ADVERTISEMENT

ಐಫೋನ್‌ ಪರದೆ ಹಿಗ್ಗುತ್ತಿದೆ ದೊಡ್ಡ ಜೇಬು ಹೊಲಿಸಿಕೊಳ್ಳಿ..!

ಎಕ್ಸ್‌ಆರ್‌, ಎಕ್ಸ್‌ಎಸ್‌ ಮತ್ತು ಎಕ್ಸ್‌ಎಸ್‌ ಮ್ಯಾಕ್ಸ್‌ ಮಾದರಿಗಳು ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:45 IST
Last Updated 2 ಅಕ್ಟೋಬರ್ 2018, 19:45 IST
   

ಇತ್ತೀಚಿನ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಸ್ಪರ್ಶ ಪರದೆ ಗಾತ್ರ ಹಿಗ್ಗುತ್ತಿರುವುದನ್ನು (screen size) ಕಾಣಬಹುದು. ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳು ಈ ದೃಶ್ಯ ಪರದೆಯ ಅನಂತ ಸಾಧ್ಯತೆಗಳನ್ನು ಅಷ್ಟೇ ಪರಿಣಾಮಕಾರಿ ಬಳಸಿಕೊಳ್ಳಲು ಪ್ರಯತ್ನಿಸಿವೆ. ಅದರ ಭಾಗವಾಗಿ ಹೊಸ ಮಾದರಿಗಳಲ್ಲಿ ಪರದೆ ಗಾತ್ರ ಹೆಚ್ಚುತ್ತಿದೆ. ಸ್ಪರ್ಶ ಪರದೆಗೆ ಬಳಸುವ ಗಾಜಿನ ಗುಣಮಟ್ಟದಲ್ಲಿಯೂ ಭಾರಿ ಬದಲಾವಣೆಗಳಾಗಿವೆ. ಕೆಳಗೆ ಬಿದ್ದರೆ ಒಡೆಯದ, ಗೀರು ಬೀಳದ, ಧೂಳು ಮತ್ತು ಜಲ ನಿರೋಧಕ ತಂತ್ರಜ್ಞಾನದ ಗಾಜುಗಳು ಅಭಿವೃದ್ಧಿಯಾಗಿವೆ. ಅಷ್ಟೇ ಅಲ್ಲ, ಈ ಗಾಜುಗಳು ಸ್ಮಾರ್ಟ್‌ಫೋನ್‌ ಪರದೆಯ ನಾಲ್ಕೂ ಅಂಚುಗಳನ್ನೂ ಆವರಿಸಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಒಂದು ಕೂದಲ ಎಳೆಯಷ್ಟು ಪರದೆ ಗಾತ್ರ ಹಿಗ್ಗಿಸುವ ಅವಕಾಶ ಇದ್ದರೆ, ಅದನ್ನೂ ಬಳಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿಗಳು ಆದ್ಯತೆ ನೀಡುತ್ತಿವೆ.

ಬೆಳೆಯುತ್ತಿರುವ ಅಪ್ಲಿಕೇಷನ್‌ ಮಾರುಕಟ್ಟೆಯೇ ಇದಕ್ಕೆ ಮುಖ್ಯ ಕಾರಣ. ಪ್ರತಿಯೊಂದು ಅಪ್ಲಿಕೇಷನ್‌ನ ವಿನ್ಯಾಸ ಭಿನ್ನ. ಅಪ್ಲಿಕೇಷನ್‌ ತೆರೆಯುತ್ತಿದ್ದಂತೆ ಅದು ಮೊಬೈಲ್‌ ಪರದೆಯಲ್ಲಿ ಹೇಗೆ ಕಾಣಿಸುತ್ತದೆ ಎನ್ನುವುದು ಮುಖ್ಯ. ಯಾವುದೇ ಅಪ್ಲಿಕೇಷನ್‌ ಆದರೂ, ಅದನ್ನು ಗ್ರಾಹಕ ಯಾವುದೇ ಕಿರಿಕಿರಿ ಇಲ್ಲದೆ, (ಪರದೆ ಹಿಗ್ಗಿಸದೆ, ಕುಗ್ಗಿಸದೆ) ಸರಳವಾಗಿ, ಸ್ಪಷ್ಟವಾಗಿ ನೋಡಲಿ ಎನ್ನುವುದು, ಫೋನ್‌ ಗಾತ್ರ ಹೆಚ್ಚುತ್ತಿರುವುದರ ಹಿಂದಿನ ಪ್ರಮುಖ ಉದ್ದೇಶವಾಗಿದೆ.

