ADVERTISEMENT

ಲ್ಯಾಪ್‌ಟಾಪ್‌ನಲ್ಲಿ ತೊಂದರೆಯೇ?

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 19:30 IST
Last Updated 11 ಅಕ್ಟೋಬರ್ 2011, 19:30 IST

ಗೊತ್ತಿದ್ದೋ,   ಗೊತ್ತಿಲ್ಲದೆಯೋ  ಬಳಕೆದಾರರು ಮಾಡುವ ತಪ್ಪಿನಿಂದ ಲ್ಯಾಪ್‌ಟಾಪ್‌ನಲ್ಲಿ ಸಮಸ್ಯೆಗಳು ಎದುರಾಗುತ್ತವೆ. ದುರಸ್ತಿಗೆಂದು ಬರುವ ಲ್ಯಾಪ್‌ಟಾಪ್‌ಗಳಲ್ಲಿ  ಅರ್ಧಕ್ಕರ್ಧ ತಪ್ಪುಗಳು ಬಳಕೆದಾರರಿಂದಲೇ ಆಗಿರುತ್ತವೆ. ಹಾಗಾದರೆ, ಲ್ಯಾಪ್‌ಟಾಪ್ (ನೋಟ್‌ಬುಕ್ ಸಹ) ಬಳಕೆಯಲ್ಲಿನ ಸರಿ-ತಪ್ಪುಗಳು ಯಾವುವು? ಒಂದಷ್ಟು ಸಲಹೆ  ಇಲ್ಲಿವೆ.

ಖರೀದಿ ಮಾಡಿ ವರ್ಷ ಕೂಡ ಆಗಿಲ್ಲ. ಆಗಲೇ ಪ್ರಾಬ್ಲಂ ಸ್ಟಾರ್ಟ್ ಆಗಿದೆ~ ಎಂದು ಗೊಣಗುತ್ತ ತಮ್ಮ ಲ್ಯಾಪ್‌ಟಾಪ್ ಅನ್ನು ಕಂಪೆನಿಯ ಸರ್ವೀಸ್ ಸೆಂಟರ್‌ಗೆ ತರುವವರ ಸಂಖ್ಯೆ ಕಡಿಮೆಯೇನಲ್ಲ.

ಆದರೆ ಲ್ಯಾಪ್‌ಟಾಪ್ ಅಥವಾ ನೋಟ್‌ಬುಕ್‌ನಲ್ಲಿ ಎದುರಾಗುವ ಸಮಸ್ಯೆಗಳಿಗೆ ಬಹುತೇಕ ಸಲ ತಾವೇ ಕಾರಣ ಎಂಬುದು ಅದರ `ಮಾಲೀಕ~ರಿಗೆ ತಿಳಿದಿರುವುದೇ ಇಲ್ಲ!`ಗೊತ್ತಿದ್ದೋ, ಗೊತ್ತಿಲ್ಲದೆಯೋ ಬಳಕೆದಾರರು ಮಾಡುವ ತಪ್ಪಿನಿಂದ ಲ್ಯಾಪ್‌ಟಾಪ್‌ನಲ್ಲಿ ಸಮಸ್ಯೆ ಎದುರಾಗುತ್ತವೆ.
 
ನಮ್ಮ ಕೇಂದ್ರಕ್ಕೆ ದುರಸ್ತಿಗೆಂದು ಬರುವ ಲ್ಯಾಪ್‌ಟಾಪ್‌ಗಳಲ್ಲಿ ಅರ್ಧಕ್ಕರ್ಧ ತಪ್ಪುಗಳು ಬಳಕೆದಾರರಿಂದಲೇ ಆಗಿರುತ್ತವೆ” ಎನ್ನುತ್ತಾರೆ, ತಂತ್ರಜ್ಞ ಡೆರಿಕ್ ಮಿಸ್ಟೆರ್.

ಹಾಗಾದರೆ, ಲ್ಯಾಪ್‌ಟಾಪ್ (ನೋಟ್‌ಬುಕ್ ಸಹ) ಬಳಕೆಯಲ್ಲಿನ ಸರಿ-ತಪ್ಪುಗಳು ಯಾವುವು? ಒಂದಷ್ಟು ಸಲಹೆ ಇಲ್ಲಿವೆ.

