ADVERTISEMENT

ಟೆನಿಸ್‌: ಸೆಮಿಫೈನಲ್‌ಗೆ ಪ್ರಜ್ವಲ್‌ ಲಗ್ಗೆ

ಐಟಿಎಫ್‌– ಮೈಸೂರು ಓಪನ್‌: ಮುಕುಂದ್ ಶಶಿಕುಮಾರ್‌ಗೆ ನಿರಾಸೆ

ಮೋಹನ್ ಕುಮಾರ ಸಿ.
Published 31 ಮಾರ್ಚ್ 2023, 18:21 IST
Last Updated 31 ಮಾರ್ಚ್ 2023, 18:21 IST
ಮೈಸೂರಿನಲ್ಲಿ ಎಂಟಿಸಿ ಅಂಗಳದಲ್ಲಿ ನಡೆಯುತ್ತಿರುವ ಐಟಿಎಫ್– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಭಾರತದ ಎಸ್‌.ಡಿ.ಪ್ರಜ್ವಲ್‌ ದೇವ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನಲ್ಲಿ ಎಂಟಿಸಿ ಅಂಗಳದಲ್ಲಿ ನಡೆಯುತ್ತಿರುವ ಐಟಿಎಫ್– ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಭಾರತದ ಎಸ್‌.ಡಿ.ಪ್ರಜ್ವಲ್‌ ದೇವ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.   

ಮೈಸೂರು: ತೀವ್ರ ಪೈಪೋಟಿ ನಡುವೆ ತಾಳ್ಮೆಯಿಂದ ಆಡಿದ ಭಾರತದ ಎಸ್.ಡಿ.ಪ್ರಜ್ವಲ್ ದೇವ್ ತವರಿನ ಅಂಗಳದಲ್ಲಿ ಗೆಲುವಿನ ನಗೆ ಬೀರಿದರು. ಇಲ್ಲಿ ನಡೆಯುತ್ತಿರುವ ಐಟಿಎಫ್- ಮೈಸೂರು ಓಪನ್ ಟೆನಿಸ್ ಟೂರ್ನಿಯ ಸೆಮಿ ಫೈನಲ್ ಪ್ರವೇಶಿಸಿದರು‌.

ಚಾಮರಾಜಪುರಂನ ಮೈಸೂರು ಟೆನಿಸ್ ಕ್ಲಬ್ (ಎಂಟಿಸಿ)ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದವರೇ ಆದ ಮುಕುಂದ್ ಶಶಿಕುಮಾರ್ ಅವರನ್ನು 1–6, 7–5, 7–6ರಿಂದ ಮಣಿಸಿದರು.

ಆಕ್ರಮಣಕಾರಿಯಾಗಿ ಆಟವಾಡಿದ ಟೂರ್ನಿಯ 4ನೇ ಶ್ರೇಯಾಂಕಿತ ಆಟಗಾರ ಮುಕುಂದ್‌, ಮೊದಲ ಸೆಟ್‌ ಅನ್ನು ಸುಲಭವಾಗಿ ಗೆದ್ದರು. ಪ್ರಜ್ವಲ್‌ ಅವರ ಬಲವಾದ ಸರ್ವ್‌ಗಳನ್ನು ಮುರಿದ ಅವರು ಪಾರಮ್ಯ ಮೆರೆದರು. ಎರಡನೇ ಸೆಟ್‌ನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದರು, ಈ ವೇಳೆ ಪುಟಿದೆದ್ದ ಪ್ರಜ್ವಲ್‌ ಮೆಚ್ಚಿನ ಫೋರ್‌ಹ್ಯಾಂಡ್‌, ಗ್ರೌಂಡ್‌ಸ್ಟ್ರೋಕ್ ಹೊಡೆತಗಳಿಂದ ಪಾಯಿಂಟ್‌ಗಳನ್ನು ದೋಚಿದರು. ಟ್ರೈಬ್ರೇಕ್‌ನಲ್ಲಿ ಸೆಟ್‌ ಗೆದ್ದಾಗ ಚಪ್ಪಾಳೆಗಳ ಸುರಿಮಳೆ ಬಿದ್ದವು.

ADVERTISEMENT

ಮೂರನೇ ಸೆಟ್‌ನಲ್ಲಿ ಆತ್ಮವಿಶ್ವಾಸದಿಂದ ಆಡಿದ ಪ್ರಜ್ವಲ್‌, ಆಕರ್ಷಕ ಸರ್ವ್‌, ಬ್ಯಾಕ್‌ಹ್ಯಾಂಡ್‌ ಹೊಡೆತಗಳಿಂದ ಅಂಕವನ್ನು ಹೆಚ್ಚಿಸಿಕೊಂಡರು. ಅವರಿಗೆ ಮುಕುಂದ್‌ ಪ್ರಬಲ ಪೈಪೋಟಿ ನೀಡಿದರು. ಪ್ರಜ್ವಲ್‌ 3 ಗಂಟೆಯಲ್ಲಿ ಗೆಲುವು ತಮ್ಮದಾಗಿಸಿದರು. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಬೆವರು ಹರಿಸಿದ ಇಬ್ಬರನ್ನೂ ಮೈಸೂರಿಗರು ಪ್ರೋತ್ಸಾಹಿಸಿದರು.