ಆ್ಯಪಲ್‌ ಕಂಪನಿ ಕಳೆದ ವಾರ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಐಫೋನ್‌ ಎಕ್ಸ್‌ಎಸ್‌ ಮತ್ತು ಎಕ್ಸ್‌ಎಸ್‌ ಮ್ಯಾಕ್ಸ್‌ ಸರಣಿಯ ಈ ಫೋನ್‌ಗಳ ಸ್ಪರ್ಶಪರದೆ ಗಾತ್ರ ಕ್ರಮವಾಗಿ 5.8 ಮತ್ತು 6.5 ಇಂಚಿನಷ್ಟಿದೆ. ಇದೇ ಕಂಪನಿ ಎರಡು ವರ್ಷಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆಮಾಡಿದ್ದ ಪೋನ್‌ನ ಪರದೆ ಗಾತ್ರ ಕ್ರಮವಾಗಿ 4.7 ಮತ್ತು 5.5 ಇಂಚು ಇತ್ತು. ಹಾಗೆ ನೋಡಿದರೆ, 6.5 ಇಂಚಿನಷ್ಟು ದೊಡ್ಡದಾದ ಪರದೆ ಹೊಂದಿರುವ ಐಫೋನ್‌ ಎಕ್ಸ್‌ ಮ್ಯಾಕ್ಸ್‌, ಇದುವರೆಗೆ ಆ್ಯಪಲ್‌ ಹೊರತಂದಿರುವ ಫೋನ್‌ಗಳಲ್ಲೇ ದೊಡ್ಡ ಗಾತ್ರದ್ದು. 2007ರಲ್ಲಿ ಬಿಡುಗಡೆಯಾದ ಮೊತ್ತ ಮೊದಲ ಐಫೋನ್‌ನ ಪರದೆ ಗಾತ್ರ ಇದ್ದದ್ದು 3.5 ಇಂಚು ಇತ್ತು ಎನ್ನುವುದು ಗಮನೀಯ ಅಂಶ.