ಸಮತಟ್ಟಾದ ನೆಲ
ಲ್ಯಾಪ್‌ಟಾಪ್ ಅನ್ನು ತೊಡೆ ಮೇಲೆ ಇಟ್ಟುಕೊಂಡು ಕೆಲಸ ಮಾಡುವುದು ಶುದ್ಧ ತಪ್ಪು. ನಾಲ್ಕೂ ಮೂಲೆಗಳಲ್ಲಿ ಅಳವಡಿಸಲಾದ ರಬ್ಬರ್ ಗುಂಡಿಗಳ ಆಧಾರದ ಮೇಲೆ ಲ್ಯಾಪ್‌ಟಾಪ್ ನಿಲ್ಲಬೇಕು. ಕೆಳಗಿನ ನೆಲ ಸಮತಟ್ಟಾಗಿ ಇರಲೇಬೇಕು ಎಂದೇನೂ ಇಲ್ಲ; ಟೇಬಲ್ ಅಥವಾ ಪುಸ್ತಕದ ಮೇಲೆ ಇಟ್ಟರೂ ನಡೆದೀತು.

ಮುಖ್ಯವಾಗಿ ಇದರಿಂದ ಲ್ಯಾಪ್‌ಟಾಪ್‌ನಲ್ಲಿನ ಯಂತ್ರದಲ್ಲಿ ಗಾಳಿ ಸುತ್ತುವರಿಯಲು ಅವಕಾಶವಾಗಬೇಕು.

ಇನ್ನು ಮೆತ್ತನೆಯ ವಸ್ತುವಿನ ಮೇಲೆ ಇಡುವುದರಿಂದಲೂ ಲ್ಯಾಪ್‌ಟಾಪ್‌ನಲ್ಲಿನ ಬಿಸಿ ಗಾಳಿ ಹೊರ ಹೋಗಲು ಸಾಧ್ಯವಾಗುವುದಿಲ್ಲ; ಹೊರಗಿನ ಗಾಳಿ ಒಳಬರಲು ಆಗುವುದಿಲ್ಲ. ಇದರಿಂದ ಬಿಸಿ ಹೆಚ್ಚಾಗಿ, ಒಳಗಿರುವ ಪ್ರಮುಖ ಭಾಗಗಳು ಹಾಳಾಗುತ್ತವೆ. ಅಂಕುಡೊಂಕಾದ ಮೇಲ್ಮೈ ಮೇಲೆ ಇಟ್ಟರೂ ಇದೇ ಅವಸ್ಥೆ.

 ಹಾರ್ಡ್‌ಡ್ರೈವ್‌ನತ್ತ ಇರಲಿ ಚಿತ್ತ
ದತ್ತಾಂಶ (ಡೇಟಾ) ಸಂಗ್ರಹಿಸುವ ಹಾರ್ಡ್‌ಡ್ರೈವ್‌ನ ಬಗ್ಗೆ ಕಾಳಜಿ ಅಗತ್ಯ. ಲ್ಯಾಪ್‌ಟಾಪ್ `ಆನ್~ ಆಗಿರುವಂತೆಯೇ ಅದನ್ನು ಹಿಡಿದುಕೊಂಡು ಓಡಾಡಬೇಡಿ.
 
ಏಕೆಂದರೆ ಕೈಗಳ ಅಡ್ಡಾದಿಡ್ಡಿ ಚಲನೆಯು ಹಾರ್ಡ್‌ಡ್ರೈವ್ ಅನ್ನು ಹಾಳು ಮಾಡುವ ಸಾಧ್ಯತೆ ಇದೆ. ಅದರಲ್ಲೂ ಅತಿಸೂಕ್ಷ್ಮ ಭಾಗಗಳು ಅಲುಗಾಟದಿಂದ ಬೇಗನೇ ನಿಷ್ಕ್ರಿಯಗೊಳ್ಳುತ್ತವೆ.

