ADVERTISEMENT

ಪೆಲಿಕನ್ ಮತ್ತು ಅಮೆರಿಕ

ಬಿ.ಎಸ್.ಶೈಲಜಾ
Published 18 ಜನವರಿ 2011, 13:40 IST
Last Updated 18 ಜನವರಿ 2011, 13:40 IST

ಉತ್ತರ ಆಕಾಶದಲ್ಲಿ ಸುಲಭವಾಗಿ ಗುರುತಿ ಸಬಹುದಾದ ನಕ್ಚತ್ರ ಪುಂಜ ರಾಜಹಂಸ (ಸಿಗ್ನಸ್). ಇದರಲ್ಲಿಯ ಪ್ರಖರ ನಕ್ಷತ್ರಕ್ಕೆ (ದೆನೆಬ್) ಹಂಸಾಕ್ಷಿ ಎಂಬ ಹೆಸರಿದೆ. ‘ದೆನೆಬ್’ ಎಂಬುದು ಸೂರ್ಯನ 300 ಪಟ್ಟು ವ್ಯಾಸದ ದೈತ್ಯ ನಕ್ಷತ್ರ. 1600 ಜ್ಯೋತಿರ್ವರ್ಷ ದೂರದಲ್ಲಿದ್ದರೂ ಪ್ರಕಾಶಮಾನವಾಗಿ ಕಾಣುವುದು.

ದುರ್ಬಿನಿನಿಂದ ಅಥವಾ ಸಣ್ಣ ದೂರದರ್ಶಕದಿಂದ ಇದರ ಪಶ್ಚಿಮ ಭಾಗ ಸುಮಾರು ಮೂರು ಡಿಗ್ರಿ ಅಂತರದಲ್ಲಿ ಹುಡುಕಿ, ವೀಕ್ಷಿಸಿದರೆ ಅಲ್ಲೊಂದು ನೆಬ್ಯುಲಾ ಕಂಡು ಬರುತ್ತದೆ. ಇದನ್ನು ವಿಲಿಯಂ ಹರ್ಷೆಲ್ ಮೊದಲಬಾರಿ ಗಮನಿಸಿ ದಾಖಲಿಸಿದನು. ಮ್ಯಾಕ್ಸ್ ವುಲ್ಫ್ ಇದರ ಮೊದಲ ಛಾಯಾಚಿತ್ರವನ್ನು 1890ರಲ್ಲಿ ತೆಗೆದಾಗ ಉತ್ತರ ಅಮೆರಿಕದ ನಕ್ಷೆಯ ಹೋಲಿಕೆಯನ್ನು ಗಮನಿಸಿ ನಾರ್ತ್ ಅಮೆರಿಕ ನೆಬ್ಯುಲ ಎಂದು ಹೆಸರಿಟ್ಟನು.

ಈ ಭಾಗದಲ್ಲಿ ಆಕಾಶಗಂಗೆಯ ಒಂದು ಭಾಗವೂ ಹರಿಯುತ್ತದೆ. ಇದರ ಪಕ್ಕದಲ್ಲಿ ಇನ್ನೊಂದು ನೆಬ್ಯುಲಾ ಇದೆ ಅದಕ್ಕೆ ‘ಪೆಲಿಕನ್’ ಎಂದು ಹಕ್ಕಿಯ ಹೆಸರಿದೆ. ಎನ್‌ಜಿಸಿ ಪಟ್ಟಿಯಲ್ಲಿ 7000 ಎಂಬ ನಮೂದು ಇದು.ವಾಸ್ತವದಲ್ಲಿ ನಾರ್ತ್ ಅಮೆರಿಕ ಮತ್ತು ‘ಪೆಲಿಕನ್’ ಎರಡನ್ನೂ ವ್ಯಾಪಿಸಿದ  ಬಹುದೊಡ್ಡ ನೆಬ್ಯುಲಾದ ಸ್ವಲ್ಪ ಭಾಗವನ್ನು ಇನ್ನೊಂದು ಕಪ್ಪು ಮೋಡ ಮುಚ್ಚಿ ಹಾಕಿದೆ. ಆದ್ದರಿಂದ ಮಧ್ಯೆ ಕಪ್ಪು ಭಾಗ ಕಾಣುತ್ತದೆ. ಇದರ ದೂರ ಸುಮಾರು 1600 - 1800 ಜ್ಯೋತಿ ರ್ವರ್ಷಗಳು. ಬರಿಗಣ್ಣಿಗೆ ಹತ್ತಿಯ ಪದರದಂತೆ ಕಾಣುತ್ತದೆ; ಆದರೆ ಛಾಯಾಚಿತ್ರಗಳಲ್ಲಿ ತಿಳಿಗೆಂಪು ಬಣ್ಣ ಕಾಣುತ್ತದೆ.