ADVERTISEMENT

ಪರದೆಯ ಗಾತ್ರ ಹಿಗ್ಗುತ್ತಿರುವುದು ಗ್ರಾಹಕರ ಪಾಲಿಗೆ ಖುಷಿ ಕೊಡುವ ವಿಷಯವಾದರೂ, ಇದರಿಂದ ಸ್ವಲ್ಪ ಕಿರಿಕಿರಿಯೂ ಇದೆ. ಈ ಫೋನ್‌ಗಳು ಸದಾ ಸಮಯ ಗ್ರಾಹಕರ ಕೈಯಲ್ಲಿ ಅಥವಾ ಜೇಬಿನಲ್ಲಿ ಇರುತ್ತವೆ. ದೊಡ್ಡ ಫೋನ್‌ಗಳನ್ನು ಕೈಯಲ್ಲಿ ಹಿಡಿದುಕೊಳ್ಳುವುದೂ ಕಷ್ಟ. ಜೇಬಿನಲ್ಲಿ ಇಡೋಣವೆಂದರೆ, ಅದಕ್ಕೆ ತಕ್ಕಂತೆ ಜೇಬಿನ ಗಾತ್ರ ಇರುವುದಿಲ್ಲ. ಫೋನಿನ ಗಾತ್ರಕ್ಕೆ ತಕ್ಕಂತೆ ಜೇಬು ಹೊಲಿಸಿಕೊಳ್ಳಬೇಕೆಂದರೆ, ಹೊಸ ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾದಾಗೆಲ್ಲ ಇದೇ ಕೆಲಸ ಮಾಡಬೇಕಾಗುತ್ತದೆ. ಈ ಗಾತ್ರದ ಸಮಸ್ಯೆಯಿಂದಲೇ ಅನೇಕರು, ತಾವು ಇಷ್ಟಪಟ್ಟ ಮಾದರಿಯ, ಸುಧಾರಿತ ಆವೃತ್ತಿಯ ಪ್ಲಸ್‌ ಫೋನ್‌ಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆ್ಯಪಲ್‌ 2014ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ 5.5 ಇಂಚು ಪರದೆ ಐಫೋನ್‌ ಮಾರುಕಟ್ಟೆಯಲ್ಲಿ ಹಿಂದೆ ಬೀಳಲು ಇದೇ ಪ್ರಮುಖ ಕಾರಣವಾಯಿತು. ಈಗ ಐಫೋನ್‌ ಎಕ್ಸ್‌ಎಸ್‌ ಮತ್ತು ಮ್ಯಾಕ್ಸ್‌ ಸರಣಿ. ಇದರ ಗಾತ್ರದ ಜತೆಗೆ ಗ್ರಾಹಕರು ಹೇಗೆ ರಾಜಿಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ದೊಡ್ಡ ಪರದೆ ಇಷ್ಟಪಡುವವರಿಗೆ ಎಕ್ಸ್‌ಎಸ್‌ ಮ್ಯಾಕ್ಸ್‌
ಎಕ್ಸ್‌ಎಸ್‌ ಮತ್ತು ಎಕ್ಸ್‌ಎಸ್‌ ಮ್ಯಾಕ್ಸ್‌ ಮಾದರಿಯಲ್ಲಿ ಡ್ಯುಯಲ್‌ ಲೆನ್ಸ್‌ ಕ್ಯಾಮೆರಾ ಇದೆ. ಎಕ್ಸ್‌ಆರ್‌ ಮಾದರಿಯಲ್ಲಿ ಸಿಂಗಲ್‌ ಲೆನ್ಸ್‌ ಕ್ಯಾಮೆರಾ ಇದೆ. ಈ ಮೂರು ಮಾದರಿಯಲ್ಲಿ ‘ಫೇಸ್‌ಐಡಿ’ ಅಂದರೆ ಮುಖವನ್ನು ಗುರುತಿಸಿ ಫೋನ್‌ ತೆರೆಯುವ ತಂತ್ರಜ್ಞಾನ ಬಳಸಲಾಗಿದೆ. ಎಕ್ಸ್‌ ಮ್ಯಾಕ್ಸ್‌ ಗಾತ್ರ ದೊಡ್ಡದಿದ್ದರೂ,ಇದನ್ನು ಸುಲಭವಾಗಿ ಕೈಯಲ್ಲಿ ಹಿಡಿದು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಅಂದರೆ ಈ ಫೋನ್‌ನ ದೇಹದ ಗಾತ್ರ 6.2 ಇಂಚು ಅಗಲ ಮತ್ತು 3.05 ಇಂಚಿನಷ್ಟು ದಪ್ಪ ಇದ್ದು, ಹಳೆಯ ಮಾದರಿಗಳಿಗೆ ಹೋಲಿಸಿದರೆ ತುಂಬಾ ಹಗುರವಾಗಿದೆ. ಅಂದರೆ ಇದನ್ನು ಒಂದೇ ಕೈಯಲ್ಲಿ ಹಿಡಿದುಕೊಂಡು, ಸಂದೇಶಗಳನ್ನು ಸರಳವಾಗಿ ಟೈಪ್ ಮಾಡಬಹುದು.

ಐಫೋನ್‌ 8 ಪ್ಲಸ್‌ ಮಾದರಿಯಲ್ಲಿ ಬಳಕೆದಾರ, ಹೆಬ್ಬೆರಳಿನ ಮೂಲಕ ಶಿಫ್ಟ್‌ ಕೀ ಅಥವಾ ಬ್ಯಾಕ್‌ಸ್ಪೇಸ್‌ ಕೀ ಒತ್ತಲು ಸ್ವಲ್ಪ ಹೆಣಗಬೇಕಿತ್ತು. ಇದರಲ್ಲಿ ಆ ಸಮಸ್ಯೆ ಇಲ್ಲ. ವಾಹನ ಚಲಾಯಿಸುವಾಗ ರೂಟ್‌ ಮ್ಯಾಪ್‌ ನೋಡಲು ಮತ್ತು ಪ್ರಯಾಣದ ನಡುವೆ ಇಮೇಲ್‌ಗಳನ್ನು ಕಳುಹಿಸಲು, ಸಂದೇಶಗಳನ್ನು ಓದಲು, ಪಾಕ ವಿಧಾನಗಳನ್ನು ಓದಲು, ನೋಡಲು ಈ ದೊಡ್ಡ ಪರದೆ ಅನುಕೂಲಕ್ಕೆ ಬರುತ್ತದೆ. ಲ್ಯಾಪ್‌ಟಾಪ್‌ನಲ್ಲಿ ಮಾಡುತ್ತಿದ್ದ ಹಲವು ಕೆಲಸಗಳನ್ನು ಈ ಫೋನ್‌ಗೆ ವರ್ಗಾಯಿಸಿಕೊಂಡು, ಇಲ್ಲಿ ಸರಳವಾಗಿ ಮಾಡಬಹುದು.