`ಎಷ್ಟೋ ಮಂದಿ ಲ್ಯಾಪ್‌ಟಾಪ್‌ನ ಪರದೆಯನ್ನು ಮುಚ್ಚಿ, ಕವರ್‌ನಲ್ಲಿ ಬೀಸಾಕಿ ಹಾಕಿಬಿಡುತ್ತಾರೆ. ಹಾರ್ಡ್‌ಡ್ರೈವ್ ಸಂಪೂರ್ಣ ಸ್ಥಗಿತಗೊಂಡಿದೆಯೇ? ಇಲ್ಲವೇ? ಎಂಬುದನ್ನು ಗಮನಿಸುವುದಿಲ್ಲ. ಇದು ಲ್ಯಾಪ್‌ಟಾಪ್‌ನ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ~

ಎಂದು ಮೈಕ್ರೊ ಸೆಂಟರ್‌ನ ತಂತ್ರಜ್ಞಾನ ಸೇವಾ ವಿಭಾಗದ ನಿರ್ದೇಶಕ ಕ್ರಿಸ್ ಕ್ರಾಮೆರ್ ಹೇಳುತ್ತಾರೆ. ಲ್ಯಾಪ್‌ಟಾಪ್‌ನ ಮೇಲ್ಭಾಗದ ಪರದೆಯನ್ನು ಮುಚ್ಚುವ ಮುನ್ನ ಕರಾರುವಾಕ್ಕಾಗಿ `ಸ್ಲೀಪ್~ ಅಥವಾ `ಹೈಬರ್‌ನೆಟ್~ ಆಗಿರುವಂತೆ ನೋಡಿಕೊಳ್ಳಬೇಕು.ಆಗ ಹಾರ್ಡ್‌ಡ್ರೈವ್ ಸಂಪೂರ್ಣ ಸ್ತಬ್ಧಗೊಳ್ಳುತ್ತದೆ. ಅದಾದ ಬಳಿಕವೇ ಲ್ಯಾಪ್‌ಟಾಪ್ ಮುಚ್ಚಬೇಕು ಎಂಬುದು ಅವರ ಸಲಹೆ.

ಇನ್ನೊಂದು ಕಿವಿಮಾತು ಎಂದರೆ, ಹಾರ್ಡ್‌ಡ್ರೈವ್ ಸ್ತಬ್ಧಗೊಂಡ ಶಬ್ದ ಆಲಿಸಿದ ಬಳಿಕ ಅಥವಾ ಮಿನುಗುವ ಕಿರುದೀಪ ಆರಿದ ಬಳಿಕ ಲ್ಯಾಪ್‌ಟಾಪ್ ಮುಚ್ಚಿದರೆ ಇನ್ನೂ ಒಳ್ಳೆಯದು.

ಸತತ ಪ್ಲಗ್ ಸಲ್ಲದು
ಬಳಸಲಿ; ಬಿಡಲಿ. ಕೆಲವರು ಯಾವಾಗಲೂ ಲ್ಯಾಪ್‌ಟಾಪ್ ಅನ್ನು ಪ್ಲಗ್‌ಗೆ ಜೋಡಿಸಿರುತ್ತಾರೆ. ಬ್ಯಾಟರಿಗಳು ಸ್ನಾಯುಗಳಿದ್ದಂತೆ.

ಒಂದು ವೇಳೆ ವ್ಯಾಯಾಮ ಮಾಡದೇ ಹೋದರೆ ಸ್ನಾಯುಗಳು ದುರ್ಬಲವಾಗುವಂತೆ, ಬ್ಯಾಟರಿಗೆ ಕೆಲಸ ಕೊಡದೇ ಹೋದರೆ ಅವು ದುರ್ಬಲಗೊಳ್ಳುತ್ತವೆ.

ಆಗಾಗ್ಗೆ ಬರೀ ಬ್ಯಾಟರಿಯಿಂದಲೇ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.ಆದರೆ ಹಾಗೆಂದು, ಬ್ಯಾಟರಿ ಸಾಮರ್ಥ್ಯ ಸಂಪೂರ್ಣ ಕಡಿಮೆಯಾದ ಮೇಲೆ ದಿನಗಟ್ಟಲೇ ಚಾರ್ಜ್ ಮಾಡದೇ ಇರುವುದು ಸಹ ತರವಲ್ಲ.

