ADVERTISEMENT

ಒನ್‌ಪ್ಲಸ್‌ 7ಟಿ, ಸ್ಮಾರ್ಟ್‌ ಟಿವಿ ಇದೇ 26ರಂದು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:36 IST
Last Updated 18 ಸೆಪ್ಟೆಂಬರ್ 2019, 14:36 IST
   

ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಒನ್‌ಪ್ಲಸ್‌, ಇದೇ 26ರಂದು ಗುರುವಾರ ಭಾರತದ ಮಾರುಕಟ್ಟೆಗೆ ತನ್ನ ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಲಿದೆ.ಚೀನಾದ ಕಂಪನಿಯಾಗಿದ್ದರೂ ಭಾರತದ ಮಾರುಕಟ್ಟೆಯಲ್ಲೇ ಮೊದಲ ಬಾರಿಗೆ ಬಿಡುಗಡೆಗೆ ಮುಂದಾಗಿರುವುದು ವಿಶೇಷ.

ಒನ್‌ಪ್ಲಸ್‌ 7ಸರಣಿಯಲ್ಲಿ ಒನ್‌ಪ್ಲಸ್‌ 7ಟಿ ಸ್ಮಾರ್ಟ್‌ಫೋನ್‌ ಸಹ ಅಂದೇ ಮಾರುಕಟ್ಟೆಗೆ ಬರಲಿದೆ.

ಟಿವಿಯ ಪ್ರಾಥಮಿಕ ಮಾಹಿತಿ: 55 ಇಂಚಿನ 4ಕೆ ಕ್ಯುಎಲ್‌ಇಡಿ ಪರದೆ, ಸ್ಕ್ರೀನ್‌ ಗುಣಮಟ್ಟ ಹೆಚ್ಚಿಸಲು ಡಾಲ್ಬಿ ವಿಷನ್‌, ಸಿನಿಮ್ಯಾಟಿಕ್‌ ಸೌಂಡ್‌ ಸ್ಪೇಸ್‌ಗಾಗಿ ಡಾಲ್ಬಿ ಅಟ್ಮೋಸ್‌, 8 ಸ್ಪೀಕರ್‌ ಇರಲಿವೆ.

ADVERTISEMENT

ಸದ್ಯ ಜನಪ್ರಿಯವಾಗಿರುವ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿಗಳ ಸ್ಮಾರ್ಟ್ ಟಿವಿಗಳೂ ಮಾರುಕಟ್ಟೆಯಲ್ಲಿವೆ. ಶಿಯೋಮಿ, ಸ್ಯಾಮ್ಸಂಗ್‌, ಎಲ್‌ಜಿ ಮತ್ತು ಮೈಕ್ರೊಮ್ಯಾಕ್ಸ್‌ ಟಿವಿಗಳಿವೆ. ಈ ಸಾಲಿಗೆ ಇದೀಗ ಒನ್‌ಪ್ಲಸ್‌ ಹೊಸದಾಗಿ ಸೇರುತ್ತಿದ್ದು, ಗ್ರಾಹಕರನ್ನು ಆಕರ್ಷಿಸಲು ಯಾವೆಲ್ಲಾ ತಂತ್ರಗಾರಿಕೆಯೊಂದಿಗೆ ಮಾರುಕಟ್ಟೆಗೆ ಹೆಜ್ಜೆ ಇಡಲಿದೆ ಎನ್ನುವ ಕುತೂಹಲ ಇದೆ.

ಸ್ಮಾರ್ಟ್‌ಫೋನ್‌ ರೀತಿಯಲ್ಲಿಯೇ ಸ್ಮಾರ್ಟ್ ಟಿವಿಯನ್ನೂ ಸಹ ಪ್ರೀಮಿಯಂ ವಿಭಾಗದಲ್ಲಿ ಮಾತ್ರವೇ ಬಿಡುಗಡೆ ಮಾಡುವುದೇ ಅಥವಾ ಎಲ್ಲಾ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಟಿವಿಗಳನ್ನು ಪರಿಚಯಿಸುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸದ್ಯದ ಟಿವಿ ಮಾರುಕಟ್ಟೆಯನ್ನು ಗಮನಿಸಿದರೆ, ಗಾತ್ರ, ಬೆಲೆ ಮತ್ತು ವೈಶಿಷ್ಟ್ಯದ ದೃಷ್ಟಿಯಿಂದ ಪ್ರೀಮಿಯಂ ವಿಭಾಗ ಒಂದರಿಂದಲೇ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರುವುದು ಕಷ್ಟವಾಗಲಿದೆ. ಕೈಗೆಟುಕುವ, ಮಧ್ಯಮ ಮತ್ತು ಪ್ರೀಮಿಯಂ ವಿಭಾಗಗಳಲ್ಲಿಯೂ ಉತ್ಪನ್ನಗಳನ್ನು ಬಿಡುಗಡೆ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯಬಹುದು.

ಟಿವಿ ಇಂದಿಗೂ ಪ್ರಸ್ತುತವಾಗಿ ಇರಲು ಅದರಲ್ಲಿ ಬರುತ್ತಿರುವ ಮಾಹಿತಿ, ಮನರಂಜನೆಯ ಕಾರ್ಯಕ್ರಮಗಳು ಬಹುಮುಖ್ಯ ಕಾರಣವಾಗಿವೆ. ಭಾರತದಲ್ಲಿ ಕಂಟೆಂಟ್‌ ನೀಡುವವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅವರು ನಮ್ಮೊಂದಿಗೆ ಪಾಲುದಾರರಾಗಲು ಸದಾ ಸಿದ್ಧರಿದ್ದಾರೆ.ನಮ್ಮ ಸ್ಮಾರ್ಟ್ ಟಿವಿ ಗ್ರಾಹಕರಿಗೆ ಉತ್ತಮ ಕಂಟೆಂಟ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಲಾಗುವುದು ಎಂದು ಕಂಪನಿ ಈಚೆಗಷ್ಟೇ ಹೇಳಿಕೊಂಡಿದೆ.

ಭವಿಷ್ಯದ ಸ್ಮಾರ್ಟ್‌ ಟಿವಿಗೆ ಒಂದು ಗುಣಮಟ್ಟ ನೀಡುವ ಗುರಿಯನ್ನು ಹೊಂದಿದ್ದೇವೆ. ಸುಧಾರಿತ ತಂತ್ರಜ್ಞಾನಗಳಾದ 5ಜಿ, ಕೃತಕ ಬುದ್ಧಿಮತ್ತೆ, ವರ್ಚುವಲ್‌ ರಿಯಾಲಿಟಿ ಮತ್ತು ಆಗ್ಮೆಂಟೆಡ್‌ ರಿಯಾಲಿಟಿ ಅಳವಡಿಸಿಕೊಳ್ಳಲಾಗುವುದು. ಇಂಟರ್‌ನೆಟ್ ಆಫ್‌ ಥಿಂಗ್ಸ್‌ (ಐಒಟಿ) ಜಗತ್ತಿನ ಭಾಗವಾಗುವ ನಿಟ್ಟಿನಲ್ಲಿ ಒನ್‌ಪ್ಲಸ್‌ ಟಿವಿ ಬಿಡುಗಡೆಯು ಮೊದಲ ಮಹತ್ವದ ಹೆಜ್ಜೆಯಾಗಿದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.