ADVERTISEMENT

ಜೊಕೊವಿಚ್‌ ಬೆವರಿಳಿಸಿದ ಹ್ಯುಬರ್ಟ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:40 IST
Last Updated 5 ಜುಲೈ 2019, 19:40 IST
ಜೊಕೊವಿಚ್‌ ಗೆಲುವಿನ ಸಂಭ್ರಮ–ರಾಯಿಟರ್ಸ್ ಚಿತ್ರ
ಜೊಕೊವಿಚ್‌ ಗೆಲುವಿನ ಸಂಭ್ರಮ–ರಾಯಿಟರ್ಸ್ ಚಿತ್ರ   

ಲಂಡನ್‌ (ರಾಯಿಟರ್ಸ್/ಎಎಫ್‌ಪಿ): ಅಗ್ರ ಶ್ರೇಯಾಂಕದ ಆಟಗಾರ ನೊವಾಕ್‌ ಜೊಕೊವಿಚ್‌ ಅವರು ಶುಕ್ರವಾರ ಮೂರನೇ ಸುತ್ತಿನ ಪಂದ್ಯದಲ್ಲಿ ಯುವ ಆಟಗಾರ ಪೋಲೆಂಡ್‌ನ ಹ್ಯೂಬರ್ಟ್‌ ಹರ್ಕಜ್‌ ಎದುರು ಸೋಲಿನ ಆತಂಕ ಎದುರಿಸಿದ್ದರು.

ಟೈಬ್ರೇಕ್‌ವರೆಗೆ ಸಾಗಿದ ಎರಡನೇ ಸೆಟ್‌ನಲ್ಲಿ ಜೊಕೊವಿಚ್‌ 6–7 (5) ಹಿನ್ನಡೆ ಅನುಭವಿಸಿದ್ದರು.

ಅದಾಗ್ಯೂ ಮೂರು ಮತ್ತು ನಾಲ್ಕನೇ ಸೆಟ್‌ಗಳಲ್ಲಿ ತನ್ನೆಲ್ಲ ಅನುಭವವನ್ನು ಒರೆಗೆ ಹಚ್ಚಿದ ಜೊಕೊವಿಚ್‌ ಅವರು 7–5, 6–7 (5), 6–1, 6–4ರಿಂದ ಗೆದ್ದು 12ನೇ ಬಾರಿ ಟೂರ್ನಿಯಲ್ಲಿ 16ರ ಘಟ್ಟ ತಲುಪಿದ ಸಾಧನೆ ಮಾಡಿದರು.

ADVERTISEMENT

‘ಹ್ಯುಬರ್ಟ್ ಅವರು ಗೆಲುವಿಗೆ ನಡೆಸಿದ ಪ್ರಯತ್ನಕ್ಕೆ ಅಭಿನಂದನೆ’ ಎಂದು ಪಂದ್ಯದ ನಂತರ ಜೊಕೊವಿಚ್‌ ಪ್ರತಿಕ್ರಿಯಿಸಿದರು.

ಆ್ಯಂಡರ್ಸನ್‌ ಸವಾಲು ಅಂತ್ಯ: ನಾಲ್ಕನೇ ಶ್ರೇಯಾಂಕದ ಆಟಗಾರ ದಕ್ಷಿಣ ಆಫ್ರಿಕಾ ಕೆವಿನ್‌ ಆ್ಯಂಡರ್ಸನ್‌ ಸವಾಲು ಮೂರನೇ ಸುತ್ತಿನಲ್ಲೇ ಅಂತ್ಯ ಕಂಡಿದೆ. 2018ರಲ್ಲಿ ಫೈನಲ್‌ ತಲುಪಿದ್ದ ಅವರು, 4–6, 3–6, 6–7(4) ಸೆಟ್‌ಗಳಿಂದ ಅರ್ಜೆಂಟೀನಾ ಆಟಗಾರ ಗೈಡೊ ಪೆಲ್ಲಾ ವಿರುದ್ಧ ಸೋತರು.

ಹೋದ ವರ್ಷ ಜೊಕೊವಿಚ್‌ ಎದುರು ಅಂತಿಮ ಪಂದ್ಯದಲ್ಲಿ ಮುಗ್ಗರಿ ಸಿದ್ದ ಆ್ಯಂಡರ್ಸನ್‌ ಅವರಿಗೆ ಬಲ ಮೊಣಕಾಲಿನ ನೋವು ಬಾಧಿಸಿತ್ತು. ನಿರ್ಣಾಯಕ ಕ್ಷಣಗಳಲ್ಲಿ ಅವರು ಸರ್ವ್‌ ಉತ್ತಮ ಆಟವಾಡುವಲ್ಲಿ ವಿಫಲವಾದರು.

ವಿಜೇತ ಆಟಗಾರ ಪೆಲ್ಲಾ ಅವರುಕೆನಡಾದ ಮಿಲೊಸ್‌ ರಾನಿಕ್‌ ಅವರನ್ನು ಎದುರಿಸುವರು.

ಅಜರೆಂಕಾಗೆ ಸೋಲು: ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಪಂದ್ಯ ದಲ್ಲಿ ಆಕ್ರಮಣಕಾರಿ ಆಟ ಆಡಿದ ರೊಮೇನಿಯಾದ ಸಿಮೊನಾ ಹಲೆಪ್‌ ಅವರು ಬೆಲಾರಸ್‌ನ ವಿಕ್ಟೊರಿಯಾ ಅಜರೆಂಕಾ ಅವರನ್ನು 6–3, 6–1 ಸೆಟ್‌ಗಳಿಂದ ಸುಲಭವಾಗಿ ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.