ADVERTISEMENT

ಮೊಬೈಲ್‌ಗೆ `ಮಾಲ್‌ವೇರ್' ಕಂಟಕ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಮೊಬೈಲ್ ಫೋನ್ ಗಳ ಮೇಲಿನ ದಾಳಿ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಶೇ 614ರಷ್ಟು ಕಳವಳಕಾರಿ ಪ್ರಮಾಣದಲ್ಲಿ ಹೆಚ್ಚಿದೆ. 2012ರ ಮಾರ್ಚ್‌ನಿಂದ 2013ರ ಮಾರ್ಚ್‌ವರೆಗೆ ನಡೆಸಿದ ಸಂಶೋಧನೆಯಲ್ಲಿ 2,76,259 ಸಂಶಯಾಸ್ಪದ ಅಪ್ಲಿಕೇಷನ್ಸ್ ಪತ್ತೆಯಾಗಿವೆ.

ಮೊಬೈಲ್ ಫೋನ್ ಅಥವಾ ಮೊಬೈಲ್ ಸಂಪರ್ಕ ಸಾಧನಗಳ ಮೇಲಿನ ದಾಳಿ ಸೈಬರ್ ಅಪರಾಧ ವಿಪರೀತವಾಗುತ್ತಿರುವುದರ
ಧ್ಯೋತಕ ಎಂದು ಅಮೆರಿಕದ `ಜ್ಯೂನಿಪರ್ ನೆಟ್‌ವರ್ಕ್ಸ್' ಎಚ್ಚರಿಸಿದೆ.

ಮೊಬೈಲ್ ಫೋನ್‌ಗಳಿಗೆ `ಮಾಲ್‌ವೇರ್' ದಾಳಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇದು ದಾಳಿಕೋರರಿಗಂತೂ ಲಾಭದಾಯಕ ಉದ್ಯಮ ಎನಿಸಿಕೊಂಡಿದೆ. ಮೊಬೈಲ್ ಫೋನ್ ಬಳಕೆದಾರರು ಅಪಾಯದ ಅರಿವಿಲ್ಲದೇ ನಕಲಿ ಸಂದೇಶವನ್ನು ಸ್ವೀಕರಿಸಿದರೆ ವೈರಸ್ ದಾಳಿಕೋರರಿಗೆ 10 ಅಮೆರಿಕನ್ ಡಾಲರ್(ರೂ. 550ರಿಂದ 600ವರೆಗೂ) ಲಾಭ ತಂದುಕೊಡುತ್ತದೆ. ಹಾಗಾಗಿಯೇ ಹೆಚ್ಚು ಮಾಲ್‌ವೇರ್‌ಗಳನ್ನು ಸೃಷ್ಟಿಸಿ `ಉಚಿತ  ಅಪ್ಲಿಕೇಷನ್' ಹೆಸರಿನಲ್ಲಿ ಅಂತರ್ಜಾಲದಲ್ಲಿ ಹರಿಯಬಿಡುತ್ತಿದ್ದಾರೆ.

`ಆಂಡ್ರಾಯ್ಡ' ನಿರ್ವಹಣಾ ತಂತ್ರಾಂಶದ ಎಲೆಕ್ಟ್ರಾನಿಕ್ಸ್ ಸಾಧನಗಳೇ ಶೇ 92ರಷ್ಟು ಪ್ರಮಾಣದಲ್ಲಿ ಈ ಕುತಂತ್ರಕ್ಕೆ ಬಲಿಬೀಳುತ್ತಿವೆ ಎನ್ನುತ್ತದೆ ಸಂಶೋಧನಾ ವರದಿ.

