ADVERTISEMENT

ಸೆನ್ಸೆಕ್ಸ್‌: ಎರಡು ತಿಂಗಳಲ್ಲೇ ಗರಿಷ್ಠ ಕುಸಿತ

ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ಹೆಚ್ಚಳ; ಪೇಟೆಯಲ್ಲಿ ಮಾರಾಟದ ಒತ್ತಡ

ಏಜೆನ್ಸೀಸ್
Published 15 ಡಿಸೆಂಬರ್ 2022, 19:30 IST
Last Updated 15 ಡಿಸೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಬಡ್ಡಿದರ ಹೆಚ್ಚಿಸುವುದನ್ನು ಮುಂದುವರಿಸುವ ಅಮೆರಿಕದ ಫೆಡರಲ್‌ ರಿಸರ್ವ್‌ನ ನಿರ್ಧಾರವು ದೇಶದ ಷೇರುಪೇಟೆಗಳಲ್ಲಿ ಗುರುವಾರ ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಇಳಿಕೆ ಕಂಡಿದ್ದು ಸಹ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ವರ್ತಕರು ಹೇಳಿದ್ದಾರೆ.

ಎರಡು ದಿನಗಳಿಂದ ಏರುಮುಖವಾಗಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 879 ಅಂಶ ಕಸಿತ ಕಂಡು 61,799 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 245 ಅಂಶ ಇಳಿಕೆಯಾಗಿ 18,415 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

‘ಅಮೆರಿಕದ ಹಣದುಬ್ಬರವು ಮಾರುಕಟ್ಟೆ ನಿರೀಕ್ಷೆಗಿಂತಲೂ ಉತ್ತಮ ಸ್ಥಿತಿಯಲ್ಲಿ ಇದೆ. ಹೀಗಿದ್ದರೂ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಶೇ 0.50ರಷ್ಟು ಹೆಚ್ಚಳ ಮಾಡಿದ್ದು, ಬಿಗಿಯಾದ ಹಣಕಾಸು ನೀತಿಯನ್ನು ಮುಂದುವರಿಸಲು ನಿರ್ಧರಿಸಿದೆ. ಇದು ದೇಶದ ಷೇರುಪೇಟೆಗಳಲ್ಲಿ ವಹಿವಾಟು ಇಳಿಕೆ ಕಾಣಲು ಪ್ರಮುಖ ಕಾರಣ ಆಯಿತು ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.77ರಷ್ಟು ಇಳಿಕೆ ಕಂಡು ಬ್ಯಾರಲ್‌ಗೆ 82.06 ಡಾಲರ್‌ಗೆ ತಲುಪಿತು.

ವಿದೇಶಿ ಹೂಡಿಕೆ ತಗ್ಗುವ ಸಂಭವ: ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲುಕಠಿಣ ಸ್ವರೂಪದ ಹಣಕಾಸು ನೀತಿಯನ್ನು ಮುಂದುವರಿಸುವುದಾಗಿ ಫೆಡರಲ್‌ ರಿಸರ್ವ್‌ ಹೇಳಿದೆ. ಇದರಿಂದಾಗಿ ಭಾರತವನ್ನೂ ಒಳಗೊಂಡು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳಿಗೆ ವಿದೇಶಿ ಬಂಡವಾಳ ಒಳಹರಿವು ಕಡಿಮೆ ಆಗುವ ಸಾಧ್ಯತೆ ಇದೆ. ವಿದೇಶಿ ಹೂಡಿಕೆದಾರರು ಲಾಭಗಳಿಕೆ ಮಾಡಿಕೊಳ್ಳಲು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ರೂಪಾಯಿ ಮೌಲ್ಯ 27 ಪೈಸೆ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ 27 ಪೈಸೆ ಇಳಿಕೆ ಕಂಡಿತು. ಅಮೆರಿಕದ ಫೆಡರಲ್‌ ರಿಸರ್ವ್‌ ನಿರ್ಧಾರವು ರೂಪಾಯಿ ಮೌಲ್ಯ ಇಳಿಕೆಗೆ ಪ್ರಮುಖ ಕಾರಣ ಆಯಿತು.

ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾಗಿದ್ದರಿಂದ ಗುರುವಾರ ಡಾಲರ್‌ ಮೌಲ್ಯ ವೃದ್ಧಿಯಾಗಿದೆ. ಇದರಿಂದಾಗಿ ರೂಪಾಯಿ ಇಳಿಕೆ ಕಾಣುವಂತಾಯಿತು. ರೂಪಾಯಿಯು ಒಂದು ಡಾಲರ್‌ಗೆ ಮತ್ತೆ ₹83ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಜತಿನ್‌ ತ್ರಿವೇದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.