ADVERTISEMENT

ವಿಂಬಲ್ಡನ್‌: ನಡಾಲ್‌ಗೆ ಸವಾಲಿನ ‘ಡ್ರಾ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 20:00 IST
Last Updated 28 ಜೂನ್ 2019, 20:00 IST
ರಫೆಲ್‌ ನಡಾಲ್‌
ರಫೆಲ್‌ ನಡಾಲ್‌   

ಲಂಡನ್‌ (ರಾಯಿಟರ್ಸ್‌): ವಿಂಬಲ್ಡನ್‌ ಶ್ರೇಯಾಂಕ ವ್ಯವಸ್ಥೆ ಬಗ್ಗೆ ಅಸಂತೃಪ್ತಿ ಹೊಂದಿರುವ ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಅವರಿಗೆ ಶುಕ್ರವಾರ ಪ್ರಕಟವಾಗಿರುವ ಸಿಂಗಲ್ಸ್‌ ‘ಡ್ರಾ’ ಕೂಡ ಮನಸ್ಥಿತಿ ಉತ್ತಮಗೊಳಿಸುವ ರೀತಿಯಲ್ಲಿಲ್ಲ.

ಅಂದುಕೊಂಡಂತೆ ನಡೆದರೆ, ಎರಡನೇ ಸುತ್ತಿನಲ್ಲಿ 33 ವರ್ಷದ ‘ರಫಾ’ ಅವರಿಗೆ ವಿವಾದಾತ್ಮಕ ಆಟಗಾರ, ಆಸ್ಟ್ರ್ರೇಲಿಯಾದ ನಿಕ್‌ ಕಿರ್ಗಿಯೋಸ್‌ ಸಂಭವನೀಯ ಎದುರಾಳಿಯಾಗುವವರು.

2010ರ ನಂತರ ಮೊದಲ ಬಾರಿ ವಿಂಬಲ್ಡನ್‌ ಟ್ರೋಫಿ ಎತ್ತಿಹಿಡಿ ಯುವ ಹಂಬಲದಲ್ಲಿರುವ ನಡಾಲ್‌, ಅಲ್ಲಿನ ಶ್ರೇಯಾಂಕ ಪದ್ಧತಿ ಬಗ್ಗೆ ಗುರುವಾರ ಅಸಮಾಧಾನ ಹೊರ ಹಾಕಿದ್ದರು.ಹುಲ್ಲಿನಂಕಣದ ಮೇಲೆ ಆಟಗಾರರ ಸಾಧನೆ ಅನುಸರಿಸಿ ವಿಂಬ ಲ್ಡನ್‌ನಲ್ಲಿ ಶ್ರೇಯಾಂಕ ನೀಡುವುದು ವಾಡಿಕೆ. ವಿಶ್ವ ಕ್ರಮಾಂಕದಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ನಡಾಲ್‌, ವಿಂಬಲ್ಡನ್‌ ಟೂರ್ನಿಗೆ ಮೂರನೇ ಶ್ರೇಯಾಂಕ ಗಳಿಸಿದ್ದಾರೆ.

ADVERTISEMENT

ನಡಾಲ್‌ ಇರುವ ‘ಡ್ರಾ’ ಭಾಗದಲ್ಲೇ ಎಂಟು ಸಲದ ವಿಜೇತ ಫೆಡರರ್‌ ಕೂಡ ಇದ್ದಾರೆ. ನಡಾಲ್‌ಗೆ ಸಂಭವನೀಯ ಸೆಮಿಫೈನಲ್‌ ಎದುರಾಳಿ.

ಮೊದಲ ಸುತ್ತಿನಲ್ಲಿ ನಡಾಲ್‌, ಜಪಾನ್‌ನ ಯುಇಚಿ ಸುಗಿಟಾ ವಿರುದ್ಧ ಆಡಲಿದ್ದಾರೆ. 24 ವರ್ಷದ ಕಿರ್ಗಿಯೋಸ್‌, ಸ್ವದೇಶದ ಜೋರ್ಡಾನ್‌ ಥಾಂಸನ್‌ ವಿರುದ್ಧ ಆಡಲಿದ್ದಾರೆ. ಫೆಬ್ರುವರಿಯಲ್ಲಿ ಅಕ್ಯಾಪುಲ್ಕೊ ಟೂರ್ನಿಯಲ್ಲಿತಮ್ಮ ವಿರುದ್ಧ ಗೆದ್ದ ನಂತರ ಕಿರ್ಗಿಯೋಸ್‌ ‘ಗೌರವಯುತ ರೀತಿಯಲ್ಲಿ ನಡೆದುಕೊಳ್ಳಲಿಲ್ಲ’ ಎಂದು ನಡಾಲ್‌ ಹೇಳಿದ್ದು ಸುದ್ದಿಯಾಗಿತ್ತು. ಮೂರನೇ ಸುತ್ತಿಗೇರಿದರೆ ಅಲ್ಲಿ ಸಂಭಾವ್ಯ ಎದುರಾಳಿ ಕೆನಡಾದ ಪ್ರತಿಭಾನ್ವಿತ ಡೆನಿಸ್‌ ಶಪೋವಲೋವ್‌ ವಿರುದ್ಧ ಆಡಬೇಕಾಗುತ್ತದೆ.

ಎರಡನೇ ಶ್ರೇಯಾಂಕದ ಆಟಗಾರ, ಎಂಟು ಬಾರಿಯ ಚಾಂಪಿಯನ್‌ ರೋಜರ್‌ ಫೆಡರರ್‌, ಅಗ್ರ ಶ್ರೇಯಾಂಕದ ಜೊಕೊವಿಚ್‌ ಅವರಿಗೆ ಮೊದಲ ಸುತ್ತಿ ನಲ್ಲಿ ಪ್ರಬಲ ಎದುರಾಳಿಗಳು ಸಿಗುತ್ತಿಲ್ಲ.

ನಡಾಲ್‌– ಕಿರ್ಗಿಯೋಸ್‌ ಮುಖಾ ಮುಖಿಯನ್ನು ಟೆನಿಸ್‌ ಪ್ರಿಯರು ಎದುರು ನೋಡುತ್ತಿದ್ದಾರೆ. 2014 ರ ಟೂರ್ನಿಯಲ್ಲಿ ಆಗ 19 ವರ್ಷ ವಯಸ್ಸಿನ ಕಿರ್ಗಿಯೋಸ್, ನಡಾಲ್‌ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು. ಆದರೆ ಇನ್ನಷ್ಟು ಏಳಿಗೆ ಕಾಣುವ ಬದಲು ತಮ್ಮ ಒರಟು ವರ್ತನೆಯಿಂದ ಸುದ್ದಿಯಾದರು. ಲೈನ್‌ಮನ್ ವಿರುದ್ಧ ಧೂಷಣೆ, ಚೇರ್‌ ಅಂಪೈರ್‌ ಕಡೆ ದುರುಗುಟ್ಟಿ ನೋಡುವುದು, ಯಾರಿಗೂ ಸಿಗದ ರೀತಿ ಚೆಂಡನ್ನು ದೂರು ಹೊಡೆಯುವುದು, ಸ್ಟ್ಯಾಂಡ್‌ಗೆ ರ್‍ಯಾಕೆಟ್‌ ಎಸೆಯವುದು ಮೊದಲಾದ ವರ್ತನೆಯಿಂದ ಸುದ್ದಿಯಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ಸಲ ದಂಡ ತೆತ್ತಿದ್ದಾರೆ. ಎಚ್ಚರಿಕೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.