್ನು ಆಳಿದರು. 2015ರ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಜೊಕೊವಿಚ್‌ ಎದುರು ಸೋತಿದ್ದರು. ಆದರೆ ಪ್ರಶಸ್ತಿಗೆ ಸ್ಟ್ಯಾನಿಸ್ಲಾವ್‌ ವಾವ್ರಿಂಕಾ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2016ರಲ್ಲಿ ಮಣಿಕಟ್ಟಿನ ಗಾಯದ ಕಾರಣ ಸ್ಪೇನ್‌ ಆಟಗಾರ ಎರಡನೇ ಸುತ್ತಿನ ಪಂದ್ಯದ ನಂತರ ಹಿಂದೆ ಸರಿದರು. ಜೊಕೊವಿಚ್‌ ಪ್ರಶಸ್ತಿ ಗೆದ್ದರು.

ಫ್ರೆಂಚ್‌ ಓಪನ್‌ನ 12 ಪ್ರಶಸ್ತಿಗಳ ಹಾದಿಯಲ್ಲಿ ನಾಲ್ಕು ಬಾರಿ ರೋಜರ್‌ ಫೆಡರರ್‌ ಅವರಿಗೆ ನಡಾಲ್‌ ಸೋಲಿನ ರುಚಿ ತೋರಿಸಿದ್ದಾರೆ. ತಲಾ ಎರಡು ಬಾರಿ ನೊವಾಕ್‌ ಜೊಕೊವಿಚ್‌ ಹಾಗೂ ಡೊನಿಮಿಕ್‌ ಥೀಮ್‌ ಅವರನ್ನು ಮಣಿಸಿದ್ದಾರೆ. ಮರಿಯಾನೊ ಪ್ಯುವರ್ಟಾ, ರಾಬಿನ್ ಸೋಡರ್ಲಿಂಗ್‌, ಸ್ಟ್ಯಾನಿಸ್ಲಾವ್‌ ವಾವ್ರಿಂಕಾ ಹಾಗೂ ಡೇವಿಡ್‌ ಫೆರರ್‌ ಅವರನ್ನು ತಲಾ ಒಂದು ಬಾರಿ ಸೋಲಿಸಿದ್ದಾರೆ. ಫೆಡರರ್‌ ಅವರನ್ನು ಒಂದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ನಾಲ್ಕು ಫೈನಲ್‌ನಲ್ಲಿ ಸೋಲಿಸಿದ ವಿಶ್ವದ ಏಕೈಕ ಆಟಗಾರ ನಡಾಲ್‌. ಒಂದೇ ಪ್ರಮುಖ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು 12 ಬಾರಿ ಗೆದ್ದ ದಾಖಲೆಯೂ ಅವರ ಪಾಲಾಗಿದೆ. ಫ್ರೆಂಚ್‌ ಓಪನ್‌ನಲ್ಲಿ ಆಡಿದ 95 ಪಂದ್ಯಗಳಲ್ಲಿ ಅವರು ಸೋತಿದ್ದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ.

ಕೆಂಪುಮಣ್ಣಿನ ಅಂಗಣದಲ್ಲಿ 59 ಪ್ರಶಸ್ತಿಗಳು

2005–2007ರ ಅವಧಿಯಲ್ಲಿಕೆಂಪು ಮಣ್ಣಿನ ಅಂಗಣದ ಸತತ 81 ಪಂದ್ಯಗಳಲ್ಲಿ ಜಯದ ನಗಾರಿ ಬಾರಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಕೆಂಪು ಮಣ್ಣಿನ ಅಂಗಣದಲ್ಲಿ ಒಟ್ಟು 59 ಪ್ರಶಸ್ತಿಗಳು ನಡಾಲ್‌ ಮುಡಿಗೇರಿವೆ. ಮೊಂಟೆ ಕಾರ್ಲೊ ಟೂರ್ನಿಯ ಸತತ ಎಂಟು ಟ್ರೋಫಿಗಳ ಮೇಲೆ ರಫೆಲ್‌ ತಮ್ಮ ಹೆಸರು ಬರೆಸಿಕೊಂಡಿದ್ದಾರೆ. ಅವರು ಕೇವಲ ಕೆಂಪು ಮಣ್ಣಿನ ಅಂಗಣಕ್ಕೆ ಸೀಮಿತವಾಗಿಲ್ಲ. 400ಕ್ಕಿಂತ ಅಧಿಕ ಪಂದ್ಯಗಳನ್ನು ಹಾರ್ಡ್ ಕೋರ್ಟ್ ಅಂಗಣದಲ್ಲೂ ಗೆದ್ದ ಸಾಧನೆ ಅವರದಾಗಿದೆ. ಒಟ್ಟಾರೆ 82 ಪ್ರಶಸ್ತಿಗಳ ಒಡೆಯ ನಡಾಲ್‌.

