ADVERTISEMENT

ಕೊರೊನಾ | ಸೋಂಕು ನಿವಾರಕ ಟಾರ್ಚ್‌ ಅಭಿವೃದ್ಧಿ ಪಡಿಸಿದ ಮಹಾರಾಷ್ಟ್ರ ಪ್ರೊಫೆಸರ್‌

ಡೆಕ್ಕನ್ ಹೆರಾಲ್ಡ್
Published 14 ಏಪ್ರಿಲ್ 2020, 9:15 IST
Last Updated 14 ಏಪ್ರಿಲ್ 2020, 9:15 IST
ಕೊರೊನಾ ವೈರಾಣು– ಸಾಂಕೇತಿಕ ಚಿತ್ರ
ಕೊರೊನಾ ವೈರಾಣು– ಸಾಂಕೇತಿಕ ಚಿತ್ರ   

ಮುಂಬೈ: ಅವಶ್ಯಕತೆಗಳೇ ಅನ್ವೇಷಣೆಯ ಮೂಲ ಎಂಬ ಮಾತು ಕೊರೊನಾ ಬಿಕ್ಕಟ್ಟಿನಲ್ಲಿ ಪದೇ ಪದೇ ಸಾಬೀತಾಗುತ್ತಿದೆ. ವಿಜ್ಞಾನಿಗಳು, ಸಂಶೋಧಕರು, ವಿದ್ಯಾರ್ಥಿಗಳು ಅತ್ಯವಶ್ಯವಾಗಿರುವ ವಸ್ತುಗಳಅಭಿವೃದ್ಧಿಯತ್ತಮುಖ ಮಾಡಿದ್ದಾರೆ. ಆಹಾರ ಪದಾರ್ಥಗಳು, ಇತರೆ ವಸ್ತುಗಳಲ್ಲಿ ಸೋಂಕು ನಿವಾರಿಸುವ ಟಾರ್ಚ್‌ನ್ನು ಪ್ರೊಫೆಸರ್‌ ಒಬ್ಬರು ಇತ್ತೀಚೆಗೆ ಅಭಿವೃದ್ಧಿ ಪಡಿಸಿದ್ದಾರೆ.

ಜಗತ್ತಿನಾದ್ಯಂತ ಕೋವಿಡ್‌–19 ಸಾಂಕ್ರಾಮಿಕವಾಗಿರುವುದರಿಂದ ಸೋಂಕು ನಿವಾರಕ ಚಾರ್ಚ್ ಪ್ರಸ್ತುತ ಬಹು ಉಪಯುಕ್ತ ಸಾಧನವೆನಿಸಿದೆ. ಅಲ್ಟ್ರಾ ವೈಲೆಟ್‌ (ಯುವಿ ; ಅತಿನೇರಳ ಕಿರಣ) ಕಿರಣ ಹೊರಡಿಸುವಟಾರ್ಚ್‌ನ್ನು ಕೊಲ್ಲಾಪುರದ ಪ್ರೊ.ರಾಜೇಂದ್ರ ಸೋಂಕವಾಡೇ ಅಭಿವೃದ್ಧಿ ಪಡಿಸಿದ್ದಾರೆ. ಅವರು ಶಿವಾಜಿ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದಾರೆ.

ತರಕಾರಿ, ಆಹಾರ ಪದಾರ್ಥಗಳು, ಹಾಲಿನ ಪೊಟ್ಟಣ, ಕರೆನ್ಸಿ ನೋಟುಗಳ ಮೇಲೆ ಯುವಿ ಟಾರ್ಚ್‌ನಿಂದ ಕೆಲವು ನಿಮಿಷಗಳ ವರೆಗೂ ಕಿರಣ ಬೀರಿದರೆ ಸಾಕು. ವಸ್ತುಗಳ ಮೇಲಿರುವ ಬ್ಯಾಕ್ಟೀರಿಯಾ, ವೈರಸ್‌ಗಳು ಯುವಿ ಕಿರಣಗಳ ಪ್ರಭಾವದಲ್ಲಿ ನಾಶವಾಗುತ್ತವೆ.

ADVERTISEMENT

16 ವ್ಯಾಟ್‌/ 1 ಕೆ.ಜಿ ಮತ್ತು 33 ವ್ಯಾಟ್‌/1.2 ಕೆ.ಜಿ. ಎರಡು ಮಾದರಿಗಳಲ್ಲಿ ಯುವಿ ಸೋಂಕು ನಿವಾರಕ ಸಾಧನವನ್ನು ಪರಿಚಯಿಸಿದ್ದಾರೆ. ಈ ಸಾಧನಕ್ಕೆ ಕ್ರಮವಾಗಿ ₹4,500 ಮತ್ತು ₹5,500 ಬೆಲೆ ನಿಗದಿಪಡಿಸಲಾಗಿದೆ.

ಈಗಾಗಲೇ ಯುವಿ ಟಾರ್ಚ್‌ ಪರೀಕ್ಷೆ ನಡೆಸಲಾಗಿದ್ದು, ಮುಂಬೈನ ಪ್ಲಾ ಎಲೆಕ್ಟ್ರೋ ಅಪ್ಲೈಯನ್ಸಸ್‌ ಪ್ರೈ. ಲಿ., ಸಾಧನವನ್ನು ಸಿದ್ಧಪಡಿಸಲಿದೆ. ತಯಾರಿಕೆ ಹೆಚ್ಚಿದಂತೆ ನಿಗದಿ ಪಡಿಸಲಾಗಿರುವ ಬೆಲೆ ಇಳಿಕೆಯಾಗಲಿದೆ. ಈ ಸಾಧನವನ್ನು ಮನೆ, ಕಚೇರಿ, ಅಂಗಡಿಗಳು ಹಾಗೂ ಆಸ್ಪತ್ರೆಗಳಲ್ಲಿಯೂ ಬಳಸಬಹುದು ಎಂದು ಪ್ರೊ.ರಾಜೇಂದ್ರ ಹೇಳಿದ್ದಾರೆ.

ನ್ಯೂಯಾರ್ಕ್‌ನ ಕಾರ್ನೆಲ್‌ ಯೂನಿವರ್ಸಿಟಿ ಪ್ರಕಟಿಸಿದ್ದ ಅಧ್ಯಯನ ವರದಿಯಿಂದ ಪ್ರಭಾವಿತರಾಗಿ ಈ ಟಾರ್ಚ್‌ ಅಭಿವೃದ್ಧಿ ಪಡಿಸಿದ್ದಾಗಿ ಹೇಳಿದ್ದಾರೆ.

ಔರಂಗಬಾದ್‌ನ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಯೂನಿವರ್ಸಿಟಿ ವಿದ್ಯಾರ್ಥಿಯಾಗಿರುವ ಪ್ರೊ.ರಾಜೇಂದ್ರ ಅವರ ಪುತ್ರ ಅಂಕಿತ್‌, ಹಾಗೂ ಪುಣೆ ಅಬಾಸಾಹೇಬ್‌ ಗರ್ವಾರೆ ಕಾಲೇಜಿನಲ್ಲಿ ಮೈಕ್ರೊಬಯಾಲಜಿ ವ್ಯಾಸಂಗ ಮಾಡುತ್ತಿರುವ ಪುತ್ರಿ ಪೂನಂ ಸಂಶೋಧನೆಯಲ್ಲಿ ಸಹಕಾರ ನೀಡಿದ್ದಾರೆ.

'ಇದೊಂದು ಉಪಯುಕ್ತ ಸಾಧನ' ಎಂದು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್‌ ಸಮಂತ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.