ಇದರಿಂದ ಬ್ಯಾಟರಿಯೊಳಗಿನ ರಾಸಾಯನಿಕ ಪದಾರ್ಥಗಳ ಕಾರ್ಯಕ್ಷಮತೆ ಕುಂದುತ್ತದೆ. `ಕಾಲಕಾಲಕ್ಕೆ ಬ್ಯಾಟರಿಗಳ ಸರಿಯಾದ ಬಳಕೆ, ಅಧಿಕ ಉಷ್ಣತೆಗೆ ಸಿಲುಕದಂತೆ ನೋಡಿಕೊಳ್ಳುವುದೂ ಸೇರಿದಂತೆ ಹಲವು ಮುನ್ನೆಚ್ಚರಿಕೆ ವಹಿಸಿದರೆ ಬ್ಯಾಟರಿಗಳು ಅಧಿಕ ದಿನ ಬಾಳಿಕೆ ಬರುತ್ತವೆ~ ಎನ್ನುವುದು ತಜ್ಞರ ಸಲಹೆ.

ಲ್ಯಾಪ್‌ಟಾಪ್‌ಗೆ ವಿದ್ಯುತ್ ಹರಿಯುತ್ತಿರುವಾಗ ಆ ತಂತಿ (ಪವರ್ ಕಾರ್ಡ್) ತೀರಾ ಬಿಗುವಾಗಿ ಇರದಂತೆ ಗಮನಿಸಬೇಕು. ಬ್ಯಾಟರಿ  ರಿಚಾರ್ಜ್ ಆದ ಬಳಿಕ ಅಥವಾ ಲ್ಯಾಪ್‌ಟಾಪ್ ಅನ್ನು ಬೇರೆಡೆ ತೆಗೆದೊಯ್ಯುವಾಗ ಪವರ್ ಕಾರ್ಡ್‌ನ ಪಿನ್ ಅನ್ನು ನಿಧಾನವಾಗಿ ತೆಗೆಯಬೇಕು.

ತುಸು ಜೋರಾಗಿ ಎಳೆದರೂ ಒಳಗಿನ ಲೋಹದ ಕಡ್ಡಿಗಳು ಹಾನಿಗೀಡಾಗುವ ಸಾಧ್ಯತೆ ಇರುತ್ತದೆ. “ಚಾರ್ಜ್ ಆಗುತ್ತಿಲ್ಲ ಎಂದು ಲ್ಯಾಪ್‌ಟಾಪ್ ತರುವ ಗ್ರಾಹಕರ ಸಂಖ್ಯೆಯಲ್ಲಿ ಅರ್ಧಕ್ಕರ್ಧ ಇದೇ ತೊಂದರೆ.

ದೂಳು ದೂಳು...
ಲ್ಯಾಪ್‌ಟಾಪ್ ಸಮಸ್ಯೆಗೆ ಇದಂತೂ ಪ್ರಮುಖ ಕಾರಣ. ಈಗೀಗ ಲ್ಯಾಪ್‌ಟಾಪ್, ನೋಟ್‌ಬುಕ್ ಅಥವಾ ಕಂಪ್ಯೂಟರ್‌ಗಳನ್ನು ಎಲ್ಲೆಂದರಲ್ಲಿ ಇಡಲಾಗುತ್ತದೆ.
 
ರಂಧ್ರದ ಒಳಗಿನಿಂದ ದೂಳು ಸೇರಿಕೊಂಡು ಮಹತ್ವದ ಭಾಗಗಳ ಮೇಲೆ ಸಂಗ್ರಹವಾಗುತ್ತದೆ. ಕನಿಷ್ಠ ಪ್ರತಿ ಆರು ತಿಂಗಳಿಗೊಮ್ಮೆ ನಿಮ್ಮ ಕಂಪ್ಯೂಟರ್ ಅನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.

