ತಂತ್ರಜ್ಞಾನ: ಜೆಮಿನಿ ಲೈವ್‌ಗೆ ಕಣ್ಣು ಬಂತು!
ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋದಾಗ ಭಾಷೆ ಗೊತ್ತಿಲ್ಲದೇ ಒದ್ದಾಡುತ್ತಿದ್ದಾಗ ‘ಗೂಗಲ್ ಟ್ರಾನ್ಸ್‌ಲೇಟ್’ ಹಾಗೂ ‘ಗೂಗಲ್ ಲೆನ್ಸ್ ಅಪ್ಲಿಕೇಶನ್’ಗಳು ನಮಗೆ ಸಹಾಯಕವಾಗುತ್ತಿದ್ದವು. ಸೈನ್‌ಬೋರ್ಡ್‌ಗಳಲ್ಲಿ ನಮಗೆ ಅರ್ಥವಾಗದ ಭಾಷೆ ಇದ್ದರೆ, ಸ್ಮಾರ್ಟ್‌ಫೋನ್ ಕ್ಯಾಮೆರಾ ಆನ್ ಮಾಡಿ ಗೂಗಲ್ ಲೆನ್ಸ್‌ನಿಂದ ಅದನ್ನು ತಕ್ಷಣವೇ ಅನುವಾದ ಮಾಡಿಕೊಂಡು ಅರ್ಥಮಾಡಿಕೊಳ್ಳುವುದಂತೂ ಈಗ ಅತ್ಯಂತ ಸಾಮಾನ್ಯ ಸಂಗತಿ. ಯಾರೂ ಈಗ ಪರಿಚಯದವರಿಗೆ ಫೋನ್ ಮಾಡಿ, ‘ನಾನು ಇಲ್ಲಿದ್ದೇನೆ, ಇಲ್ಲಿಂದ ನಾವು ಹೋಗಬೇಕಾದಲ್ಲಿಗೆ ಹೋಗುವುದು ಹೇಗೆ ಸ್ವಲ್ಪ ಹೇಳು ಮಾರಾಯ’ ಎಂದು ಯಾರನ್ನೋ ಗೋಗರೆಯುವ ಕೆಲಸ ಇಲ್ಲ. ಸೀದಾ ಜೇಬಿನಿಂದ ಸ್ಮಾರ್ಟ್‌ಫೋನ್ ತೆಗೆದು ಅದರಲ್ಲಿನ ‘ಮ್ಯಾಪ್’ ಆ್ಯಪ್ ಓಪನ್ ಮಾಡಿ, ನಾವು ಹೋಗಬೇಕಾದ ಸ್ಥಳವನ್ನು ನಮೂದಿಸಿದರೆ ಸಾಕು, ದಾರಿಯನ್ನು ತೋರಿಸಿಬಿಡುತ್ತದೆ.
ಆದರೆ, ‘ಎಐ’ ಬಂದಮೇಲೆ ಒಂದೊಂದು ವ್ಯವಸ್ಥೆಗೂ ಹೊಸ ಜೀವ ಬಂದಿದೆ! ಅವೆಲ್ಲವೂ ಹೊಸ ಅಂಗಿ, ಪ್ಯಾಂಟನ್ನೋ, ಹೊಸ ಪಂಚೆಯನ್ನೋ ಸುತ್ತಿಕೊಂಡು ಓಡಾಡಲು ಶುರು ಮಾಡಿವೆ. ಹಾಗೆಯೇ, ಈ ವ್ಯವಸ್ಥೆಗೂ ಒಂದು ಬದಲಾವಣೆ ಬೇಕಲ್ಲ! ಖಂಡಿತ, ಅದೂ ಬದಲಾಗುತ್ತಿದೆ.
ಇನ್ನು ನಾವು ಎಲ್ಲೋ ನಿಂತು ದಿಕ್ಕುಗಾಣದಂತಾದರೆ ದಾರಿ ತೋರಿಸಲು, ನಮ್ಮೆದುರಿನ ಸೈನ್‌ಬೋರ್ಡ್‌ನಲ್ಲಿ ಏನು ಬರೆದಿದೆ ಎಂದು ಓದಲು, ಎರಡು ಕಲರ್‌ಗಳನ್ನು ತೋರಿಸಿ, ಈ ಎರಡು ಕಲರ್‌ಗಳಲ್ಲಿ ಪೇಂಟಿಂಗ್‌ಗೆ ಯಾವುದು ಸೂಕ್ತ ಎಂದು ನಿರ್ಧಾರ ಮಾಡಲು – ಹೀಗೆ ನಮ್ಮ ಎದುರು ಇರುವ ಎಲ್ಲದರ ಜೊತೆಗೂ ಒಂದು ಸಂವಹನವನ್ನು ನಡೆಸಲು ‘ಜೆಮಿನಿ ಲೈವ್’ ಸಹಾಯ ಮಾಡುತ್ತದೆ. ‘ಜೆಮಿನಿ ಲೈವ್’ ಎಂಬುದು ಕಳೆದ ಕೆಲವು ತಿಂಗಳ ಹಿಂದೆಯೇ ಗೂಗಲ್ ಪ್ರದರ್ಶಿಸಿದ್ದ ಒಂದು ಮಹತ್ವಾಕಾಂಕ್ಷಿ ಯೋಜನೆ. ಇದಕ್ಕೆ ಈಗ ಒಂದೊಂದೇ ಹೊಸ ಹೊಸ ಫೀಚರ್ ಸೇರಿಕೆಯಾಗುತ್ತಿದೆ.
