ADVERTISEMENT

ಡಕ್‌ ಹೀ ಆಟಕ್ಕೆ ಶ್ರವಣದೋಷ ‘ಬೀಟ್‌’

ಬಸವರಾಜ ದಳವಾಯಿ
Published 1 ಸೆಪ್ಟೆಂಬರ್ 2019, 19:30 IST
Last Updated 1 ಸೆಪ್ಟೆಂಬರ್ 2019, 19:30 IST
ಡಕ್‌ ಹೀ ಲಿ
ಡಕ್‌ ಹೀ ಲಿ   

‘ಜನರು ನನ್ನ ಅಂಗವೈಕಲ್ಯವನ್ನು ಹಾಸ್ಯದ ವಸ್ತುವಾಗಿಸಿಕೊಂಡಿದ್ದರು. ನಾನು ಟೆನಿಸ್‌ ಆಡಬಾರದು ಎಂದೂ ಹೇಳುತ್ತಿದ್ದರು. ನಾನೂ ಗೆಲ್ಲಬಲ್ಲೆ ಎಂದು ತೋರಿಸಬೇಕಿತ್ತು. ಅದು ನನ್ನ ಗೆಳೆಯರು ಹಾಗೂ ಕುಟುಂಬದ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಶ್ರವಣದೋಷವುಳ್ಳವರು ಎದೆಗುಂದುವ ಅವಶ್ಯಕತೆಯಿಲ್ಲ. ಸತತ ಪ್ರಯತ್ನದಿಂದ ಯಾವುದೂ ಅಸಾಧ್ಯವಲ್ಲ....’

– ಹೀಗೆ ಹೇಳುವಾಗ ಡಕ್‌ ಹೀ ಲೀ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದರು. ಮೊಗದಲ್ಲಿ ಸಾಧನೆಯ ತೃಪ್ತಿ ಲಾಸ್ಯವಾಡುತ್ತಿತ್ತು. ದಕ್ಷಿಣ ಕೊರಿಯಾದ ಈ ಟೆನಿಸ್‌ ಆಟಗಾರ ಇತ್ತೀಚೆಗೆ ಎಟಿಪಿ ಟೂರ್ನಿಯೊಂದರ ಮುಖ್ಯ ಡ್ರಾನ ಪಂದ್ಯವೊಂದನ್ನು ಜಯಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಶ್ರವಣದೋಷ ಹೊಂದಿದ ಆಟಗಾರ ಎಂಬ ಇತಿಹಾಸ ಬರೆದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 212 ಸ್ಥಾನದಲ್ಲಿರುವ 21 ವರ್ಷ ವಯಸ್ಸಿನ ಡಕ್‌ ಹೀ, ಅಮೆರಿಕಾದ ನಾರ್ತ್‌ ಕೆರೋಲಿನಾದಲ್ಲಿ ನಡೆದ ವಿನ್‌ಸ್ಟನ್‌ ಸಲೇಮ್‌ ಓಪನ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಹೆನ್ರಿ ಲಾಕ್ಸೊನೆನ್‌ ಎದುರು ಜಯದ ನಗೆ ಬೀರಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ಹೆನ್ರಿ ಅವರ ಸ್ಥಾನ 120 ಎಂಬುದು ಗಮನಾರ್ಹ.

ಕೊರಿಯಾದ ಜೆಚಿಯೊನ್‌ ಎಂಬಲ್ಲಿ ಜನಿಸಿದ ಡಕ್‌ ಹೀ ಹುಟ್ಟುತ್ತಲೇ ಶ್ರವಣದೋಷ ಹೊಂದಿದ್ದರು. ಏಳನೇ ವರ್ಷಕ್ಕೆ ಟೆನಿಸ್‌ಗೆ ಧುಮುಕಿದರು. ಈ ಆಟದಲ್ಲಿ ಶ್ರವಣ ಸಾಮರ್ಥ್ಯಕ್ಕೆ ತನ್ನದೇ ಆದ ಮುಖ್ಯ ಪಾತ್ರವಿದೆ. ಎದುರಾಳಿಯಿಂದ ಬರುವ ಚೆಂಡಿನ ವೇಗ ಹಾಗೂ ಕ್ಷಣಾರ್ಧದಲ್ಲಿ ಪಡೆದುಕೊಳ್ಳುವ ತಿರುವು ಅರಿತುಕೊಳ್ಳಲು ಶ್ರವಣ ಸಾಮರ್ಥ್ಯ ಬೇಕು. ಡಕ್‌ ಹೀ ತಮ್ಮ ತೀಕ್ಷ್ಣ ಕಣ್ಣುಗಳ ಮೂಲಕವೇ ಎಲ್ಲವನ್ನು ಅರಿಯಬೇಕು.

