ADVERTISEMENT

ವಿಶ್ವಕಪ್‌ 2007: ಕ್ವೀನ್ಸ್‌ ಪಾರ್ಕ್‌ನಲ್ಲಿ ದ್ರಾವಿಡ್‌ ಪಡೆಯ ದಾಖಲೆ

ವಿಶ್ವಕಪ್‌ ಹೆಜ್ಜೆಗುರುತು–40

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:34 IST
Last Updated 19 ಮೇ 2019, 19:34 IST
ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹ್ವಾಗ್‌ ಮತ್ತು ಯುವರಾಜ್‌ ಸಿಂಗ್‌ –ಪ್ರಜಾವಾಣಿ ಸಂಗ್ರಹ ಚಿತ್ರ
ರಾಹುಲ್‌ ದ್ರಾವಿಡ್‌, ವೀರೇಂದ್ರ ಸೆಹ್ವಾಗ್‌ ಮತ್ತು ಯುವರಾಜ್‌ ಸಿಂಗ್‌ –ಪ್ರಜಾವಾಣಿ ಸಂಗ್ರಹ ಚಿತ್ರ   

ಮೊದಲ ಪಂದ್ಯದಲ್ಲಿ ಬಾಂಗ್ಲಾ ಎದುರು ಆಘಾತ ಕಂಡಿದ್ದ ಭಾರತವು ಸೂಪರ್‌–8 ಹಂತಕ್ಕೇರಲು ಶ್ರೀಲಂಕಾ ಮತ್ತು ಬರ್ಮುಡಾ ಎದುರಿನ ಪಂದ್ಯಗಳಲ್ಲಿ ಗೆಲ್ಲಲೇಬೇಕಿತ್ತು. ಬರ್ಮುಡಾ ವಿರುದ್ಧ ದ್ರಾವಿಡ್‌ ಪಡೆ ಪ್ರಾಬಲ್ಯ ಮೆರೆದಿತ್ತು. ಮೊದಲು ಬ್ಯಾಟ್‌ ಮಾಡಿದ್ದ ತಂಡವು 5 ವಿಕೆಟ್‌ಗೆ 413ರನ್‌ ಗಳಿಸಿ ದಾಖಲೆ ನಿರ್ಮಿಸಿತ್ತು.

ವಿಶ್ವಕಪ್‌ನಲ್ಲಿ ತಂಡವೊಂದು ಪೇರಿಸಿದ ಗರಿಷ್ಠ ಮೊತ್ತ ಅದಾಗಿತ್ತು. ದ್ರಾವಿಡ್‌ ಬಳಗ 257ರನ್‌ಗಳ ಅಂತರದಿಂದ ಗೆದ್ದಿದ್ದು ಕೂಡಾ ದಾಖಲೆಯ ಪುಟ ಸೇರಿತ್ತು. ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ಎದುರು ಸೋತಿದ್ದ ಭಾರತವು ಗುಂಪು ಹಂತದಲ್ಲೇ ಹೊರಬಿದ್ದಿತ್ತು.

*ವೀರೇಂದ್ರ ಸೆಹ್ವಾಗ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ರಾಬಿನ್‌ ಉತ್ತಪ್ಪ ಎರಡನೇ ಓವರ್‌ನಲ್ಲೇ ಪೆವಿಲಿಯನ್‌ ಸೇರಿದರು.

ADVERTISEMENT

*ಮಲಾಚಿ ಜೋನ್ಸ್‌ ಅವರ ಲೆಂಗ್ತ್‌ ಎಸೆತವನ್ನು ಉತ್ತಪ್ಪ ಡ್ರೈವ್‌ ಮಾಡಲು ಪ್ರಯತ್ನಿಸಿದರು. ಅವರ ಬ್ಯಾಟಿನ ಅಂಚಿಗೆ ತಾಗಿ ತಮ್ಮತ್ತ ಬಂದ ಚೆಂಡನ್ನು ದಢೂತಿ ದೇಹದ ಡ್ವೇನ್‌ ಲೆವರಾಕ್‌ ಬಲಕ್ಕೆ ಜಿಗಿದು ಒಂದೇ ಕೈಯಲ್ಲಿ ಹಿಡಿದಿದ್ದರು. ಬಳಿಕ ಪ್ರೇಕ್ಷಕರ ಗ್ಯಾಲರಿಯತ್ತ ಓಡಿದ್ದು, ಗಾಳಿಯಲ್ಲಿ ಮುತ್ತು ತೇಲಿ ಬಿಟ್ಟಿದ್ದು, ಸಹ ಆಟಗಾರರು ಅವರ ಮೇಲೆ ಬಿದ್ದು ಸಂಭ್ರಮಿಸಿದ್ದ ಕ್ಷಣಗಳು ಕ್ರಿಕೆಟ್‌ ಪ್ರಿಯರ ಮನಸ್ಸಿನಲ್ಲಿ ಅಚ್ಚೊತ್ತಿದ್ದವು.

*ನಂತರ ‘ವೀರೂ’ (114; 87ಎ, 17ಬೌಂ, 3ಸಿ) ವೀರಾವೇಷದಿಂದ ಹೋರಾಡಿದ್ದರು. ಸೌರವ್‌ ಗಂಗೂಲಿ (89; 114ಎ, 6ಬೌಂ, 2ಸಿ) ಅವರ ಸಹನೆಯ ಆಟವೂ ಮನ ಸೆಳೆದಿತ್ತು.