ಸದ್ಯ ನಮ್ಮ ಕೈಯಲ್ಲಿರುವ ಎಲ್ಲ ‘ಜನರೇಟಿವ್ ಎಐ’ ಅಪ್ಲಿಕೇಶನ್‌ಗಳೆಲ್ಲವೂ ನಮ್ಮ ದೈನಂದಿನ ಜೀವನದಲ್ಲಿನ ಕ್ಷಣಕ್ಷಣದ ನಿರ್ಧಾರಗಳಲ್ಲಿ ಸಹಾಯಕ್ಕೆ ಬರುತ್ತಿಲ್ಲ. ಜನರೇಟಿವ್ ಎಐ ಗೆ ಬುದ್ಧಿ ಇದೆ. ಅದು ಅದರ ಮೂಲಭೂತ ವೈಶಿಷ್ಟವಾಯಿತು. ಜೊತೆಗೆ, ಅದಕ್ಕೆ ಬಾಯಿ ಬಂದಿತ್ತು. ಅಂದರೆ, ಮಾತನಾಡುವ ಸಾಮರ್ಥ್ಯವೂ ಬಂದಿದೆ. ಜೊತೆಗೆ, ಅದಕ್ಕೆ ಕಿವಿ ಇದೆ. ಅಂದರೆ ಕೇಳಿಸಿಕೊಂಡಿದ್ದನ್ನು ಬುದ್ಧಿಗೆ ಕಳುಹಿಸುತ್ತದೆ. ಆದರೆ, ಕಣ್ಣು ಬಂದಿರಲಿಲ್ಲ. ಅಂದರೆ, ಏನನ್ನಾದರೂ ನೋಡಿ ಅದರ ಬಗ್ಗೆ ಮಾಹಿತಿ ನೀಡುವುದೋ ಅಥವಾ ಅದರ ಕುರಿತಂತೆ ನಮಗೆ ಬುದ್ಧಿ ಹೇಳುವ ಕೆಲಸ ಮಾಡುತ್ತಿರಲಿಲ್ಲ. ಜನರೇಟಿವ್ ಎಐಗಳ ವಿಷಯದಲ್ಲಿ ಈವರೆಗೆ ನಿಜವಾದ ಕೊರತೆ ಇದಾಗಿತ್ತು. ಆದರೆ, ಈಗ ಆ ಕೊರತೆಯೂ ನಿವಾರಣೆಯಾದ ಹಾಗಿದೆ. ಗೂಗಲ್ ಜೆಮಿನಿ ಲೈವ್ ಈ ನಿಟ್ಟಿನಲ್ಲಿ ಮಹತ್ವದ ಸಾಧನೆ.
ಸದ್ಯಕ್ಕೆ ಇದು ಎಲ್ಲರಿಗೂ ಲಭ್ಯವಿಲ್ಲ. ಅಡ್ವಾನ್ಸ್‌ಡ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯ ಬಳಕೆಗೆ ಸಿಗುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಳಕೆದಾರರಿಗೂ ಲಭ್ಯವಾಗಬಹುದು. ಈಗಿನ ‘ಜೆನ್ ಎಐ’ನಲ್ಲಿ ಹುಟ್ಟಿರುವ ಸ್ಫರ್ಧೆಯನ್ನು ಗಮನಿಸಿದರೆ, ಯಾವ ಹೊಸ ಸೌಲಭ್ಯಗಳೂ ಉಚಿತ ಬಳಕೆದಾರರಿಗೆ ಸಿಗುವ ದಿನ ದೂರವಿಲ್ಲ. ಕ್ಯಾಮೆರಾ ಆಕ್ಸೆಸ್ ಸಿಕ್ಕಿರುವುದು ಮತ್ತು ಕ್ಯಾಮೆರಾದಲ್ಲಿ ಲೈವ್ ಆಗಿ ಕಾಣುತ್ತಿರುವುದನ್ನು ಜೆನ್ ಎಐ ವಿಶ್ಲೇಷಣೆ ಮಾಡುವುದು ಬಹುಶಃ ಮುಂದಿನ ದಿನಗಳಲ್ಲಿ ಜೆನ್ ಎಐ ಬಳಕೆಗೆ ಇನ್ನಷ್ಟು ಅವಕಾಶವನ್ನು ಸೃಷ್ಟಿಸಲಿದೆ. ಅದರಲ್ಲೂ, ಜನರ ದೈನಂದಿನ ಬಳಕೆಯಲ್ಲಿ ಈ ಸೌಲಭ್ಯಗಳು ಅತ್ಯಂತ ಮಹತ್ವದ ಕೆಲಸ ಮಾಡಲಿವೆ. ಉದಾಹರಣೆಗೆ ನಾವು ಈಗ ಎಲ್ಲೋ ಒಂದು ಕಡೆ ನಿಂತಿದ್ದೇವೆ. ಮುಂದೆ ಎಲ್ಲಿಗೆ ಹೋಗಬೇಕು ಎಂದು ಗೊತ್ತಿಲ್ಲ. ಎಲ್ಲಿಗೆ ಹೋಗಬೇಕು ಎಂಬುದನ್ನು ನೋಡುವುದಕ್ಕೆ ನಾವು ಮ್ಯಾಪ್ ತೆಗೆದು ಅದರಲ್ಲಿ ಡೆಸ್ಟಿನೇಶನ್ ಹಾಕಬೇಕು. ಆಗ ಅದು ನಮಗೆ ಎಲ್ಲಿಗೆ ಹೋಗಬೇಕು ಎಂಬುದನ್ನು ತೋರಿಸುತ್ತದೆ. ಆದರೆ, ಜೆಮಿನಿ ಲೈವ್ ಈ ಕೆಲಸವನ್ನು ಇನ್ನಷ್ಟು ಸರಾಗವಾಗಿಸುತ್ತದೆ.
ಜೆಮಿನಿ ಲೈವ್ ಆ್ಯಪ್ ತೆರೆದು ಧ್ವನಿ ಕಮಾಂಡ್‌ನಲ್ಲೇ ಈ ಎಲ್ಲ ಕೆಲಸವನ್ನೂ ಮಾಡಬಹುದು. ಅದು ಸ್ಕ್ರೀನ್ ಮೇಲೆ ಮ್ಯಾಪ್ ತೆಗೆದು ತೋರಿಸುತ್ತದೆ. ಈ ವೈಶಿಷ್ಟ್ಯಗಳು ಜೆನ್ ಎಐ ಜೊತೆಗೆ ನಮ್ಮ ಸಂವಹನವನ್ನು ಇನ್ನಷ್ಟು ಸರಾಗವಾಗಿಸುತ್ತದೆ. ಅಷ್ಟೇ ಅಲ್ಲ, ಜೆನ್ ಎಐಗೆ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲೂ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಈ ಸೌಲಭ್ಯದ ಜೊತೆಗೆ ನಮ್ಮ ಫೋನ್ ಸ್ಕ್ರೀನ್ ಮೇಲೆ ಏನು ಕಾಣಿಸುತ್ತದೆ ಎಂಬುದನ್ನೂ ಈ ಜೆಮಿನಿ ಲೈವ್ ವಿಶ್ಲೇಷಣೆ ಮಾಡುತ್ತದೆ. ಈ ಮೂಲಕ ಜೆನರೇಟಿವ್ ಎಐಗೆ ಒಂದು ಪ್ರಸ್ತುತತೆಯೂ ಸಿಕ್ಕಂತಾಗಿದೆ.
ಇಲ್ಲಿ ನಾವು ನೆನಪಿಡಬಹುದಾದ ಸಂಗತಿಯೇನೆಂದರೆ, ಈ ಜೆನ್‌ಎಐ ಗೆ ಮೂಲವಾದ ‘ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್’ಗಳನ್ನು ಅಭಿವೃದ್ಧಿಪಡಿಸುವಾಗ ಕೆಲವು ವರ್ಷಗಳ ಹಿಂದಿನ ಡೇಟಾವನ್ನು ಮಾತ್ರ ತೆಗೆದುಕೊಳ್ಳಲಾಗಿತ್ತು. ಆ ಡೇಟಾವನ್ನು ಆಧರಿಸಿ ಈ ಮಾಡೆಲ್‌ಗಳಿಗೆ ಯೋಚನೆ ಮಾಡುವ ತರಬೇತಿ ನೀಡಲಾಗಿತ್ತು. ಅಂದರೆ, ಅವು ಈಗ ಏನು ನಡೆಯುತ್ತಿದೆ ಎಂಬುದನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಲೈವ್ ಕ್ಯಾಮೆರಾ ಆಕ್ಸೆಸ್ ಕೂಡ ಸಿಕ್ಕಮೇಲೆ ನಮ್ಮ ಕಣ್ಣಿಗೂ ಮಿದುಳಿಗೂ ಇರುವ ಸಂಪರ್ಕದಂತಹ ಒಂದು ಕೊಂಡಿ ಮಶಿನ್‌ಗೂ ಸಿಕ್ಕಂತಾಗಿದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.