ADVERTISEMENT

ಟೆನಿಸ್‌: ಪ್ರಜ್ಞೇಶ್‌ಗೆ ಸೋಲುಣಿಸಿದ ಯೂಕಿ

ಪಿಟಿಐ
Published 13 ಮಾರ್ಚ್ 2021, 13:08 IST
Last Updated 13 ಮಾರ್ಚ್ 2021, 13:08 IST
ಯೂಕಿ ಭಾಂಬ್ರಿ–ರಾಯಿಟರ್ಸ್ ಚಿತ್ರ
ಯೂಕಿ ಭಾಂಬ್ರಿ–ರಾಯಿಟರ್ಸ್ ಚಿತ್ರ   

ದುಬೈ: ಪ್ರಜ್ಞೇಶ್ ಗುಣೇಶ್ವರನ್ ಅವರನ್ನು ಮಣಿಸುವ ಮೂಲಕ ಭಾರತದ ಯೂಕಿ ಭಾಂಬ್ರಿದುಬೈ ಡ್ಯೂಟಿ ಫ್ರಿ ಟೆನಿಸ್‌ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿದರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ಪಂದ್ಯದಲ್ಲಿ ಅವರು ಶನಿವಾರ 6–1, 6–4ರಿಂದ ಗೆದ್ದರು.

ಭಾರತದವರೇ ಆದ ಪ್ರಜ್ಞೇಶ್ ಎದುರು ಆಡಿದ ಈ ಹಿಂದಿನ ಮೂರೂ ಪಂದ್ಯಗಳಲ್ಲಿ ಯೂಕಿ ಸೋಲು ಕಂಡಿಲ್ಲ. 2017ರಲ್ಲಿ ಎರಡು ಬಾರಿ (ಬೆಂಗಳೂರು ಹಾಗೂ ಉಜ್ಬೆಕಿಸ್ತಾನದ ಕರ್ಷಿಯಲ್ಲಿ) ಎಡಗೈ ಆಟಗಾರ ಪ್ರಜ್ಞೇಶ್, ಯೂಕಿ ಎದುರು ನಿರಾಸೆ ಅನುಭವಿಸಿದ್ದರು.

ಗಾಯದ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಯೂಕಿ ಸ್ಪರ್ಧಾತ್ಮಕ ಟೆನಿಸ್ ಆಡಿರಲಿಲ್ಲ. ಇತ್ತೀಚೆಗೆ ನಡೆದ ಸಿಂಗಪುರ ಓಪನ್‌ ಟೂರ್ನಿಯಲ್ಲಿ ಆಡುವ ಮೂಲಕ ಕಣಕ್ಕೆ ಮರಳಿದ್ದರು.

ADVERTISEMENT

ಯೂಕಿ ಅವರು ಮುಂದಿನ ಪಂದ್ಯದಲ್ಲಿ ಭಾರತದ ರಾಮ್‌ಕುಮಾರ್ ರಾಮನಾಥನ್ ಎದುರು ಸೆಣಸಲಿದ್ದಾರೆ. ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ರಾಮ್‌ಕುಮಾರ್ 6-4-6-4ರಿಂದ ಆರನೇ ಶ್ರೇಯಾಂಕದ, ರಷ್ಯಾ ಆಟಗಾರ ಎವಜೆನಿ ಡಾನ್‌ಸ್ಕೊಯ್ ಅವರನ್ನು ಮಣಿಸಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಇಬ್ಬರೂ ಭಾರತದ ಆಟಗಾರರೇ ಮುಖಾಮುಖಿಯಾಗುತ್ತಿರುವುದರಿಂದ ಕನಿಷ್ಠ ಒಬ್ಬರು ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.