ಮುಂಬೈ: ಮುಂದಿನ ವರ್ಷದ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೇಲೂ ಕೊರೊನಾ ವೈರಾಣು ಕೆಂಗಣ್ಣು ಬೀರಿದ್ದು, ಟೂರ್ನಿ ರದ್ದಾಗುವ ಸಾಧ್ಯತೆಯಿದೆ ಎಂದು ಟೆನಿಸ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರೆಗ್ ಟಿಲಿ ಹೇಳಿದ್ದಾರೆ. ಒಂದು ವೇಳೆ ನಡೆದರೂ ಪಂದ್ಯಗಳಿಗೆ ಅನ್ಯ ದೇಶಗಳಿಂದ ಅಭಿಮಾನಿಗಳು ಹಾಜರಾಗುವುದು ಸಾಧ್ಯವಾಗಲಿಕ್ಕಿಲ್ಲ ಎಂದು ಬುಧವಾರ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಮಾರ್ಚ್ ಆರಂಭದಿಂದಲೇ ಕೊರೊನಾ ಮಹಾಮಾರಿಯ ಕಾರಣದಿಂದಾಗಿ ಟೆನಿಸ್ ಟೂರ್ನಿಗಳು ಸ್ಥಗಿತಗೊಂಡಿವೆ.
2021ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯು ಜನವರಿಯಲ್ಲಿ ನಿಗದಿಯಾಗಿದೆ. ಆದರೆಈ ವರ್ಷದ ಮೇನಲ್ಲಿ ನಡೆಯಬೇಕಿದ್ದ ಫ್ರೆಂಚ್ ಓಪನ್‌ಅನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ. ವಿಂಬಲ್ಡನ್ ಟೂರ್ನಿಯಂತೂ ರದ್ದಾಗಿದೆ.
ಅಮೆರಿಕ ಓಪನ್ ಟೂರ್ನಿಯ ಭವಿಷ್ಯ ಮುಂದಿನ ತಿಂಗಳು ನಿರ್ಧಾರವಾಗಲಿದೆ.
‘ಆಸ್ಟ್ರೇಲಿಯನ್ ಓಪನ್ ಕೂಡ ಕೊರೊನಾ ಕರಿನೆರಳಿನಿಂದ ತಪ್ಪಿಸಿಕೊಳ್ಳದು. ಕ್ವಾರಂಟೈನ್ ತಂತ್ರಗಳನ್ನು ಅಳವಡಿಸಿಕೊಂಡು ಟೂರ್ನಿ ನಡೆಸಬೇಕೆಂಬುದು ನಮ್ಮ ಇಚ್ಛೆ. ಆಸ್ಟ್ರೇಲಿಯಾದ ಅಭಿಮಾನಿಗಳು ಮಾತ್ರ ಈ ಟೂರ್ನಿಗೆ ಹಾಜರಾಗಬಹುದು’ ಎಂದು ಕ್ರೆಗ್ ಟಿಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ 7,000ಕ್ಕಿಂತ ಕಡಿಮೆ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 96 ಜನ ಸಾವನ್ನಪ್ಪಿದ್ದಾರೆ. ಅಂತರ ಕಾಯ್ದುಕೊಳ್ಳುವಿಕೆಯ ಮಾರ್ಗಸೂಚಿಗಳನ್ನುಶುಕ್ರವಾರ ಇಲ್ಲಿ ಸಡಿಲಗೊಳಿಸುವ ಸಾಧ್ಯತೆಯಿದೆ.
‘ಟೂರ್ನಿಯ ಕುರಿತು ನಾವು ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ, ದಿನಾಂಕ, ಅದು ಯಾರ ಮೇಲೆ, ಹೇಗೆ ಪರಿಣಾಮ ಬೀರಲಿದೆ’ ಎಂಬುದರ ಕುರಿತು ಚರ್ಚಿಸಿದ್ದೇವೆ. ಈ ಕುರಿತು ಅಂತರರಾಷ್ಟ್ರೀಯ ಆಟಗಾರರಿಗೆ ಮನವರಿಕೆ ಮಾಡಿಕೊಡಲಿದ್ದೇವೆ’ ಎಂದು ಟಿಲಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.