ADVERTISEMENT

ಟ್ಯಾಬ್ಲೆಟ್ ಮಹಾ ಸಮರ...!

ಪ್ರಜಾವಾಣಿ ವಿಶೇಷ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

 ಚೀನಾ ಹೊರತುಪಡಿಸಿದರೆ ಪ್ರಪಂಚದಲ್ಲಿಯೇ ಎರಡನೆಯ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆ ಭಾರತ. ವಾರ್ಷಿಕ 1 ಶತಕೋಟಿಗಳಷ್ಟು ಮೊಬೈಲ್ ಹ್ಯಾಂಡ್‌ಸೆಟ್‌ಗಳು ಇಲ್ಲಿ ಮಾರಾಟವಾಗುತ್ತವೆ.  ಆದರೆ, 2011ರಲ್ಲಿ  ಈ ಮೊಬೈಲ್ ಮಾರುಕಟ್ಟೆ ಆಧಿಪತ್ಯವನ್ನು `ಟ್ಯಾಬ್ಲೆಟ್ ಪಿಸಿ~ಗಳು ಮುರಿದಿವೆ.
 
ಜಾಗತಿಕ ಸಮೀಕ್ಷಾ ಸಂಸ್ಥೆ ರ್ಫೋಸ್ಟ್ ಅಂಡ್ ಸ್ಯುಲಿವೆನ್ ಸಮೀಕ್ಷೆ ಪ್ರಕಾರ, 2011ರಲ್ಲಿ ಭಾರತೀಯರು ಅಂದಾಜು 3 ಲಕ್ಷದಷ್ಟು ಟ್ಯಾಬ್ಲೆಟ್ ಪಿಸಿಗಳನ್ನು ಖರೀದಿಸಿದ್ದಾರೆ. 2010ರಲ್ಲಿ ಈ ಸಂಖ್ಯೆ ಕೇವ 60 ಸಾವಿರದಷ್ಟಿತ್ತು. ಮಾರಾಟದ ಶೇಕಡಾವಾರು ಪ್ರಗತಿ ಗಮನಿಸಿದರೆ ಮೊಬೈಲ್ ಹ್ಯಾಂಡ್‌ಸೆಟ್‌ಗಳಿಗಿಂತಲೂ ಟ್ಯಾಬ್ಲೆಟ್‌ಗಳ ಮಾರಾಟ ಹೆಚ್ಚಾಗಿದೆ.

ಐಪಾಡ್‌ನಂತಹ ಗರಿಷ್ಠ ಶ್ರೇಣಿಯ ಟ್ಯಾಬ್ಲೆಟ್ ಇರಬಹುದು ಅಥವಾ `ಆಕಾಶ್~ನಂತಹ ಅಗ್ಗದ ಟ್ಯಾಬ್ಲೆಟ್ ಇರಬಹುದು, ಭಾರತದಲ್ಲಂತೂ ಇವು ಹೊಸ ಸಂಚಲನ ಸೃಷ್ಟಿಸಿರುವುದಂತೂ ನಿಜ. ಜಾಗತಿಕ ಟ್ಯಾಬ್ಲೆಟ್‌ಗಳ ಮಾರಾಟ ವರ್ಷದಿಂದ ವರ್ಷಕ್ಕೆ ಶೇ 261ರಷ್ಟು ಹೆಚ್ಚುತ್ತಿದ್ದು, 2015ರ ವೇಳೆಗೆ ಒಟ್ಟು ಮಾರಾಟದ ಸಂಖ್ಯೆ  326 ದಶಲಕ್ಷ ತಲುಪಲಿದೆ ಎಂದು ಜಾಗತಿಕ ಸಂಶೋಧನಾ ಸಂಸ್ಥೆ `ಗಾರ್ಟ್‌ನರ್~ ಅಂದಾಜಿಸಿದೆ. ಆದರೆ, ಈ ವೇಳೆಗೆ  `ಆಂಡ್ರಾಯ್ಡ~  ಸ್ಪರ್ಧೆಯಿಂದಾಗಿ ಸದ್ಯ ಶೇ 74ರಷ್ಟು ಮಾರುಕಟ್ಟೆ ಪಾಲು ಹೊಂದಿರುವ `ಆ್ಯಪಲ್~ನ ಮಾರಾಟ ಶೇ 50 ಕುಸಿಯಲಿದೆ ಎನ್ನುವುದು ಗಮನೀಯ ಅಂಶ.