ಇದನ್ನು ಹೊರಗಿನ ಕವರ್ ತೆಗೆದು, ಕಿರು ವಾಕ್ಯೂಮ್ ಕ್ಲೀನರ್ ಮೂಲಕ ಮಾಡಬಹುದು. ಲೋಹದ ಭಾಗಗಳನ್ನು ಹತ್ತಿಯಿಂದ ನಿಧಾನವಾಗಿ ಒರೆಸಿದರೂ ಸಾಕು.

ಸಾಫ್ಟ್‌ವೇರ್‌ನಿಂದ ಒಂದಷ್ಟು...
ಸಾಫ್ಟ್‌ವೇರ್‌ನಿಂದಲೂ ಬಳಕೆದಾರರು ಸಮಸ್ಯೆ ಎದುರಿಸುವುದು ಸಾಮಾನ್ಯ. ಬೇಕೆನಿಸುವ ಸಾಫ್ಟ್‌ವೇರ್‌ಗಳನ್ನು ಸಿಕ್ಕ ಸಿಕ್ಕ ವೆಬ್‌ಸೈಟ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಹೆಚ್ಚಿನ ತಾಪತ್ರಯ ಸೃಷ್ಟಿಯಾಗುತ್ತದೆ.

ಈಗಾಗಲೇ ನಿಮ್ಮ ಕಂಪ್ಯೂಟರ್‌ನಲ್ಲಿ ಒಂದು ಆ್ಯಂಟಿ ವೈರಸ್ ತಂತ್ರಾಂಶ ಇದ್ದಾಗ, ಇನ್ನೊಂದನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಸರಿಯಲ್ಲ. ಅದು ಉಚಿತವಾಗಿ ಸಿಗುವಂಥದಾಗಿದ್ದರೂ ಎರಡೆರಡು ಸಲ ಯೋಚಿಸಬೇಕು ಎಂದು ತಂತ್ರಜ್ಞರು ಸಲಹೆ ಮಾಡುತ್ತಾರೆ.

ಅಂದರೆ, ಒಂದೇ ಯಂತ್ರದಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡುವಂಥ ಗೊಂದಲ ನಿಮ್ಮ ಲ್ಯಾಪ್‌ಟಾಪ್‌ನಲ್ಲಿ ಆಗುತ್ತದೆ.

ಇದರಿಂದಾಗುವ ಪರಿಣಾಮವೆಂದರೆ, ಲ್ಯಾಪ್‌ಟಾಪ್ ಕೆಲಸ ಮಾಡುವ ವೇಗ ಕ್ರಮೇಣ ಕಡಿಮೆಯಾಗಿ, ಒಮ್ಮಮ್ಮೆ ಕೆಲಸವನ್ನು ಸ್ಥಗಿತಗೊಳಿಸಿಬಿಡುತ್ತದೆ ಎಂದು ತಂತ್ರಾಂಶ ಸಲಹೆಗಾರ, ಮೈಕ್ರೊ ಸೆಂಟರ್‌ನ ಕ್ರಾಮೆರ್ ಹೇಳುತ್ತಾರೆ.

ಎಲ್ಲಕ್ಕಿಂತ ಮುಖ್ಯ ಎಂದರೆ- ಕೆಲವೊಮ್ಮ ಲ್ಯಾಪ್‌ಟಾಪ್ ತನ್ನಿಂತಾನೇ `ರಿಸ್ಟಾರ್ಟ್~ ಆಗುತ್ತದೆ. ಅಂದರೆ ನಿಮಗೆ ಗೊತ್ತಿಲ್ಲದ ನಿಗೂಢ ತೊಂದರೆಗಳನ್ನು ಕೆಲವು ಸಲ ತಾನೇ ಸರಿಪಡಿಸಿಕೊಳ್ಳುವ ತಂತ್ರ ಇದು! ಇದು ಪದೇ ಪದೇ ಆಗುತ್ತಿದ್ದರೆ, ತನ್ನನ್ನು ತಂತ್ರಜ್ಞರ ಬಳಿಗೆ ಒಯ್ಯಲೇಬೇಕಾದ ಸ್ಥಿತಿ ಬರಲಿದೆ ಎಂಬುದನ್ನು ಅದು ಸೂಚಿಸುತ್ತಿದೆ ಎಂದೇ ಅರ್ಥ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.