*ಈ ಜೋಡಿ ಎರಡನೇ ವಿಕೆಟ್‌ಗೆ ದ್ವಿಶತಕದ (202) ಜೊತೆಯಾಟ ಆಡಿತ್ತು. ಇವರು ಔಟಾದ ನಂತರ ಯುವರಾಜ್‌ ಸಿಂಗ್ ಮತ್ತು ಸಚಿನ್‌ ತೆಂಡೂಲ್ಕರ್‌ ಅವರ ಆಟ ರಂಗೇರಿತ್ತು.

*ಯುವಿ ಮತ್ತು ಸಚಿನ್‌ ಕ್ರೀಸ್‌ನಲ್ಲಿದ್ದಷ್ಟು ಸಮಯ ಪ್ರೇಕ್ಷಕರೇ ಕ್ಷೇತ್ರರಕ್ಷಕರಾಗಿದ್ದರು! ಯುವರಾಜ್‌ 46 ಎಸೆತಗಳಲ್ಲಿ 83ರನ್‌ ಬಾರಿಸಿದರೆ, ಸಚಿನ್‌ ಕೇವಲ 29 ಎಸೆತಗಳಲ್ಲಿ 57ರನ್‌ ಗಳಿಸಿ ಅಜೇಯವಾಗುಳಿದಿದ್ದರು. ಹೀಗಾಗಿ ತಂಡದ ಮೊತ್ತವು 400ರ ಗಡಿ ದಾಟಿತ್ತು.

*ಬರ್ಮುಡಾ ತಂಡವು ರನ್‌ ಖಾತೆ ತೆರೆಯುವ ಮುನ್ನವೇ ಒಲೀವರ್‌ ಪಿಚರ್‌ ವಿಕೆಟ್‌ ಕಳೆದುಕೊಂಡಿತ್ತು. ಜಹೀರ್‌ ಖಾನ್‌ ಹಾಕಿದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಪಿಚರ್‌ ಬೌಲ್ಡ್‌ ಆದರು.

*ಡೇವಿಡ್‌ ಹೆಂಪ್‌ (ಔಟಾಗದೆ 76) ಏಕಾಂಗಿಯಾಗಿ ಹೋರಾಡಿದರೂ ಯಶಸ್ಸು ಸಿಗಲಿಲ್ಲ. ಈ ತಂಡದ ಐದು ಮಂದಿ ಶೂನ್ಯಕ್ಕೆ ಔಟಾಗಿದ್ದರು.

*ಮಾರ್ಚ್‌ 23ರಂದು ನಡೆದಿದ್ದ ಶ್ರೀಲಂಕಾ ಎದುರಿನ ನಿರ್ಣಾಯಕ ಹೋರಾಟದಲ್ಲಿ ಭಾರತ 69ರನ್‌ಗಳಿಂದ ಸೋತಿತ್ತು.

*ಮೊದಲು ಬ್ಯಾಟ್‌ ಮಾಡಿದ್ದ ಲಂಕಾ, ಉಪುಲ್‌ ತರಂಗ (64) ಮತ್ತು ಚಾಮರ ಸಿಲ್ವ (59) ಅವರ ಅರ್ಧಶತಕಗಳಿಂದಾಗಿ 6 ವಿಕೆಟ್‌ ಕಳೆದುಕೊಂಡು 254ರನ್‌ ಪೇರಿಸಿತ್ತು.

*ಭಾರತವು 43.3 ಓವರ್‌ಗಳಲ್ಲಿ 185ರನ್‌ಗಳಿಗೆ ಆಲೌಟ್‌ ಆಗಿತ್ತು. ದ್ರಾವಿಡ್‌ (60) ಮತ್ತು ಸೆಹ್ವಾಗ್‌ (48) ಅವರನ್ನು ಹೊರತುಪಡಿಸಿ ಉಳಿದವರೆಲ್ಲಾ ವಿಕೆಟ್‌ ನೀಡಲು ಅವಸರಿಸಿದ್ದರು.

*ಕಿಂಗ್ಸ್‌ಟನ್‌ನಲ್ಲಿ ನಡೆದಿದ್ದ ‘ಡಿ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನವು ಐರ್ಲೆಂಡ್‌ ಎದುರು ಆಘಾತ ಕಂಡಿತ್ತು.

*ಪಾಕ್‌ 45.4 ಓವರ್‌ಗಳಲ್ಲಿ 132ರನ್‌ಗಳಿಗೆ ಆಲೌಟ್‌ ಆಗಿತ್ತು. ಮಳೆಯ ಕಾರಣ ಐರ್ಲೆಂಡ್‌ ಗೆಲುವಿಗೆ 128ರನ್‌ಗಳ ಪರಿಷ್ಕೃತ ಗುರಿ (47 ಓವರ್‌ಗಳಲ್ಲಿ) ನೀಡಲಾಗಿತ್ತು.

*ನೀಲ್‌ ಓಬ್ರಿಯನ್‌ (72) ಛಲದ ಆಟ ಆಡಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.