ಆ್ಯಪಲ್ ಐಪಾಡ್ ಪ್ರವೇಶದೊಂದಿಗೆ 2011ನೇ ಸಾಲಿನ ಟ್ಯಾಬ್ಲೆಟ್ ಸಮರ ಪ್ರಾರಂಭವಾಯಿತು. `ಐಫೋನ್-4ಎಸ್~ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ  ಮಾರುಕಟ್ಟೆಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿತು.   ಇದರಲ್ಲಿದ್ದ `ಸಿರಿ~ ತಂತ್ರಾಂಶ ಬಳಕೆದಾರರ ಮನಗೆದ್ದಿತ್ತು. ಐಫೋನ್ 4ಎಸ್‌ನ ದರ (16 ಜಿಬಿ) ್ಙ44,500. `ಸಿರಿ~ ಬರುವ ಮೊದಲು ಇದು ್ಙ34,500ಕ್ಕೆ ಲಭಿಸುತ್ತಿತ್ತು.  ಕ್ಲೌಡ್ ಕಂಪ್ಯೂಟಿಂಗ್ ಆಧಾರಿತ `ಐಕ್ಲೌಡ್~  ಮತ್ತು ಕಾರ್ಯನಿರ್ವಹಣಾ ತಂತ್ರಾಂಶ `ಐಒಎಸ್5~ ಕೂಡ ಬಿಡುಗಡೆಯಾಗಿದ್ದು 2011ರಲ್ಲಿ. `ಆ್ಯಪಲ್ ಅನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸಿದ  ಸಹ ಸ್ಥಾಪಕ ಸ್ಟೀವ್ ಜಾಬ್ಸ್ ನಿಧನರಾಗಿದ್ದೂ ಈ ಅವಧಿಯಲ್ಲಿಯೇ. ಐಪಾಡ್ ವಿನ್ಯಾಸಕ್ಕೆ ಜಾಬ್ಸ್ ನೀಡಿದ ಕೊಡುಗೆ ಅಲ್ಲಗಳೆಯುವಂತಿಲ್ಲ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ರಿಸರ್ಚ್ ಇನ್ ಮೋಷನ್, `ಪ್ಲೇಬುಕ್~ ಅನ್ನು ಮಾರುಕಟ್ಟೆಗೆ ಪರಿಚಯಿಸಿತು. ಮೊಟರೊಲಾ ಕಂಪೆನಿ ಕೂಡ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇರುವ `ಝೂಮ್~ ಬಿಡುಗಡೆ ಮಾಡಿತು. ಇದೇ ಅವಧಿಯಲ್ಲಿ ತೈವಾನ್ ಮೂಲದ ಹ್ಯಾಂಡ್‌ಸೆಟ್ ತಯಾರಿಕೆ ಕಂಪೆನಿ ಎಚ್‌ಟಿಸಿ `ಫ್ಲೈಯರ್~ ಅನ್ನು ದೇಶೀಯ ಮಾರುಕಟ್ಟೆಗೆ ಪರಿಚಯಿಸಿತು.
 
ಅಂಚೆ ಲಕೋಟೆಯಲ್ಲಿ ಇಟ್ಟುಕೊಳ್ಳಬಹುದಾದಷ್ಟು ತೆಳ್ಳಗಿರುವ `ಅಲ್ಟ್ರಾಥಿನ್~ ಟ್ಯಾಬ್ಲೆಟ್‌ಗಳೂ ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಬಂದವು. ಸ್ಯಾಮ್ಸಂಗ್  ಗ್ಯಾಲಕ್ಸಿ ಟ್ಯಾಬ್ 730 ಬಿಡುಗಡೆಗೊಂಡದ್ದೇ  ನಿಜವಾದ ಟ್ಯಾಬ್ಲೆಟ್ ಮಹಾ ಸಮರ ಪ್ರಾರಂಭವಾಯಿತು. ಇದರ ಬೆನ್ನಲ್ಲೇ ಗ್ಯಾಲಕ್ಸಿ 750 ಮಾರುಕಟ್ಟೆ ಪ್ರವೇಶಿಸಿತು. ಸ್ಯಾಮ್ಸಂಗ್ `ಆ್ಯಪಲ್~ನ ಕೆಲವು ವಿನ್ಯಾಸಗಳನ್ನು ನಕಲು ಮಾಡಿಕೊಂಡಿದೆ ಎನ್ನುವ ಕಾರಣಕ್ಕೆ ಕಾನೂನು ಸಮರವನ್ನೂ ಎದುರಿಸಬೇಕಾಯಿತು. 2012ರಲ್ಲಿ ಐಪಾಡ್‌ಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ತೀವ್ರ ಸ್ಪರ್ಧೆ ಒಡ್ಡಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಆಕಾಶ್...! 
 ಶಾಲಾ ಮಕ್ಕಳಿಗಾಗಿ ಸರ್ಕಾರ ಸಬ್ಸಿಡಿ ದರದಲ್ಲಿ ವಿತರಿಸಲು ಉದ್ದೇಶಿಸಿರುವ `ಆಕಾಶ್~ ಕಂಪ್ಯೂಟರ್ ವರ್ಷಾಂತ್ಯದಲ್ಲಿ ಹೆಚ್ಚು ಸುದ್ದಿ ಮಾಡಿತ್ತು. ಅಸಲಿಗೆ ಆಕಾಶ್ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಪುಟ್ಟ ಟ್ಯಾಬ್ಲೆಟ್.  ಲಂಡನ್ ಮೂಲದ ಡಾಟಾವಿಂಡ್ ಮತ್ತು ರಾಜಸ್ತಾನದ ಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತೀಯ ಮೂಲದ ಕ್ವಾಡ್ ಎನ್ನುವ ಕಂಪೆನಿ   `ಆಕಾಶ್~ ಅನ್ನು ತಯಾರಿಸುತ್ತಿದೆ. ಹಾಗೆ ನೋಡಿದರೆ ಕಳೆದ ಅಕ್ಟೋಬರ್ 5ರಂದು `ಆಕಾಶ್~ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಇದರ ಪರಿಷ್ಕೃತ ಆವೃತ್ತಿ ಎರಡನೆಯ ತಲೆಮಾರಿನ `ಯುಬಿ ಸ್ಲೇಟ್ 7+~  ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ದೇಶದ ಸುಮಾರು 25 ಸಾವಿರ ಕಾಲೇಜುಗಳು ಮತ್ತು 400 ವಿಶ್ವವಿದ್ಯಾಲಯಗಳನ್ನು ಇ-ಕಲಿಕೆ ಕಾರ್ಯಕ್ರಮದ ವ್ಯಾಪ್ತಿಗೆ ತರಲು ನಡೆಸುತ್ತಿರುವ ಯೋಜನೆ ಭಾಗವಾಗಿ `ಆಕಾಶ್~ ರೂಪಗೊಂಡಿದೆ. 2012,ಜನವರಿ 3ರ ವರೆಗೆ ಆಕಾಶ್‌ಗಾಗಿ ಆನ್‌ಲೈನ್‌ನಲ್ಲಿ 1.4 ದಶಲಕ್ಷ ಬೇಡಿಕೆಗಳು ನೋಂದಣಿಗೊಂಡಿವೆ.

