ADVERTISEMENT

ಹ್ಯಾಕರ್‌ಗಳಿಗೆ ಸುಲಭದ ತುತ್ತಾದ ಅಪ್ಲಿಕೇಷನ್‌ಗಳು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 19:30 IST
Last Updated 28 ನವೆಂಬರ್ 2017, 19:30 IST
ಹ್ಯಾಕರ್‌ಗಳಿಗೆ ಸುಲಭದ ತುತ್ತಾದ ಅಪ್ಲಿಕೇಷನ್‌ಗಳು
ಹ್ಯಾಕರ್‌ಗಳಿಗೆ ಸುಲಭದ ತುತ್ತಾದ ಅಪ್ಲಿಕೇಷನ್‌ಗಳು   

ಆಂಡ್ರಾಯ್ಡ್ ಮತ್ತು ಐಒಎಸ್‌ನ ಸುಮಾರು 685 ಅಪ್ಲಿಕೇಷನ್‌ಗಳು ಹ್ಯಾಕರ್‌ಗಳ ಪಾಲಿಗೆ ಸುಲಭದ ತುತ್ತಾಗಿವೆ ಎಂದು ಸೈಬರ್ ಸುರಕ್ಷತಾ ಸಂಸ್ಥೆ ಆಯಪ್ ಥಾರಿಟಿ ವರದಿ ನೀಡಿದೆ. ವಿಶ್ವದಾದ್ಯಂತ ಅಪ್ಲಿಕೇಷನ್ಸ್‌ಗಳನ್ನು ಬಳಸುತ್ತಿರುವ ಸುಮಾರು 18 ಕೋಟಿ ಜನರ ಕರೆ ಮತ್ತು ಟೆಕ್ಸ್ಟ್‌ ಮೆಸೇಜ್ ವಿವರಗಳನ್ನು ಹ್ಯಾಕರ್‌ಗಳು ನೀರು ಕುಡಿದಷ್ಟು ಸಲೀಸಾಗಿ ಕದಿಯಬಹುದು. ಈ ಅಪ್ಲಿಕೇಷನ್‌ಗಳನ್ನು ಪ್ರೋಗ್ರಾಂ ಮಾಡುವಾಗ ರಹಸ್ಯ ಸಂಖ್ಯೆಗಳ ಸಂಯೋಜನೆಯಲ್ಲಿ ಆದ ಸಣ್ಣ ಲೋಪವೇ ಇದಕ್ಕೆಲ್ಲಾ ಕಾರಣ ಎಂದು ಸಂಸ್ಥೆ ಹೇಳಿದೆ.

ಟ್ವಿಲಿಯೊ ಇಂಕ್ ಮತ್ತು ಟೆಲೆನಾವ್ ಇಂಕ್ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಅಪ್ಲಿಕೇಷನ್‌ಗಳಲ್ಲಿ ಈ ಲೋಪ ಕಂಡುಬಂದಿದೆ. ಜಿಪಿಎಸ್ ಆಧರಿಸಿ ಕೆಲಸ ಮಾಡುವ ಸುಮಾರು 12 ಪಥದರ್ಶಕ (ನ್ಯಾವಿಗೇಟರ್) ಅಪ್ಲಿಕೇಷನ್‌ಗಳನ್ನು ಈ ಕಂಪೆನಿಗಳು ಅಭಿವೃದ್ಧಿಪಡಿಸಿವೆ. ಅವೆಲ್ಲವುಗಳ ಕ್ರೆಡೆನ್ಷಿಯಲ್ ಕೋಡ್‌ಗಳನ್ನು ಹ್ಯಾಕರ್‌ಗಳು ಪರಿಷ್ಕರಿಸಲು ಅವಕಾಶವಿದೆ. ಪರಿಷ್ಕೃತ ಕೋಡ್ ಬಳಸಿ ಹ್ಯಾಕರ್‌ಗಳು ಬಳಕೆದಾರರ ದತ್ತಾಂಶಗಳಿಗೆ ಕನ್ನ ಹಾಕಬಹುದು ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ಈ ಅಪ್ಲಿಕೇಷನ್‌ಗಳನ್ನು ಬಳಸುತ್ತಿರುವ ಆಂಡ್ರಾಯ್ಡ್ ಬಳಕೆದಾರರ ಸಂಖ್ಯೆ (18 ಕೋಟಿ) ಮಾತ್ರ ಪತ್ತೆಯಾಗಿದೆ. ಆದರೆ, ಆ್ಯಪಲ್ ಐಒಎಸ್ ಬಳಕೆದಾರರ ಸಂಖ್ಯೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ADVERTISEMENT

ಈಗ ಪತ್ತೆಯಾಗಿರುವ ದೋಷಪೂರಿತ ಅಪ್ಲಿಕೇಷನ್‌ಗಳಲ್ಲಿ ಟ್ವಿಲಿಯೊ ಇಂಕ್ ನ ಅಪ್ಲಿಕೇಷನ್‌ಗಳ ಪ್ರಮಾಣ ಶೇ 7ರಷ್ಟು. ಇವುಗಳಲ್ಲಿ ಹಲವು ಅಪ್ಲಿಕೇಷನ್‌ಗಳು ಎಸ್ಎಂಎಸ್ ಸೇವೆ, ಕರೆ ನಿರ್ವಹಣೆ ಮತ್ತು ಇತರ ಸೇವೆಗಳನ್ನು ಒದಗಿಸುತ್ತವೆ. ಹ್ಯಾಕರ್‌ಗಳು ಟ್ವಿಲಿಯೊ ಅವರ ಖಾತೆಗೆ ಲಾಗಿನ್ ಆಗಲು ಸಫಲರಾದರೆ ಈ ಅಪ್ಲಿಕೇಷನ್‌ಗಳ ಎಲ್ಲಾ ಬಳಕೆದಾರರ ದತ್ತಾಂಶಗಳು ಅವರಿಗೆ ಸಿಗಲಿವೆ. ಆದರೆ, ಈ ಅಪ್ಲಿಕೇಷನ್‌ಗಳು ಯಾವುವು ಎಂಬುದರ ಬಗ್ಗೆ ಆಯಪ್ ಥಾರಿಟಿ ಮಾಹಿತಿ ನೀಡಿಲ್ಲ.

