ADVERTISEMENT

‘ಕವಲುದಾರಿ’ಯಲ್ಲಿ ಸೈನಾ, ಶ್ರೀಕಾಂತ್‌

ಜಿ.ಶಿವಕುಮಾರ
Published 22 ಮಾರ್ಚ್ 2020, 19:45 IST
Last Updated 22 ಮಾರ್ಚ್ 2020, 19:45 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಕೋವಿಡ್‌ ಪಿಡುಗು ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇಇದೆ. ಕ್ರೀಡಾಲೋಕದ ಮೇಲೂ ಇದರ ಕಾರ್ಮೋಡ ಕವಿದಿದೆ. ಒಲಿಂಪಿಕ್ಸ್‌ ವರ್ಷದಲ್ಲೇ ಕೊರೊನಾ ಅಬ್ಬರ ಜೋರಾಗಿರುವುದರಿಂದ ಕ್ರೀಡಾಪಟುಗಳಲ್ಲೂ ತಲ್ಲಣ ಶುರುವಾಗಿದೆ. ಟೋಕಿಯೊ ಕೂಟಕ್ಕೆ ಅರ್ಹತೆ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ದಿನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಡ್ಮಿಂಟನ್‌ ಕ್ಷೇತ್ರದ ಮೇಲೂ ಇದರ ಪರಿಣಾಮ ಗಾಢವಾಗಿದೆ.

ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ವೇದಿಕೆಯಾ‌ಗಿದ್ದ ಟೂರ್ನಿಗಳೆಲ್ಲಾ ಒಂದೊಂದಾಗೇ ರದ್ದಾಗುತ್ತಿವೆ. ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ (ಬಿಡಬ್ಲ್ಯುಎಫ್‌) ಈ ನಿರ್ಧಾರದಿಂದಾಗಿ ಭಾರತದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌ ಅವರ ಒಲಿಂಪಿಕ್ಸ್‌ ಭವಿಷ್ಯ ಡೋಲಾಯಮಾನವಾಗಿದೆ.

ಬ್ಯಾಡ್ಮಿಂಟನ್‌ನಲ್ಲಿ ಐದು ವಿಭಾಗಗಳಿಂದ (ಮಹಿಳಾ ಮತ್ತು ಪುರುಷರ ಸಿಂಗಲ್ಸ್‌ ಹಾಗೂ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌) 172 ಮಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಕೂಟಕ್ಕೆ ಅರ್ಹತೆ ಗಳಿಸಲು ಏಪ್ರಿಲ್‌ 28 ಕೊನೆಯ ದಿನವಾಗಿದೆ.

ADVERTISEMENT

ಸೈನಾ ಹಾದಿ ಏಕಿಷ್ಟು ಕಷ್ಟ...

ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ಸ್‌ ಪದಕ ಗೆದ್ದುಕೊಟ್ಟ ಹೆಗ್ಗಳಿಕೆ ಸೈನಾ ಅವರದ್ದು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ನಾಲ್ಕು ವರ್ಷಗಳ ಬಳಿಕ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದಿದ್ದ ‘ಕ್ರೀಡಾ ಮೇಳ’ದಲ್ಲೂ ಆಡಿದ್ದರು.

ಸತತ ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವರ ಹಾದಿ ಈಗ ದುರ್ಗಮವಾಗಿದೆ. 2019ರಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಸತತ ವೈಫಲ್ಯ ಕಂಡಿದ್ದೇ ಇದಕ್ಕೆ ಕಾರಣ.

ಹೋದ ವರ್ಷ ಸೈನಾ, 16 ಟೂರ್ನಿಗಳನ್ನು ಆಡಿದ್ದರು. ಜನವರಿಯಲ್ಲಿ ನಡೆದಿದ್ದ ಇಂಡೊನೇಷ್ಯಾ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಬಳಿಕ ಆರು ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ಹಂತಕ್ಕೇರಿದ್ದರು. ಉಳಿದ ಒಂಬತ್ತು ಟೂರ್ನಿಗಳಲ್ಲಿ ಮೊದಲ ಹಾಗೂ ಎರಡನೇ ಸುತ್ತುಗಳಲ್ಲೇ ಮುಗ್ಗರಿಸಿದ್ದರು. 2020ರ ಋತುವಿನಲ್ಲೂ ಸೈನಾ ವೈಫಲ್ಯ ಮುಂದುವರಿದಿದೆ. ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲೇಬೇಕೆಂದು ದೃಢವಾಗಿ ನಿಶ್ಚಯಿಸಿದ್ದ ಅವರು ಇದಕ್ಕಾಗಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಿಂದಲೂ (ಪಿಬಿಎಲ್‌) ಹಿಂದೆ ಸರಿದಿದ್ದರು. ಆದರೆ ಇದರಿಂದ ಯಾವುದೇ ಲಾಭವಾಗಲಿಲ್ಲ.