ಜೇಬಿನಲ್ಲಿ ಇಟ್ಟುಕೊಳ್ಳಲು ಎಕ್ಸ್‌ಎಸ್‌
ಎಕ್ಸ್‌ಎಸ್‌ ಮಾದರಿಯಲ್ಲಿ ಕ್ಯಾಮೆರಾ ಬಳಕೆ ಸರಳವಾಗಿದೆ. ಇದನ್ನು ಜೇಬಿನಲ್ಲಿ ಇಟ್ಟುಕೊಳ್ಳಬಹುದು. ಹೊರತೆಗೆಯಲು ಕಷ್ಟಪಡಬೇಕಾಗಿಲ್ಲ. ಇದರಲ್ಲಿ ಆ್ಯಪಲ್‌ನ ‘ಸ್ಕ್ರೀನ್‌ ಟೈಮ್‌’ ತಂತ್ರಜ್ಞಾನ ಬಳಸಲಾಗಿದೆ. ಅಂದರೆ ಬಳಕೆದಾರ ಪ್ರತಿ ದಿನ ಸರಾಸರಿ ಎಷ್ಟು ಹೊತ್ತು ಫೋನ್‌ ಬಳಸಿದ್ದಾನೆ ಎನ್ನುವುದು ತಿಳಿಯುತ್ತದೆ. ಈ ಎರಡೂ ಫೋನ್‌ನಲ್ಲಿ ಹೋಮ್‌ ಬಟನ್‌ ಆಯ್ಕೆ ಇಲ್ಲ. ಐಫೋನ್‌ ಬಳಕೆದಾರರಿಗೆ ಇದು ಹೊಸ ವಿಷಯವಲ್ಲ. ಹೀಗಾಗಿ ಇದು ದೊಡ್ಡ ಸಮಸ್ಯೆಯಾಗದು. ಮೊದಲ ಬಾರಿ ಐಫೋನ್‌ ಖರೀದಿಸುತ್ತಿರುವವರು ಎಕ್ಸ್‌ಆರ್‌ ಮಾದರಿ ಖರೀದಿಸಬಹುದು. ಜೇಬಿನಲ್ಲಿ ಇಟ್ಟುಕೊಳ್ಳುವ ಐಫೋನ್‌ ಬೇಕು ಎಂದರೆ ಎಕ್ಸ್‌ಎಸ್‌ ಆಯ್ದುಕೊಳ್ಳಿ. ಸ್ಮಾರ್ಟ್‌ಫೋನ್‌ ಅನ್ನೇ ಕಂಪ್ಯೂಟರ್‌ ಆಗಿ ಬಳಸುವ ಉದ್ದೇಶ ಇದ್ದರೆ ಎಕ್ಸ್‌ಎಸ್‌ ಮ್ಯಾಕ್ಸ್‌ ಖರೀದಿಸಿ.

ಗಾತ್ರ, ದರದ ವಿಷಯದಲ್ಲೂ ಜೇಬಿಗೆ ಹೊರೆ..!
ಐಫೋನ್‌ನ ಗಾತ್ರ ಮಾತ್ರವಲ್ಲ, ಬೆಲೆಯೂ ಹೆಚ್ಚಿದೆ. ಎಕ್ಸ್‌ಎಸ್‌ ಸರಣಿಗೆ 999 ಡಾಲರ್‌ (₹72,762) ದರ ಇದ್ದರೆ, ಎಕ್ಸ್‌ಎಸ್‌ ಮ್ಯಾಕ್ಸ್‌ ಬೆಲೆ 1,099 ಡಾಲರ್‌ (₹ 80,045) ಇದೆ. ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ಐಫೋನ್‌ ಬೆಲೆ ಕ್ರಮವಾಗಿ 699 ಡಾಲರ್‌ (₹50,911) 799 ಡಾಲರ್‌ (₹ 58,195) ಇತ್ತು. ಅಂದರೆ ಬೆಲೆ ಒಂದು ವರ್ಷದಲ್ಲಿ (ಐಫೋನ್‌ ಪ್ರಾಥಮಿಕ ಮಾದರಿ) ₹21,851 ದಷ್ಟು ಹೆಚ್ಚಿದೆ. ಇದೇ ಅಕ್ಟೋಬರ್‌ 19ರಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಐಫೋನ್‌ ಎಕ್ಸ್‌ಆರ್‌ ಮಾದರಿಗೆ 749 ಡಾಲರ್‌ ( ₹54,553) ನಿಗದಿಪಡಿಸಲಾಗಿದೆ.

ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.