ADVERTISEMENT

ವಿಶಿಷ್ಟ ದೂರದರ್ಶಕ ಬಳಸಿ ಗ್ರಹ ಪತ್ತೆ

ಅಹಮದಾಬಾದ್‌ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ವಿಜ್ಞಾನಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 19:32 IST
Last Updated 17 ನವೆಂಬರ್ 2021, 19:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ (ಪಿಆರ್‌ಎಲ್‌) ವಿಜ್ಞಾನಿಗಳು ನಮ್ಮ ಸೌರಮಂಡಲದ ಗುರು ಗ್ರಹಕ್ಕಿಂತ ದೊಡ್ಡದಾಗಿರುವ, ಅನ್ಯ ಸೌರಮಂಡಲದ ಗ್ರಹವೊಂದನ್ನು ಪತ್ತೆ ಮಾಡಿದ್ದಾರೆ.

ಮೌಂಟ್ ಅಬುವಿನಲ್ಲಿ ಇರುವ ಪಿಆರ್‌ಎಲ್‌ನ 1.2 ಮೀಟರ್‌ ದೂರದರ್ಶಕದಲ್ಲಿ, ಆಪ್ಟಿಕಲ್ ಫೈಬರ್‌ಫೆಡ್ ಸ್ಪೆಕ್ಟ್ರೊಗ್ರಾಫ್‌ (ಪರಸ್) ಅನ್ನು ಬಳಸಿಕೊಂಡು ಈ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿದೆ. ಪರಸ್‌ ಸ್ಪೆಕ್ಟ್ರೊಗ್ರಾಫ್‌ ಅನ್ನು ಬಳಸಿಕೊಂಡು ಆ ಗ್ರಹದ ಗಾತ್ರ ಮತ್ತು ದ್ರವ್ಯರಾಶಿಯನ್ನು ಲೆಕ್ಕ ಮಾಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೇಳಿದೆ.

ಭೂಮಿಯಿಂದ 725 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರವನ್ನು ಈ ಗ್ರಹವು ಸುತ್ತುತ್ತಿದೆ. ಹೆನ್ರಿ ಡ್ರೇಪರ್‌ನ ಪಟ್ಟಿಯಲ್ಲಿ ಈ ನಕ್ಷತ್ರವನ್ನುಎಚ್‌ಡಿ 82139 ಎಂದು ಹೆಸರಿಸಲಾಗಿದೆ. ಅದನ್ನು ಸುತ್ತುತ್ತಿರುವ ದೈತ್ಯ ಗ್ರಹವನ್ನು ಟಿಒಐ 1789ಬಿ ಎಂದು ಕರೆಯಲಾಗಿದೆ. ಟಿಒಐ 1789ಬಿ ಗ್ರಹದ ದ್ರವ್ಯರಾಶಿಯು, ನಮ್ಮ ಸೌರಮಂಡಲದ ಗುರು ಗ್ರಹದ ದ್ರವ್ಯರಾಶಿಗಿಂತ ಶೇ 70ರಷ್ಟು ಹೆಚ್ಚು. ಟಿಒಐ 1789ಬಿ ಗ್ರಹವು, ನಮ್ಮ ಗುರುಗ್ರಹಕ್ಕಿಂತ 1.4 ಪಟ್ಟು ಹೆಚ್ಚು ದೊಡ್ಡದು.

ADVERTISEMENT

2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ವರೆಗೆ ನಡೆಸಿದ ಅಧ್ಯಯನದಲ್ಲಿ ಈ ಗ್ರಹದ ಗಾತ್ರ ಮತ್ತು ದ್ರವ್ಯರಾಶಿಯನ್ನು ಲೆಕ್ಕ ಹಾಕಲಾಗಿದೆ. ಜರ್ಮನಿಯಸ್ಪೆಕ್ಟ್ರೊಗ್ರಾಫ್‌ ಮತ್ತು ಪಿಆರ್‌ಎಲ್‌ನ 43 ಸೆಂ.ಮೀ.ನ ದೂರದರ್ಶಕವನ್ನು ಬಳಸಿಕೊಂಡು, ಪರಸ್ಸ್ಪೆಕ್ಟ್ರೊಗ್ರಾಫ್‌ನಲ್ಲಿ ಲೆಕ್ಕಹಾಕಲಾದ ಗಾತ್ರ ಮತ್ತು ದ್ರವ್ಯರಾಶಿಯನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ಇಸ್ರೊ ಹೇಳಿದೆ.

ಟಿಒಐ 1789ಬಿ ಗ್ರಹವು,ಎಚ್‌ಡಿ 82139 ನಕ್ಷತ್ರವನ್ನು ಪ್ರತಿ 3.2 ದಿನಕ್ಕೊಮ್ಮೆ ಸುತ್ತಿಬರುತ್ತದೆ. ಅಲ್ಲದೆ ಈ ಗ್ರಹವು ನಕ್ಷತ್ರಕ್ಕೆ ಅತ್ಯಂತ ಸಮೀಪವಿದೆ. ನಮ್ಮ ಸೂರ್ಯ ಮತ್ತು ಬುಧ ಗ್ರಹದ ನಡುವಣ ಅಂತರದ 10ನೇ 1ರಷ್ಟು ದೂರವಷ್ಟೇ, ಈ ಗ್ರಹ ಮತ್ತು ನಕ್ಷತ್ರದ ನಡುವಿನ ಅಂತರ ಎಂದು ಇಸ್ರೊ ಹೇಳಿದೆ.

ಪರಸ್, ಭಾರತದಲ್ಲಿನ ಮೊದಲಆಪ್ಟಿಕಲ್ ಫೈಬರ್‌ಫೆಡ್ ಸ್ಪೆಕ್ಟ್ರೊಗ್ರಾಫ್‌ ಆಗಿದೆ. ಇದನ್ನು ಬಳಸಿಕೊಂಡು 2018ರಲ್ಲಿ, ಭೂಮಿಯಿಂದ 600 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಕೆ2–236ಬಿ ಎಂಬ ಅನ್ಯ ಸೌರಮಂಡಲದ ಗ್ರಹವನ್ನು ಪತ್ತೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.