ADVERTISEMENT

ಆ್ಯಶ್ಲೆ ಬಾರ್ಟಿ ಮೇಲೆ ಅಭಿನಂದನೆಯ ಮಳೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 19:45 IST
Last Updated 9 ಜೂನ್ 2019, 19:45 IST
   

ಸಿಡ್ನಿ (ಎಎಫ್‌ಪಿ): ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಮೇಲೆ ಅಭಿಮಾನಿಗಳು ಮತ್ತು ಕ್ರೀಡಾಪ್ರೇಮಿಗಳು ಅಭಿನಂದನೆಯ ಮಳೆಯನ್ನೇ ಸುರಿಸಿದ್ದಾರೆ.

ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಬಾರ್ಟಿ 6–1, 6–3ರಲ್ಲಿ ಜೆಕ್ ಗಣರಾಜ್ಯದ ಮರ್ಕೆಟಾ ಒಂಡ್ರೊಸೊವಾ ಎದುರು ಗೆದ್ದಿದ್ದರು. ಈ ಮೂಲಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು 46 ವರ್ಷಗಳ ನಂತರ ಫ್ರೆಂಚ್ ಓಪನ್ ಟೂರ್ನಿಯ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಗೆಲುವಿನೊಂದಿಗೆ ಅವರು ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.

ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ 23 ವರ್ಷದ ಬಾರ್ಟಿ ಗೆದ್ದು ಸಂಭ್ರಮಿಸುತ್ತಿದ್ದಂತೆ ಆಸ್ಟ್ರೇಲಿಯಾದ ಹಿರಿಯ ಕ್ರೀಡಾಪಟುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಯನ್ನು ಹೇಳತೊಡಗಿದರು.

ADVERTISEMENT

ಆಸ್ಟ್ರೇಲಿಯಾದ ಮಾರ್ಗರೆಟ್ ಕೋರ್ಟ್, ಇವಾನ್ ಗೂಲಗಾಂಗ್ ಕವ್ಲಿ ಮತ್ತು ಲೆಸ್ಲಿ ಬೊವ್ರೆ ಈ ಹಿಂದೆ ರಾಲೆಂಡ್ ಗ್ಯಾರೋಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. 2011ರಲ್ಲಿ ಸಮಂತಾ ಸ್ಟಾಸರ್ ಅಮೆರಿಕ ಓಪನ್ ಪ್ರಶಸ್ತಿ ಬಗಲಿಗೆ ಹಾಕಿಕೊಂಡ ನಂತರ ಆಸ್ಟ್ರೇಲಿಯಾದ ಯಾರೂ ಗ್ರ್ಯಾನ್‌ಸ್ಲ್ಯಾಂ ಪ್ರಶಸ್ತಿ ಗೆದ್ದಿರಲಿಲ್ಲ. ಈ ಬರವನ್ನೂ ಬಾರ್ಟಿ ಈಗ ನೀಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.