ಗಾರ್ಟ್‌ನರ್ ಸಮೀಕ್ಷೆ

`ಗಾರ್ಟ್‌ನರ್~ ನಡೆಸಿದ ಸಮೀಕ್ಷೆ ಪ್ರಕಾರ 2011ರಲ್ಲಿ ಸುಮಾರು 64 ದಶಲಕ್ಷಗಳಷ್ಟು ಟ್ಯಾಬ್ಲೆಟ್‌ಗಳು ಮಾರಾಟವಾಗಿದ್ದು ಇದರಲ್ಲಿ ಆ್ಯಪಲ್ ಪಾಲು ಶೇ 73ರಷ್ಟಿದೆ. ಈ ಅವಧಿಯಲ್ಲಿ ಮಾರಾಟವಾದ ಶೇ 17ರಷ್ಟು ಟ್ಯಾಬ್ಲೆಟ್‌ಗಳಲ್ಲಿ ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಇದೆ ಎನ್ನುವುದು ಮತ್ತೊಂದು ವಿಶೇಷ.  

ಆಂಡ್ರಾಯ್ಡ ಆಧಾರಿತ ಟ್ಯಾಬ್ಲೆಟ್‌ಗಳಿಗೆ ಗ್ರಾಹಕರ ಬೇಡಿಕೆ ಹೆಚ್ಚುತ್ತಿದೆ. ಸ್ಪರ್ಶ ಪರದೆ ಗುಣಮಟ್ಟ, ಅಪ್ಲಿಕೇಷನ್ ಮತ್ತು ಪ್ರೊಸೆಸಿಂಗ್ ವೇಗಕ್ಕೆ ಬಂದರೆ `ಆ್ಯಪಲ್~ ಒಂದು ಹೆಜ್ಜೆ ಮುಂದಿದೆ ಎನ್ನುತ್ತಾರೆ ಗಾರ್ಟ್‌ನರ್‌ನ  ಪ್ರಧಾನ ವಿಶ್ಲೇಷಕಿ ರೋಬೆಟ್ರಾ ಕೋಸಾ. 2012ರಲ್ಲೂ ಆ್ಯಪಲ್ ಶೇ67ರಷ್ಟು ಮಾರುಕಟ್ಟೆ ಪಾಲಿನೊಂದಿಗೆ  69 ದಶಲಕ್ಷ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಲಿದೆ. ಇದೇ ಅವಧಿಯಲ್ಲಿ ಆಂಡ್ರಾಯ್ಡ ಶೇ 22ರಷ್ಟು ಮಾರುಕಟ್ಟೆ ಪ್ರಗತಿ ದಾಖಲಿಸಲಿದೆ ಎಂದೂ ಗಾರ್ಟ್‌ನರ್ ಹೇಳಿದೆ. 
  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.