2012ರಲ್ಲಿ ವಿಶ್ವದಲ್ಲಿದ್ದ ಒಟ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಶೇ 67.7ರಷ್ಟು ಹ್ಯಾಂಡ್‌ಸೆಟ್ ಆಂಡ್ರಾಯ್ಡ ತಂತ್ರಾಂಶಅಳವಡಿಸಿದವೇ ಆಗಿವೆ. 2017ರ ವೇಳೆಗೆ ಆಂಡ್ರಾಯ್ಡ ಆಧರಿಸಿದ ಸ್ಮಾರ್ಟ್‌ಫೋನ್ ಸಂಖ್ಯೆ 100 ಕೋಟಿ ಮುಟ್ಟಲಿದೆ ಎನ್ನುತ್ತದೆ ಎಲೆಕ್ಟ್ರಾನಿಕ್ಸ್ ಸಾಧನಗಳ ವಿಶ್ಲೇಷಣಾ ಸಂಸ್ಥೆ `ಕೆನಲೈಸ್'. ಹಾಗಾಗಿಯೇ ಮೊಬೈಲ್ ದಾಳಿಕೋರರು ಆಂಡ್ರಾಯ್ಡ ತಂತ್ರಾಂಶದ ಸಾಧನಗಳನ್ನೇ ಹೆಚ್ಚು ಗುರಿಯಾಗಿಸಿಕೊಂಡಿದ್ದಾರೆ ಎಂಬುದು ಜ್ಯೂನಿಪರ್ ಅಭಿಮತ.

ಆಂಡ್ರಾಯ್ಡ ಆ್ಯಪ್ ಹೆಸರಿನಲ್ಲಿ ದಾಳಿಕೋರರೇ ಸೃಷ್ಟಿಸಿದ 500ಕ್ಕೂ ಅಧಿಕ ನಕಲಿ ಆ್ಯಪ್ಸ್ ಮಾರುಕಟ್ಟೆಯಲ್ಲಿವೆ. ಮಾಲ್‌ವೇರ್‌ಗಳಲ್ಲಿ ಶೇ 73ರಷ್ಟು ಫೇಕ್ ಇನ್‌ಸ್ಟಾಲರ್(ತಂತ್ರಾಂಶ ಅಳವಡಿಕೆ ನಕಲಿ ಉತ್ಪನ್ನ) ಅಥವಾ ಎಸ್‌ಎಂಎಸ್ ಟ್ರೋಜನ್‌ಗಳೇ ಆಗಿವೆ ಎನ್ನುತ್ತದೆ ಅಧ್ಯಯನ ವರದಿ.

ಉಚಿತ ಅಪ್ಲಿಕೇಷನ್ ಅಳವಡಿಕೆಯ ಬಹಳಷ್ಟು ಪ್ರಕರಣಗಳಲ್ಲಿ ಖಾಸಗಿ ಮಾಹಿತಿಗಳೆಲ್ಲಾ ಸೋರಿ ಹೋಗಿರುತ್ತವೆ. ಈ ನಕಲಿ ಅಪ್ಲಿಕೇಷನ್‌ಗೆ ಅವಕಾಶ ಮಾಡಿಕೊಟ್ಟರೆ ಮೊಬೈಲ್ ಫೋನ್ ಬಳಕೆದಾರರ ನೆಲೆ, ವಿಳಾಸ ಮೊದಲಾದ ಖಾಸಗಿ ಮಾಹಿತಿಗಳನ್ನು ದಾಳಿಕೋರರು ಬಳಕೆದಾರರಿಗೇ ಗೊತ್ತಿಲ್ಲದಂತೆ ಸಂಗ್ರಹಿಸುವ ಸಂಭವ ಹೆಚ್ಚೇ ಇದೆ ಎಂಬುದನ್ನು 18.50 ಕೋಟಿ ಮೊಬೈಲ್ ಅಪ್ಲಿಕೇಷನ್‌ಗಳನ್ನು ಪರಿಶೀಲಿಸಿ ಕಂಡುಕೊಳ್ಳಲಾಗಿದೆ ಎಂದಿದ್ದಾರೆ ಜ್ಯೂನಿಪರ್ ನೆಟ್‌ವರ್ಕ್ಸ್ ಉಪಾಧ್ಯಕ್ಷ ಮೈಕೆಲ್ ಕ್ಯಾಲಹ್ಯಾನ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.