ADVERTISEMENT

ಚೆನ್ನೈ ಓಪನ್‌ ಟೆನಿಸ್‌ ಟೂರ್ನಿ: ಆ್ಯಲಿಸನ್‌ ರಿಸ್ಕ್‌ ‘ಫೇವರಿಟ್’

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 13:38 IST
Last Updated 11 ಸೆಪ್ಟೆಂಬರ್ 2022, 13:38 IST
ಆ್ಯಲಿಸನ್‌ ರಿಸ್ಕ್‌
ಆ್ಯಲಿಸನ್‌ ರಿಸ್ಕ್‌   

ಚೆನ್ನೈ: ಡಬ್ಲ್ಯುಟಿಎ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿ ಸೋಮವಾರ ಆರಂಭವಾಗಲಿದ್ದು, ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರ ಒಳಗಿನ ಸ್ಥಾನದಲ್ಲಿರುವ ಕೆಲವು ಆಟಗಾರ್ತಿಯರು ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದಾರೆ.

ವಿಶ್ವದ 29ನೇ ರ‍್ಯಾಂಕ್‌ನ ಆಟಗಾರ್ತಿ ಅಮೆರಿಕದ ಆ್ಯಲಿಸನ್ ರಿಸ್ಕ್‌ ಅಮೃತ್‌ರಾಜ್‌ ಅವರಿಗೆ ಅಗ್ರಶ್ರೇಯಾಂಕ ನೀಡಲಾಗಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಆಗಿದ್ದಾರೆ. ಭಾರತದ ಟೆನಿಸ್‌ ಆಟಗಾರ ಆನಂದ್‌ ಅಮೃತ್‌ರಾಜ್‌ ಪುತ್ರ ಸ್ಟೀಫನ್‌ ಅಮೃತ್‌ರಾಜ್‌ ಅವರನ್ನು ಮದುವೆಯಾಗಿರುವ ಆ್ಯಲಿಸನ್‌, ಅಮೆರಿಕ ಓಪ‍ನ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು.

ವಿಶ್ವದ 17ನೇ ರ‍್ಯಾಂಕ್‌ನ ಆಟಗಾರ್ತಿ ಫ್ರಾನ್ಸ್‌ನ ಕೆರೊಲಿನಾ ಗಾರ್ಸಿಯಾ ಅವರು ಕೊನೆಯ ಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಅವರು ಅಮೆರಿಕ ಓಪನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತಿದ್ದರು.

ADVERTISEMENT

ಕೆನಡಾದ ಯೂಜಿನಿ ಬೊಶಾಡ್, ಜರ್ಮನಿಯ ತತಿಯಾನ ಮರಿಯಾ ಮತ್ತು ಬೆಲ್ಜಿಯಂನ ಯಾನಿನಾ ವಿಕ್ಮಯೆರ್‌ ಅವರು ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇತರ ಪ್ರಮುಖರಾಗಿದ್ದಾರೆ.

ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಅಂಕಿತಾ ರೈನಾ ಮತ್ತು ಕರ್ಮನ್‌ ಕೌರ್‌ ಅವರು ‘ವೈಲ್ಡ್‌ಕಾರ್ಡ್‌’ ಪ್ರವೇಶ ಪಡೆದಿದ್ದಾರೆ. ಡಬಲ್ಸ್‌ ವಿಭಾಗದಲ್ಲಿ ಶರ್ಮದಾ ಬಾಲು– ರಿಯಾ ಭಾಟಿಯಾ ಜತೆಯಾಗಿ ಆಡಲಿದ್ದಾರೆ. ಅಂಕಿತಾ ಅವರು ಡಬಲ್ಸ್‌ನಲ್ಲಿ ನೆದರ್ಲೆಂಡ್ಸ್‌ನ ರೊಸಾಲಿ ವಾನ್‌ ಡೆರ್‌ ಹೊಕ್‌ ಜತೆ ಕಣಕ್ಕಿಳಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.