ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರಿಗೆ ಆಘಾತ ನೀಡಿದ ಫ್ರಾನ್ಸ್‌ನ ಬೆಂಜಮಿನ್ ಬೊಂಜಿ
ಲಂಡನ್: ಅಮೆರಿಕ ಓಪನ್ ಮಾಜಿ ಚಾಂಪಿಯನ್ ಡೇನಿಯಲ್ ಮೆಡ್ವೆಡೇವ್ ಅವರು ಸೋಮವಾರ ಆರಂಭ ಗೊಂಡ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ
ಶುಭಾರಂಭ ಮಾಡಿದರು.
ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹಿಂದಿನ ಎರಡೂ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿದ್ದ ರಷ್ಯಾದ ಮೆಡ್ವೆಡೇವ್ ಅವರಿಗೆ ಫ್ರಾನ್ಸ್‌ನ ಬೆಂಜಮಿನ್ ಬೊಂಜಿ ಆಘಾತ ನೀಡಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 64ನೇ ಸ್ಥಾನದಲ್ಲಿರುವ ಬೊಂಜಿ 7-6 (7/2), 3-6, 7-6 (7/3), 6-2ರಿಂದ ಒಂಬತ್ತನೇ ಶ್ರೇಯಾಂಕದ ಮೆಡ್ವೆಡೇವ್ ವಿರುದ್ಧ ಜಯಗಳಿಸಿದರು.
ವಿಂಬಲ್ಡನ್‌ನಲ್ಲಿ ಏಳನೇ ಬಾರಿ ಕಣಕ್ಕೆ ಇಳಿದ ರಷ್ಯಾದ ಆಟಗಾರ, ಆರಂಭಿಕ ಸುತ್ತನ್ನು ದಾಟಲು ವಿಫಲವಾದದ್ದು ಇದೇ ಮೊದಲು. 2021ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಮತ್ತು ಆರು ಗ್ರ್ಯಾನ್‌ಸ್ಲ್ಯಾಮ್ ಟೂರ್ನಿಗಳಲ್ಲಿ ಫೈನಲ್ ತಲುಪಿರುವ 29 ವರ್ಷ ವಯಸ್ಸಿನ ಮೆಡ್ವೆಡೇವ್, ಹಾಲಿ ಋತುವಿನ ಪ್ರಮುಖ ಟೂರ್ನಿಗಳಲ್ಲಿ ಪದೇ ಪದೇ ಮುಗ್ಗರಿಸಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಓಪನ್‌ನಲ್ಲಿ ಎರಡನೇ ಸುತ್ತಿನಲ್ಲಿ ಮತ್ತು ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು.
ರೂನ್‌ಗೆ ನಿರಾಸೆ: ಎಂಟನೇ ಶ್ರೇಯಾಂಕದ ಹೋಲ್ಡರ್ ರೂನ್ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು. ಎರಡು ಸೆಟ್‌ಗಳ ಹಿನ್ನಡೆಯಿಂದ ಚೇತರಿಸಿಕೊಂಡ ನಿಕೋಲಸ್ ಜಾರ‍್ರಿ 4-6, 4-6, 7-5, 6-3, 6-4ರಿಂದ ಡೆನ್ಮಾರ್ಕ್‌ನ ರೂನ್ ಅವರಿಗೆ ಆಘಾತ ನೀಡಿದರು.
ಮೂರು ಗಂಟೆ 34 ನಿಮಿಷ ನಡೆದ ರೋಚಕ ಹಣಾಹಣಿಯಲ್ಲಿ 143ನೇ ಕ್ರಮಾಂಕದ ನಿಕೋಲಸ್ (ಚಿಲಿ) ಮೇಲುಗೈ ಸಾಧಿಸಿದರು. 22 ವರ್ಷ ವಯಸ್ಸಿನ ರೂನ್ ಅವರಿಗೆ ನಾಲ್ಕು ಗ್ರ್ಯಾನ್‌ಸ್ಲಾಮ್‌ಗಳ ಪೈಕಿ ಯಾವುದರಲ್ಲೂ ಕ್ವಾರ್ಟರ್ ಫೈನಲ್ ದಾಟಲು ಸಾಧ್ಯವಾಗಿಲ್ಲ. 2023ರಲ್ಲಿ
ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು.
ಸಬಲೆಂಕಾ ಶುಭಾರಂಭ: ಅಗ್ರ ಶ್ರೇಯಾಂಕದ ಸಬಲೆಂಕಾ 6-1, 7-5ರಿಂದ ಕೆನಡಾದ ಕ್ವಾಲಿಫೈಯರ್ ಆಟಗಾರ್ತಿ ಕಾರ್ಸನ್ ಬ್ರಾನ್ಸ್‌ಟೈನ್ ಅವರನ್ನು ಮಣಿಸಿದರು.
ಮೂರು ಗ್ರ್ಯಾನ್‌ಸ್ಲಾಮ್ ಕಿರೀಟಗಳಿಗೆ ಒಡತಿಯಾಗಿರುವ ಬೆಲರೂಸ್‌ನ 27 ವರ್ಷ ವಯಸ್ಸಿನ ಸಬಲೆಂಕಾ ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಈತನಕ ಸೆಮಿಫೈನಲ್ ಹಂತ ದಾಟಿಲ್ಲ. ಪ್ರಸಕ್ತ ವರ್ಷ ಆಸ್ಟ್ರೇಲಿಯಾ ಓಪನ್ ಮತ್ತು ಫ್ರೆಂಚ್ ಓಪನ್‌ನ ಫೈನಲ್‌ಗಳಲ್ಲಿ ಸೋತ ನೋವಿನ
ಲ್ಲಿರುವ ಅವರು, ಇಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.
ಹಿಂದೆ ಸರಿದ ಜಬೇರ್: ಎರಡು ಬಾರಿಯ ವಿಂಬಲ್ಡನ್ ರನ್ನರ್ ಅಪ್ ಆನ್ಸ್ ಜಬೇರ್ ಅವರು ಉಸಿರಾಟ ಸಮಸ್ಯೆಯಿಂದಾಗಿ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದ ವೇಳೆ ಸ್ಪರ್ಧೆಯಿಂದ ಹಿಂದೆ ಸರಿದರು.
ಬಲ್ಗೇರಿಯಾದ ವಿಕ್ಟೋರಿಯಾ ಟೊಮೊವಾ ವಿರುದ್ಧ 7-6 (5), 2-0 ಅಂತರದಲ್ಲಿ ಜಬೇರ್ (ಟ್ಯುನೀಷಿಯಾ) ಹಿಂದುಳಿದಿದ್ದಾಗ ಆಟದಿಂದ ನಿವೃತ್ತರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.