ADVERTISEMENT

ಕಿವುಡುತನ ತರುವ ಐಪಾಡ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:30 IST
Last Updated 22 ಫೆಬ್ರುವರಿ 2011, 19:30 IST
ಕಿವುಡುತನ ತರುವ ಐಪಾಡ್
ಕಿವುಡುತನ ತರುವ ಐಪಾಡ್   

ಕಾಲ ಕ್ರಮೇಣ ತಂತ್ರಜ್ಞಾನವು ಸಾಕಷ್ಟು ಬದಲಾವಣೆ ಕಾಣುತ್ತಲೇ ಇದೆ. ಹಿತವಾದ ಸಂಗೀತ ಕೇಳಲು ಹಿಂದೆ ಇದ್ದ ಸೀಮಿತ ಅವಕಾಶಗಳು ಹೋಗಿ ಇಂದು ಮಿತಿಯಿಲ್ಲದ್ದು ಅವಕಾಶಗಳು ಇವೆ. ಬರೀ ಗ್ರಾಮಫೋನ್ ಮೂಲಕವೇ ಸಂಗೀತವನ್ನು ಆಸ್ವಾದಿಸುತ್ತಿದ್ದ ಕಾಲ ಹೋಗಿ ಇಂದು ಯಾವ ಕ್ಷಣ, ಎಲ್ಲಿ, ಹೇಗೆ ಬೇಕಾದರೂ ಸಂಗೀತ ಕೇಳುವ ಸವಲತ್ತು, ತಂತ್ರಜ್ಞಾನ ಬಂದಿವೆ. ರೇಡಿಯೊ, ಎಫ್‌ಎಂ, ಟಿವಿ, ಎಂಪಿ3ಗಳಿಗಿಂತಲೂ ಆಧುನಿಕವಾದ ಐಪಾಡ್ ಮೂಲಕ ಇಂದು ವಿಶ್ವದಾದ್ಯಂತ ಸಂಗೀತಪ್ರಿಯರು ಮನರಂಜನೆ ಪಡೆಯಲು ಸಾಧ್ಯವಾಗಿದೆ.

ಐಪಾಡ್ ಮೂಲಕ ಸಂಗೀತವನ್ನು ಸುಲಭವಾಗಿ ಕೇಳಬಹುದು. ಬೇರೆಯವರ ಗೊಡವೆಗೆ ಹೋಗದೆ, ಇತರರಿಗೆ ತೊಂದರೆಯನ್ನೂ ಕೊಡದೆ ತಮ್ಮ ಪಾಡಿಗೆ ತಾವೇ ಸಂಗೀತವನ್ನು ಸವಿಯುವ ಅವಕಾಶ ಇದರಿಂದ ಸಿಕ್ಕಿದೆ. ಐಪಾಡ್ ಈ ನಿಟ್ಟಿನಲ್ಲಿ ಸಂಗೀತ ರಸಿಕರ ಸಂಗಾತಿಯಾಗಿದೆ. ಐಪಾಡ್ ಅನ್ನು ಎಲ್ಲಿ ಬೇಕಾದರೂ ಸುಲಭವಾಗಿ ಕೊಂಡೊಯ್ಯಬಹುದು. ಸಂಗೀತ ಕೇಳುತ್ತಲೇ ಬೇರೆ ಬೇರೆ ಕೆಲಸಗಳನ್ನೂ ಮಾಡಬಹುದು. ಬಸ್, ರೈಲುಗಳಲ್ಲಿ ಒಂಟಿಯಾಗಿ ಪ್ರಯಾಣ ಮಾಡುವಾಗ ಬೇಸರ ಕಳೆಯುವುದಕ್ಕೆ ಐಪಾಡ್ ಉತ್ತಮ ಸಂಗಾತಿ. ನಮಗಿಷ್ಟವಾದ ಸಂಗೀತ ಹಾಕಿಕೊಂಡು ಎಷ್ಟು ಹೊತ್ತು ಬೇಕಾದರೂ ಸವಿಯಬಹುದು.

ಸೋನಿ, ಆ್ಯಪಲ್ ಮುಂತಾದ ಹೆಸರಾಂತ ಕಂಪೆನಿಗಳು ಐಪಾಡ್ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ. ಜಗತ್ತಿನಾದ್ಯಂತ ಗ್ರಾಹಕರನ್ನು ಆಕರ್ಷಿಸಿ ಲಾಭದತ್ತ ಮುನ್ನಡೆಯುತ್ತಿವೆ. ಐಪಾಡ್‌ನೊಂದಿಗೆ ಜನರೂ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದಾರೆ.

ಇದು ತಂತ್ರಜ್ಞಾನದ ಪ್ರಗತಿಯಿಂದಲೇ ಎಂಬುದು ದೃಢವಾದರೂ ಇದರಿಂದ ಇನ್ನು ಹೆಚ್ಚು ಖುಷಿಪಡುವ ಹಾಗಿಲ್ಲ. ಐಪಾಡ್ ಸಂಗೀತ ನಿತ್ಯವೂ ಕೇಳುವುದು ಆರೋಗ್ಯಕ್ಕೆ ಮಾರಕ, ಕಿವಿಗಳಿಗೆ ತೊಂದರೆಯಿದೆ, ಶ್ರವಣ ದೋಷ ಉಂಟಾಗುತ್ತದೆ, ಶಾಶ್ವತ ಕಿವುಡುತನವೂ ಬರಬಹುದು ಎಂಬ ‘ಬಾಂಬ್’ ಒಂದನ್ನು ಬ್ರಿಟನ್ ಶ್ರವಣ ತಜ್ಞರು ಇತ್ತೀಚೆಗೆ ಸಿಡಿಸಿದ್ದಾರೆ.

ಐಪಾಡ್‌ನಲ್ಲಿ ಸಂಗೀತವನ್ನು ಸಣ್ಣ ವಾಲ್ಯುಮ್‌ನಲ್ಲಿ ಕೇಳಿದರೆ ಅಪಾಯದ ಪ್ರಮಾಣ ಕಡಿಮೆ. ಆದರೆ ದೊಡ್ಡ ದನಿಯಲ್ಲಿ ಕೇಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಜೋರಾಗಿ ಸಂಗೀತ ಕೇಳುವುದು ಮನಸ್ಸಿಗೆ ಖುಷಿಯೇ. ಆದರೆ ಇದರಿಂದ ಕಿವಿ ಕಿವುಡಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸುತ್ತಾರೆ ಬ್ರಿಟನ್‌ನ ಲಿವರ್‌ಪೂಲ್ ಆಸ್ಪತ್ರೆಯ ಹಿರಿಯ ಶ್ರವಣ ತಜ್ಞ ಡಾ. ಟೋನಿ. ಕೆ. ಅವರು.

ಸಂಗೀತ ಕೇಳುವಾಗ ಅದರಲ್ಲೂ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಹೊರಗಿನ ಶಬ್ದ, ಗದ್ದಲ ಹೆಚ್ಚು ಇರುವುದರಿಂದ ಸಹಜವಾಗಿಯೇ ವಾಲ್ಯುಮ್ ಜಾಸ್ತಿ ಇಟ್ಟುಕೊಳ್ಳಬೇಕಾಗುತ್ತದೆ. ಇದರಿಂದ ಕಿವಿಗೆ ಹಾನಿಯಾಗುವುದರಿಂದ ಐಪಾಡ್‌ನಿಂದ ಆದಷ್ಟು ದೂರವಿರುವುದೇ ಲೇಸು ಎಂದು ಅವರು ಸಲಹೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.