‘ಉಬರ್ ಮತ್ತು ನೆಟ್‌ಫ್ಲಿಕ್ಸ್ ತನ್ನ ಗ್ರಾಹಕರು ಎಂದು ಟ್ವಿಇಯೊ ತನ್ನ ಅಧಿಕೃತ ಜಾಲತಾಣದಲ್ಲಿ ಹೇಳಿಕೊಂಡಿದೆ. ವಿಶ್ವದಾದ್ಯಂತ 40,000 ವ್ಯವಹಾರಿಕ ಸೇವೆಗಳನ್ನು ನಾವು ಒದಗಿಸುತ್ತಿದ್ದೇವೆ ಎಂಬ ಮಾಹಿತಿ ಟ್ವಿಲಿಯೊ ಜಾಲತಾಣದಲ್ಲಿದೆ.

ಒಂದು ಅಪ್ಲಿಕೇಷನ್  ಕೋಡ್ ಅನ್ನು ದೋಷಪೂರಿತವಾಗಿ ವಿನ್ಯಾಸ ಮಾಡಿದ್ದಲ್ಲಿ, ಟ್ವಿಲಿಯೊದ ಎಲ್ಲಾ ಅಪ್ಲಿಕೇಷನ್‌ಗಳಲ್ಲೂ ಆ ಸಮಸ್ಯೆ ಇರುವ ಸಾಧ್ಯತೆ ಹೆಚ್ಚು. ಉಬರ್ ಮತ್ತು ನೆಟ್‌ಫ್ಲಿಕ್ಸ್ ನಂತಹ ದೈತ್ಯ ಕಂಪೆನಿಗಳು ತಮ್ಮದೇ ಆದ ಸೈಬರ್ ಸುರಕ್ಷಾ ವ್ಯವಸ್ಥೆಯನ್ನು ಹೊಂದಿರುತ್ತವೆ. ಆದರೆ ಸಣ್ಣ-ಪುಟ್ಟ ಸಂಸ್ಥೆಗಳಲ್ಲಿ ಅಂತಹ ಸುರಕ್ಷಾ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಸಣ್ಣ ಸಂಸ್ಥೆಗಳ ಅಪ್ಲಿಕೇಷನ್‌ಗಳ ಬಳಕೆದಾರರು ಬೆಲೆ ತೆರಬೇಕಾದ ಅಪಾಯವಿರುತ್ತದೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

‘ಅಮೆಜಾನ್‌ನ ಹಲವು ಅಪ್ಲಿಕೇಷನ್‌ಗಳಲ್ಲೂ ಇಂತಹದ್ದೇ ದೋಷವಿತ್ತು. ಈ ಬಗ್ಗೆ ಅದಕ್ಕೆ ಮಾಹಿತಿ ನೀಡಲಾಗಿತ್ತು’ ಎಂದೂ ಆಪ್‌ಥಾರಿಟಿ ಹೇಳಿದೆ. ಆದರೆಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅಮೆಜಾನ್‌ ನಿರಾಕರಿಸಿದೆ.

ವ್ಯವಹಾರಿಕ ಸೇವಾ ಸಂಸ್ಥೆಯೊಂದು ಬೇರೆ ಕಂಪೆನಿಗೆ (ಥರ್ಡ್ ಪಾರ್ಟಿ) ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಹೇಳಿದಾಗಲೆಲ್ಲಾ ಇಂತಹ ಲೋಪಗಳು ಸಂಭವಿಸಿವೆ.

ಟ್ವಿಲಿಯೊ ಅವರ ‘ಎಟಿ ಅಂಡ್ ಟಿ ನ್ಯಾವಿಗೇಟರ್’ನ ಹಳೆಯ ವೃತ್ತಿಯಲ್ಲಿ ಇಂತಹ ದೋಷವಿದೆ. ಮೂಲತಃ ಇದನ್ನು ಅಭಿವೃದ್ಧಿಪಡಿಸಿದ್ದು ಟೆಲೆನಾವ್. ನಂತರ ಅದನ್ನು ಟ್ವಿಲಿಯೊ ಖರೀದಿಸಿತ್ತು. ಟ್ವಿಲಿಯೊ ಅಭಿವೃದ್ಧಿಪಡಿಸಿರುವ ಹೊಸ ಆವೃತ್ತಿಯ ಅಪ್ಲಿಕೇಷನ್‌ನಲ್ಲಿ ಈ ಸಮಸ್ಯೆ ಇಲ್ಲ’ ಎಂದು ವರದಿ ವಿವರಿಸಿದೆ. ವರದಿ ಪ್ರಕಟವಾಗುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ಟ್ವಿಲಿಯೊ ಇಂಕ್ ನಷೇರುಗಳ ಮೌಲ್ಯ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.