ADVERTISEMENT

ಸೆರೆನಾ ಕನಸು ಭಗ್ನ; ಒಸಾಕ ಫೈನಲ್‌ಗೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ಕರಸ್ತೇವ್‌ ಓಟಕ್ಕೆ ತಡೆ ಹಾಕಿದ ನೊವಾಕ್ ಜೊಕೊವಿಚ್

ಏಜೆನ್ಸೀಸ್
Published 18 ಫೆಬ್ರುವರಿ 2021, 12:32 IST
Last Updated 18 ಫೆಬ್ರುವರಿ 2021, 12:32 IST
ಸೆರೆನಾ ವಿಲಿಯಮ್ಸ್ ಎದುರಿನ ಪಂದ್ಯದಲ್ಲಿ ನವೊಮಿ ಒಸಾಕ ಅವರ ಆಟದ ಭಂಗಿ –ರಾಯಿಟರ್ಸ್ ಚಿತ್ರ
ಸೆರೆನಾ ವಿಲಿಯಮ್ಸ್ ಎದುರಿನ ಪಂದ್ಯದಲ್ಲಿ ನವೊಮಿ ಒಸಾಕ ಅವರ ಆಟದ ಭಂಗಿ –ರಾಯಿಟರ್ಸ್ ಚಿತ್ರ   

ಮೆಲ್ಬರ್ನ್‌: ದಾಖಲೆಯ ಹಾದಿಯಲ್ಲಿ ಮತ್ತೊಮ್ಮೆ ಎಡವಿದ ಅಮೆರಿಕದ ಸೆರೆನಾ ವಿಲಿಯಮ್ಸ್ ಕಣ್ಣೀರು ಹಾಕಿ ‍ಪತ್ರಿಕಾಗೋಷ್ಠಿಯಿಂದ ಎದ್ದುಹೋದರು. ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ನಡೆದ ಮಹಿಳೆಯರ ಸೆಮಿಫೈನಲ್‌ನಲ್ಲಿ ನವೋಮಿ ಒಸಾಕ6-3, 6-4ರಲ್ಲಿ ಸೆರೆನಾ ವಿರುದ್ಧ ಗೆಲುವು ಸಾಧಿಸಿದರು.

ಆಸ್ಟ್ರೇಲಿಯಾ ಓಪನ್‌ನಲ್ಲಿ ಒಂಬತ್ತನೇ ಪ್ರಶಸ್ತಿ ಗೆದ್ದು ಒಟ್ಟಾರೆ ಅತಿಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆದ್ದ ಮಾರ್ಗರೆಟ್ ಕೋರ್ಟ್ ಅವರ ದಾಖಲೆ ಸರಿಗಟ್ಟುವ ಸೆರೆನಾ ಅವರ ಕನಸು ಈ ಮೂಲಕ ನುಚ್ಚುನೂರಾಯಿತು. ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಇದು ನನ್ನ ವೃತ್ತಿಜೀವನದ ದೊಡ್ಡ ಲೋಪ’ ಎಂದು ಹೇಳಿ ಕಣ್ಣೀರು ಹಾಕಿದರು.

23 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ 39 ವರ್ಷದ ಸೆರೆನಾಗೆ ಇಲ್ಲಿ 10ನೇ ಶ್ರೇಯಾಂಕ ನೀಡಲಾಗಿತ್ತು. ಜಪಾನ್‌ನ ಒಸಾಕ ಮೂರನೇ ಶ್ರೇಯಾಂಕ ಹೊಂದಿದ್ದರು. ‘ಯಾರೂ ನಿರೀಕ್ಷೆ ಮಾಡದಷ್ಟು ತಪ್ಪುಗಳನ್ನು ಮಾಡಿದೆ. ಅವೆಲ್ಲವೂ ಸುಲಭವಾಗಿ ತಪ್ಪಿಸಬಹುದಾಗಿದ್ದ ತಪ್ಪುಗಳಾಗಿದ್ದವು. ಆದ್ದರಿಂದ ಈ ಪಂದ್ಯದ ಸೋಲಿಗೆ ಯಾವುದೇ ವಿವರಣೆ ನೀಡಲು ಬಯಸುವುದಿಲ್ಲ’ ಎಂದು ಸೆರೆನಾ ಹೇಳಿದರು.

ADVERTISEMENT

ಕೊರೊನಾ ಆತಂಕದಿಂದಾಗಿ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಲಾಗಿತ್ತು. ಅದು ಬುಧವಾರಕ್ಕೆ ಮುಕ್ತಾಯಗೊಂಡಿತ್ತು. ಆದ್ದರಿಂದ ಒಸಾಕ ಮತ್ತು ಸೆರೆನಾ ಪಂದ್ಯ ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಸೇರಿದ್ದರು. ಇಬ್ಬರೂ ಬಲಶಾಲಿ ಹೊಡೆತಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಎರಡೂ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದ ಒಸಾಕ ಪಂದ್ಯ ಗೆದ್ದು ಸಂಭ್ರಮಿಸಿದರು. 2018ರ ಅಮೆರಿಕ ಓಪನ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಒಸಾಕ ಸೋಲುಣಿಸಿದ್ದರು.

ನಾಲ್ಕನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಒಸಾಕ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ ಎದುರು ಸೆಣಸುವರು. ಜೆಕ್ ಗಣರಾಜ್ಯದ ಕರೊಲಿನಾ ಮುಚೋವ ಅವರನ್ನು 6-4, 3-6, 6-4ರಲ್ಲಿ ಮಣಿಸಿ ಬ್ರಾಡಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ 6-3, 6-4, 6-2ರಲ್ಲಿ ರಷ್ಯಾದ ಅಸ್ಲಾನ್ ಕರಸ್ತೇವ್ ವಿರುದ್ಧ ಜಯ ಸಾಧಿಸಿದರು. ಟೂರ್ನಿಯಲ್ಲಿ ಅಮೋಘ ಓಟ ಓಡುತ್ತಿದ್ದ ಕರಸ್ತೇವ್ ಹಾಲಿ ಚಾಂಪಿಯನ್‌ ನೊವಾಕ್‌ಗೆ ಪ್ರತಿಸ್ಪರ್ಧೆ ಒಡ್ಡುವಲ್ಲಿ ವಿಫಲರಾದರು. ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಜೊಕೊವಿಚ್ ಮೂರನೇ ಸೆಟ್‌ನ ಎಂಟನೇ ಗೇಮ್‌ನಲ್ಲಿ ಭರ್ಜರಿ ಏಸ್ ಸಿಡಿಸಿ ಗೆಲುವಿನ ನಗೆ ಚೆಲ್ಲಿದರು. ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಸರ್ಬಿಯಾ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಶುಕ್ರವಾರ ನಡೆಯಲಿರುವ ಮತ್ತೊಂದು ಸೆಮಿಫೈನಲ್‌ನಲ್ಲಿ ಗ್ರೀಸ್‌ನ ಸ್ಟೆಫನೋಸ್ ಸಿಸಿಪಸ್ ಮತ್ತು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಸೆಣಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.