ADVERTISEMENT

ದುಬೈ ಚಾಂಪಿಯನ್​ಶಿಪ್​ ಬಳಿಕ ನಿವೃತ್ತಿ: ಟೆನಿಸ್‌ ಧ್ರುವತಾರೆ ಸಾನಿಯಾ ಮಿರ್ಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2023, 10:45 IST
Last Updated 7 ಜನವರಿ 2023, 10:45 IST
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ   

ನವದೆಹಲಿ: ಭಾರತದ ಮಹಿಳಾ ಟೆನಿಸ್‌ನ ಧ್ರುವತಾರೆ ಸಾನಿಯಾ ಮಿರ್ಜಾ ಅವರು ಮುಂಬರುವ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ ಬಳಿಕ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ.

2023ರ ಫೆಬ್ರವರಿ 19 ರಿಂದ ಆರಂಭವಾಗುವ ದುಬೈ ಟೆನಿಸ್ ಚಾಂಪಿಯನ್‌ಶಿಪ್‌ ಬಳಿಕ ಮತ್ತೆ ಟೆನಿಸ್ ಕಣಕ್ಕೆ ಇಳಿಯುವುದಿಲ್ಲ ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ‘ದೇಹವು ಮೊದಲಿನಂತೆ ಆಟಕ್ಕೆ ಒಗ್ಗುತ್ತಿಲ್ಲ. ಮೊದಲಿನಂತೆ ಶಕ್ತಿಯನ್ನು ಒಗ್ಗೂಡಿಸುವುದಕ್ಕೂ ಆಗುವುದಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ನಿವೃತ್ತಿ ಪಡೆಯುವುದಾಗಿ ಅವರು ಹೇಳಿದ್ದರು.

ADVERTISEMENT

36 ವರ್ಷದ ಸಾನಿಯಾ ಮಿರ್ಜಾ ಮೊದಲ ಮಗುವಿಗೆ ಜನ್ಮ ನೀಡಿದ ನಂತರ ಸುದೀರ್ಘ ಕಾಲ ಅಂಗಣದಿಂದ ಹೊರಗೆ ಉಳಿದಿದ್ದರು. 2019ರ ಮಾರ್ಚ್‌ನಲ್ಲಿ ಮತ್ತೆ ಆಡಲು ಇಳಿದಿದ್ದರು. ಆದರೆ ಕೆಲವೇ ತಿಂಗಳಲ್ಲಿ ಕೋವಿಡ್‌ ಕಾಡಿದ್ದರಿಂದ ಆಟವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ.

ಆಸ್ಟ್ರೇಲಿಯನ್ ಓಪನ್ ಆಡಿದ ಬಳಿಕ ದುಬೈ ಚಾಂಪಿಯನ್‌ಶಿಪ್‌ನಲ್ಲಿ ಕೊನೆಯದಾಗಿ ಆಡಿ ಟೆನಿಸ್‌ಗೆ ವಿದಾಯ ಹೇಳುವುದಾಗಿ ಸಾನಿಯಾ ಹೇಳಿದ್ದಾರೆ.

1986ರ ನವೆಂಬರ್‌ 15ರಂದು ಮುಂಬೈನಲ್ಲಿ ಜನಿಸಿದ ಸಾನಿಯಾ 2010ರಲ್ಲಿ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು.

ವೈವಾಹಿಕ ಜೀವನದಲ್ಲಿ ಬಿರುಕು?:

ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ನಡುವಿನ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹರಡಿದೆ. ಇಬ್ಬರೂ ವಿಚ್ಛೇದನ ಪಡೆದಿದ್ದಾರೆ, ಆದರೆ ಅದಿನ್ನು ಅಧಿಕೃತವಾಗಿ ಬಹಿರಂಗವಾಗಿಲ್ಲ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯಾಗುತ್ತಿದೆ.

ಸಾನಿಯಾ ಸಾಧನೆ: ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್, ಯುಎಸ್ ಓಪನ್, ಫ್ರೆಂಚ್ ಓಪನ್ ಪ್ರಶಸ್ತಿಗಳು ಮಾತ್ರವಲ್ಲದೇ ಅನೇಕ ಅಂತರರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದಾರೆ.

ಭಾರತ ಸರ್ಕಾರದಿಂದ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.