ಕರಣ್‌ಗೆ ನಿರಾಸೆ: ಮತ್ತೊಂದು ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ಭರವಸೆ ಮೂಡಿಸಿದ್ದ ಭಾರತದ ಕರಣ್‌ ಸಿಂಗ್‌ ಅವರು 6–7, 3–6ರಲ್ಲಿ ಬ್ರಿಟನ್‌ನ ಜಾರ್ಜ್‌ ಲ್ಹೊಫಗೆನ್ ಅವರಿಗೆ ಮಣಿದರು. ಮೊದಲ ಸೆಟ್‌ನಲ್ಲಿ ಪೈಪೋಟಿ ನೀಡಿದ ಕರಣ್‌ ಎರಡನೇ ಸೆಟ್‌ ಅನ್ನು ಸುಲಭವಾಗಿ ಬಿಟ್ಟುಕೊಟ್ಟರು.

ಆಸ್ಟ್ರೇಲಿಯಾದ ಬ್ಲೇಕ್‌ ಎಲಿಸ್‌ ಅವರು 7–6, 6–4ರಲ್ಲಿ ಉಕ್ರೇನ್‌ನ ವ್ಲಾಡಿಸ್ಲಾವ್‌ ಆರ್ಲವ್ ವಿರುದ್ಧ, ಅಮೆರಿಕದ ಆಲಿವರ್‌ ಕ್ರಾಫರ್ಡ್‌ 6–4, 6–0ರಲ್ಲಿ ಫ್ರಾನ್ಸ್‌ನ ಫ್ಲಾರೆಂಟ್‌ ಬಾಕ್ಸ್ ವಿರುದ್ಧ ಗೆದ್ದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮುಕುಂದ್‌ ಶಶಿಕುಮಾರ್– ವಿಷ್ಣುವರ್ಧನ್‌ ಜೋಡಿ 7–6, 3–6, 10–7ರಲ್ಲಿ ಫರ್ದೀನ್‌ ಖಮರ್‌– ಫೈಸಲ್‌ ಖಮರ್‌ ಜೋಡಿಯನ್ನು ಮಣಿಸಿ ನಾಲ್ಕರ ಘಟ್ಟ ‍‍ಪ್ರವೇಶಿಸಿತು. ಸಂಜೆ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಋತ್ವಿಕ್‌ ಚೌಧರಿ–ನಿಕಿ ಪೂಣಚ್ಚ ಜೋಡಿ 6–3, 6–3ರಲ್ಲಿ ಭಾರತದವರೇ ಆದ ಪರೀಕ್ಷಿತ್ ಸೋಮಾನಿ– ಮನಿಷ್‌ ಸುರೇಶ್‌ ಕುಮಾರ್‌ ವಿರುದ್ಧ ಗೆದ್ದು ಫೈನಲ್‌ ಪ್ರವೇಶಿಸಿತು.

ಇಂದಿನ ಪಂದ್ಯಗಳು: ಸಿಂಗಲ್ಸ್‌ ಸೆಮಿಫೈನಲ್‌: ಭಾರತದ ಎಸ್‌.ಡಿ.ಪ್ರಜ್ವಲ್‌ ದೇವ್‌ ವಿರುದ್ಧ ಬ್ರಿಟನ್‌ನ ಜಾರ್ಜ್‌ ಲ್ಹೊಫಗೆನ್, ಆಸ್ಟ್ರೇಲಿಯಾದ ಬ್ಲೇಕ್‌ ಎಲಿಸ್‌ ಎದುರು ಅಮೆರಿಕದ ಆಲಿವರ್‌ ಕ್ರಾಫರ್ಡ್. ಡಬಲ್ಸ್‌ ಸೆಮಿಫೈನಲ್‌: ಭಾರತದ ಶಶಿಕುಮಾರ್‌ ಮುಕುಂದ್‌– ವಿಷ್ಣುವರ್ಧನ್‌ ಎದುರು ಆಸ್ಟ್ರೇಲಿಯಾದ ಬ್ಲೇಕ್‌ ಎಲಿಸ್‌– ಉಕ್ರೇನ್‌ನ ವ್ಲಾಡಿಸ್ಲಾವ್‌ ಆರ್ಲವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.