ಪ್ರತಿಷ್ಠಿತ ಆಲ್‌ ಇಂಗ್ಲೆಂಡ್‌ ಓಪನ್‌ ಸೇರಿದಂತೆ ಹಲವು ಟೂರ್ನಿಗಳಲ್ಲಿ ಆರಂಭಿಕ ಆಘಾತಗಳನ್ನು ಅನುಭವಿಸಿದ ಅವರು ‘ರೇಸ್‌ ಟು ಟೋಕಿಯೊ’ ಕ್ರಮಾಂಕ ಪಟ್ಟಿಯಲ್ಲಿ 22ನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರ ಖಾತೆಯಲ್ಲಿ ಇರುವುದು41,847 ಪಾಯಿಂಟ್ಸ್‌ಗಳಷ್ಟೇ.

ಇನ್ನೂ ಅವಕಾಶ ಇದೆಯೇ ?

ಸಿಂಗಲ್ಸ್‌ನಲ್ಲಿ ಒಂದು ರಾಷ್ಟ್ರದಿಂದ ಇಬ್ಬರು ಆಟಗಾರ್ತಿಯರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.

ಜಪಾನ್‌ನ ನೊಜೊಮಿ ಒಕುಹರಾ ಮತ್ತು ಅಕಾನೆ ಯಮಗುಚಿ ಅವರು ಒಲಿಂಪಿಕ್ಸ್‌ನಲ್ಲಿ ಆಡುವುದು ಖಚಿತವಾಗಿರುವುದರಿಂದ ಈ ದೇಶದ ಟಕಹಾಶಿ ಮತ್ತು ಅಯಾ ಒಹೋರಿ ಅವರಿಗೆ ಸ್ಥಾನ ಸಿಗುವುದು ಕಷ್ಟ. ದಕ್ಷಿಣ ಕೊರಿಯಾದ ‘ಕೋಟಾ’ದಿಂದಾ ಆ್ಯನ್‌ ಸೆ ಯಂಗ್‌ ಮತ್ತು ಕಿಮ್‌ ಗಾ ಯುನ್‌ ಅವರಿಗೆ ಅವಕಾಶ ಸಿಗಲಿದೆ. ಹೀಗಾಗಿ ಈ ದೇಶದ ಸಂಗ್‌ ಜಿ ಹ್ಯುನ್‌ಗೆ ಟೋಕಿಯೊ ಬಾಗಿಲು ಮುಚ್ಚಿದೆ. ಚೀನಾದ ಚೆನ್‌ ಯೂಫಿ ಮತ್ತು ಹೀ ಬಿಂಗ್‌ಜಿಯಾವೊಗೆ ಟಿಕೆಟ್‌ ಖಚಿತವಾಗಿರುವುದರಿಂದ ವಾಂಗ್‌ ಝಿಯಿ ಹಾದಿ ದುರ್ಗಮವಾಗಿದೆ.

ಟಕಹಾಶಿ, ಒಹೋರಿ, ಸಂಗ್‌ ಜಿ ಮತ್ತು ವಾಂಗ್‌ ಅವರು ಕ್ರಮಾಂಕ ಪಟ್ಟಿಯಲ್ಲಿ ಸೈನಾಗಿಂತಲೂ ಮೇಲಿದ್ದಾರೆ. ಇವರು ‘ಟೋಕಿಯೊ ರೇಸ್‌’ನಿಂದ ಹೊರಬಿದ್ದರೆ ಉಳಿದ ಇಬ್ಬರನ್ನು (ಅಮೆರಿಕದ ಬಿವೇನ್‌ ಜಾಂಗ್‌ ಮತ್ತು ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಡ್ತ್‌) ಸೈನಾ ಹಿಂದಿಕ್ಕಬೇಕಾಗುತ್ತದೆ.

ಬಿಡಬ್ಲ್ಯುಎಫ್‌, ಒಲಿಂಪಿಕ್ಸ್‌ ಅರ್ಹತೆಗೆ ನಿಗದಿಪಡಿಸಿರುವ ದಿನಾಂಕವನ್ನು ಮುಂದೂಡುವ ಜೊತೆಗೆ, ಈಗ ರದ್ದು ಮಾಡಿರುವ ಟೂರ್ನಿಗಳ ಬದಲು ಬೇರೆ ಟೂರ್ನಿಗಳನ್ನು ಒಲಿಂಪಿಕ್ಸ್‌ ಅರ್ಹತೆಗೆ ಮಾನದಂಡವಾಗಿ ಪರಿಗಣಿಸಿದರೆ ಮಾತ್ರ ಸೈನಾ ಅವರ ಒಲಿಂಪಿಕ್ಸ್‌ ಕನಸಿಗೆ ರೆಕ್ಕೆ ಮೂಡಲಿದೆ.