ಹಿನ್ನೆಲಿಯಲ್ಲಿರುವ ಪ್ರಕಾಶಮಾನ ನಕ್ಷತ್ರಗಳು ನೆಬ್ಯುಲಾವನ್ನು ಬೆಳಗುತ್ತಿವೆ. ಬಹು ದೊಡ್ಡ ನಕ್ಷತ್ರ ದೆನೆಬ್ ಕೂಡ ಈ ಕ್ರಿಯೆಯಲ್ಲಿ ಪಾಲ್ಗೊಂಡಿದೆ. ಇಲ್ಲಿ ಅನಿಲ ಮತ್ತು ಧೂಳು ಸಾಕಷ್ಟು ದಟ್ಟವಾಗಿ ಹರಡಿದೆ. ಪೂರ್ಣಚಂದ್ರನ ಆರು ಪಟ್ಟು ಅಂದರೆ ಸುಮಾರು ಮೂರು ಡಿಗ್ರಿ ವ್ಯಾಪಿಸಿರುವ ಈ ಭಾಗ ಸುಮಾರು 100 ಜ್ಯೋತಿರ್ವರ್ಷಗಳಷ್ಟು ವಿಸ್ತಾರವಾದದ್ದರಿಂದ ಹವ್ಯಾಸಿ ವೀಕ್ಷಕರು ಬರಿಗಣ್ಣಿನಿಂದ ವೀಕ್ಷಿಸುವ ಪ್ರಯತ್ನ ನಡೆಸುತ್ತಾರೆ.
 
ಚಂದ್ರನಿಲ್ಲದ ಶುಭ್ರ ಆಕಾಶಗಳಲ್ಲಿ ಈ ಪ್ರಯತ್ನ ಯಶಸ್ವಿ ಯಾಗಬಹುದು. ಈ ಭಾಗದಲ್ಲಿ ಹೊಸ ನಕ್ಷತ್ರಗಳ ರಚನೆ ಅವು ಉತ್ಸರ್ಜಿಸುವ ಅನಿಲ ಮತ್ತು ಧೂಳು, ಹೈಡ್ರೋಜನ್‌ನ ಅಯಾಣುಗಳ ಮೋಡ, ಜೊತೆಗೆ ತಣ್ಣನೆಯ ಅನಿಲದ ಮೋಡ - ಇವೆಲ್ಲವೂ ಒಟ್ಟಿಗೇ ನೋಡ ಸಿಗುವುದರಿಂದ ಹೆಚ್ಚಿನ ಅಧ್ಯಯನಕ್ಕೆ ಆಸ್ಪದ ಸಿಗುತ್ತದೆ. ಇವುಗಳ ಪರಸ್ಪರ ಘರ್ಷಣೆ, ನಕ್ಷತ್ರ ರಚನೆಯ ಮೇಲೆ ಪರಿಣಾಮ ಇಂತಹ ಸನ್ನಿವೇಶಗಳನ್ನು  ಇಲ್ಲಿ ಕಾಣಬಹುದು.

ಈ ಚಿತ್ರದಲ್ಲಿ ಮಧ್ಯ ಅಮೆರಿಕದ ಭಾಗವನ್ನು ಮಧ್ಯ ಗೋಡೆ ಎಂದೇ ಕರೆಯುತ್ತಾರೆ. ಅಲ್ಲಿ ನಕ್ಷತ್ರಗಳ ರಚನೆ ಭರದಿಂದ ಸಾಗಿದೆ. ಆಕಾಶದ ಈ ಭಾಗದಲ್ಲಿ ಇವೆರಡೂ ನೆಬ್ಯುಲಾಗಳಲ್ಲದೆ ಕೆಲವು ನಕ್ಷತ್ರ ಗುಚ್ಛಗಳೂ ಇವೆ. ಇವುಗಳಿಗೆ ‘ಎನ್‌ಜಿಸಿ’ ಪಟ್ಟಿಯಲ್ಲಿ 6989, 6996, 6997 ಈ ಸಂಖ್ಯೆಗಳಿವೆ.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.