ADVERTISEMENT

ಪಂದ್ಯದಲ್ಲಿ ಡಕ್‌ ಹೀ ಅವರಿಗೆ ಅಂಪೈರ್‌ ಮಾತುಗಳು ಕೇಳುವುದಿಲ್ಲ. ಅವರು ‘ಲಿಪ್‌ ರೀಡಿಂಗ್‌’ ಕಲಿತುಕೊಂಡಿದ್ದಾರೆ. ಆದರೆ ಅದು ಕೊರಿಯನ್‌ ಭಾಷೆಯಲ್ಲಿ. ಇಂಗ್ಲಿಷ್‌ ಅರ್ಥವಾಗುವುದಿಲ್ಲ. ಇಂಗ್ಲಿಷ್‌ ಮಾತನಾಡಲೂ ಅವರಿಗೆ ಬರುವುದಿಲ್ಲ. ಕೇವಲ ಅಂಪೈರ್‌ಗಳಿಂದ ಬರುವ ಕೈಸನ್ನೆಗಳ ಮೂಲಕ ಹಾಗೂ ಸ್ಕೋರ್‌ಬೋರ್ಡ್‌ ನೋಡಿ ಅವರು ಪಾಯಿಂಟ್‌ಗಳನ್ನು ಅರಿತುಕೊಳ್ಳಬೇಕು. ಸ್ಥಳೀಯ ಅಥವಾ ಸಣ್ಣ ಮಟ್ಟದ ಟೂರ್ನಿಗಳಲ್ಲಿ ಅವರಿಗೆ ಇನ್ನೂ ಕಷ್ಟ. ಏಕೆಂದರೆ ಅಲ್ಲಿ ಸ್ಕೋರ್‌ಬೋರ್ಡ್‌ ಕೂಡ ಇರುವುದಿಲ್ಲ.

ಇಂತಹ ಹಲವು ಸಮಸ್ಯೆಗಳೊಡನೇ ಹೋರಾಡುತ್ತಿರುವ ಡಕ್‌ ಹೀ ಅವರು ಐಟಿಎಫ್‌ ಟೆನಿಸ್‌ ಟೂರ್‌ಗೆ ಪ್ರವೇಶಿಸಿದ್ದು 14ನೇ ವಯಸ್ಸಿನಲ್ಲಿ. 18 ವರ್ಷದ ಒಳಗೆ ಎಂಟು ಪ್ರಶಸ್ತಿಗಳು ಅವರಿಗೆ ಒಲಿದಿದ್ದವು. ಐಟಿಎಫ್‌ ಜೂನಿಯರ್‌ ಸರ್ಕೀಟ್‌ನಲ್ಲಿ 10 ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಎರಡು ಬಾರಿ ರನ್ನರ್‌ ಅಪ್‌ ಆಗಿದ್ದಾರೆ.

‘ಒಂದು ವೇಳೆ ನಾನು ಹೆಡ್‌ಫೋನ್‌ ಬಳಸಿ ಪಂದ್ಯವಾಡುತ್ತಿದ್ದರೆ, ರಾಕೆಟ್‌ನಿಂದ ಬರುವ ಚೆಂಡಿನ ವೇಗ, ತಿರುವು ಗ್ರಹಿಸುವುದು ನಂಬಲಸಾಧ್ಯವಾದಷ್ಟು ಕಠಿಣ. ಟೆನಿಸ್‌ನಲ್ಲಿ ಹಲವು ವಿಧದಲ್ಲಿ ಕೇಳುವಿಕೆ ತುಂಬಾ ಅಗತ್ಯ. ಇಂತಹ ಅನಾನುಕೂಲತೆಯ ನಡುವೆಯೂ ಡಕ್‌ ಹೀ ಮಾಡುತ್ತಿರುವ ಪ್ರಯತ್ನ ಮಹತ್ವದ್ದು’ ಎಂದು ಕೊರಿಯಾ ಆಟಗಾರನಸಾಧನೆಯನ್ನು ಖ್ಯಾತ ಟೆನಿಸಿಗಬ್ರಿಟನ್‌ನ ಆ್ಯಂಡಿ ಮರ‍್ರೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.