ಶ್ರೀಕಾಂತ್‌ ಕಥೆ ಏನು..

2017ರ ಮಾತು. ಆ ವರ್ಷ ಬಿಡಬ್ಲ್ಯುಎಫ್‌ ಸೂಪರ್‌ ಸೀರಿಸ್‌ನಲ್ಲಿ (ಇಂಡಿಯಾ, ಆಸ್ಟ್ರೇಲಿಯಾ, ಫ್ರೆಂಚ್‌ ಹಾಗೂ ಡೆನ್ಮಾರ್ಕ್‌ ಓ‍‍ಪನ್‌) ಸತತ ನಾಲ್ಕು ಪ್ರಶಸ್ತಿಗಳನ್ನು ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದ ಕಿದಂಬಿ ಶ್ರೀಕಾಂತ್‌, ಮರು ವರ್ಷ ಬಿಡಬ್ಲ್ಯುಎಫ್‌ ವಿಶ್ವ ಕ್ರಮಾಂಕ ಪಟ್ಟಿಯ ಸಿಂಗಲ್ಸ್‌ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿ ದಾಖಲೆ ಬರೆದಿದ್ದರು. ಅದೇ ವರ್ಷ ಅವರಿಗೆ ಪದ್ಮಶ್ರೀ ಗೌರವವೂ ಒಲಿದಿತ್ತು.

ಗಾಯದ ಕಾರಣ 2018ರ ನಂತರ ಶ್ರೀಕಾಂತ್‌ ಅವರ ‘ಯಶಸ್ಸಿನ ಗ್ರಾಫ್’ ಇಳಿಮುಖವಾಗಿ ಸಾಗಿತ್ತು. ಹೀಗಾಗಿ ಅವರ ಒಲಿಂಪಿಕ್ಸ್‌ ಅರ್ಹತೆಯ ಕನಸು ಮಸುಕಾಗಿದೆ.

2019ರಲ್ಲಿ ಶ್ರೀಕಾಂತ್ 16 ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಏಳರಲ್ಲಿ ಎಂಟರ ಘಟ್ಟ ಪ್ರವೇಶಿಸಿದ್ದ ಅವರು ಉಳಿದ ಟೂರ್ನಿಗಳಲ್ಲಿ ಮೊದಲ ಅಥವಾ ಎರಡನೇ ಸುತ್ತುಗಳಲ್ಲೇ ಹೊರಬಿದ್ದಿದ್ದರು. ‘ರೇಸ್‌ ಟು ಟೋಕಿಯೊ’ ರ‍್ಯಾಂಕಿಂಗ್‌ನಲ್ಲಿ ಅವರು 22ನೇ (40,469 ಪಾಯಿಂಟ್ಸ್‌) ಸ್ಥಾನದಲ್ಲಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದ್ದ ಶ್ರೀಕಾಂತ್‌, 6000ಕ್ಕಿಂತಲೂ ಅಧಿಕ ಪಾಯಿಂಟ್ಸ್‌ ಗಳಿಸಿದರಷ್ಟೇ ಅಗ್ರ 16ರೊಳಗೆ ಸ್ಥಾನ ಗಳಿಸಬಹುದು. ಈಗಿನ ಪರಿಸ್ಥಿತಿಯಲ್ಲಿ ಇದು ಅಸಾಧ್ಯ.

ಇವರ ಹಾದಿ ಸುಗಮ...

ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರೂ ಕೂಡ ಪಿ.ವಿ.ಸಿಂಧು ‘ರೇಸ್‌ ಟು ಟೋಕಿಯೊ’ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನ ಉಳಿಸಿಕೊಂಡಿದ್ದಾರೆ. 70,754 ಪಾಯಿಂಟ್ಸ್‌ ಕಲೆಹಾಕಿರುವ ಅವರು ಟೋಕಿಯೊ ಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಆಡುವುದು ಖಚಿತ. ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್‌, ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಹಾಗೂ ಚಿರಾಗ್‌ ಶೆಟ್ಟಿ ಅವರಿಗೂ ಒಲಿಂಪಿಕ್ಸ್‌ ರಹದಾರಿ ಸಿಗುವುದು ನಿಶ್ಚಿತವಾಗಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.