ಫ್ರೆಂಚ್‌ ಓಪನ್‌ ಅಲ್ಲದೆ 2010, 2013 ಹಾಗೂ 2017ರಲ್ಲಿ ಯುಎಸ್‌ ಓಪನ್‌, ವಿಂಬಲ್ಡನ್‌ ಎರಡು ಬಾರಿ (2008, 2010) ತಲಾ ಒಂದು ಬಾರಿ ಆಸ್ಟ್ರೇಲಿಯನ್‌ ಓಪನ್‌ ಹಾಗೂ ಒಲಿಂಪಿಕ್‌ ಗೇಮ್ಸ್‌ನಲ್ಲಿ ನಡಾಲ್‌ ಚಾಂಪಿಯನ್‌ ಆಗಿದ್ದಾರೆ. ಮುಂಬರುವ ಪ್ರಮುಖ ಟೂರ್ನಿ ವಿಂಬಲ್ಡನ್‌ಗೆ ನಡಾಲ್‌ ಸಿದ್ಧವಾಗುತ್ತಿದ್ದಾರೆ. ತನಗಿನ್ನೂ ಪ್ರಶಸ್ತಿ ಹಸಿವು ತಣಿದಿಲ್ಲ ಎಂಬುದನ್ಜು ಎಂಬುದನ್ನು ಚಾಂಪಿಯನ್‌ ಆಟಗಾರ ನಿರೂಪಿಸುತ್ತಲೇ ಸಾಗಿದ್ದಾರೆ.

ಕ್ರೀಡಾಪಟುಗಳಿಗೆ ಮಾದರಿ...

ಟೆನಿಸ್‌ ಭಾರೀ ತಾಳ್ಮೆ, ಸಹನೆಯನ್ನು ಬೇಡುವ ಆಟ. ದೇಹದ ಫಿಟ್‌ನೆಸ್‌ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ಆಸ್ಟ್ರೇಲಿಯಾದ ಕೇನ್‌ ರೂಸ್‌ವೆಲ್‌ 1974ರಲ್ಲಿ ತಮ್ಮ 39ನೇ ವಯಸ್ಸಿನಲ್ಲಿ ವಿಂಬಲ್ಡನ್‌ ಹಾಗೂ ಯುಎಸ್‌ ಓಪನ್‌ ಟೂರ್ನಿಗಳ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದರು. ‘ಅಮೆರಿಕಾದ ಆ್ಯಂಡ್ರೆ ಅಗಾಸ್ಸಿ ಅವರನ್ನು ಅವರ ವೃತ್ತಿಜೀವನದ ಅಂತ್ಯದ ವೇಳೆ ಪಂದ್ಯವೊಂದರಲ್ಲಿ ಎದುರಿಸುವ ಅವಕಾಶ ಸಿಕ್ಕಿದ್ದು ನನ್ನ ಜೀವನದ ಮಹತ್ವದ ಕ್ಷಣ. ಹಾಗೆಯೇ ಯುವ ಆಟಗಾರರು ನನ್ನೊಂದಿಗೆ ಆಡುವ ಅವಕಾಶ ಸಿಕ್ಕರೆ ಅವರಿಗದು ಮಹಾನ್‌ ಸಂಗತಿ ಅನಿಸುತ್ತದೆ ಎಂದು ನಂಬಿದ್ದೇನೆ’ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ರೋಜರ್‌ ಫೆಡರರ್‌ ಹೇಳಿದ್ದರು. ನಡಾಲ್‌, ಫೆಡರರ್‌, ಜೊಕೊವಿಚ್‌ ಅವರಂತಹ ಖ್ಯಾತನಾಮರನ್ನು ಯುವ ಕ್ರೀಡಾಪಟುಗಳು ಮಾದರಿಯಾಗಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.