
ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬೆಂಗಳೂರು ಮೂಲದ ನವೋದ್ಯಮ ಕಂಪನಿ ‘ಗ್ರಹ ಸ್ಪೇಸ್’ ತನ್ನ ಮೊದಲ ನ್ಯಾನೊ ಉಪಗ್ರಹ ಯೋಜನೆ ‘ಸೋಲಾರಸ್ ಎಸ್2’ಗೆ ಚಾಲನೆ ನೀಡಲು ಅನುಮತಿ ಪಡೆದುಕೊಂಡಿದೆ.
ರಾಷ್ಟ್ರೀಯ ಬಾಹ್ಯಾಕಾಶ ಉತ್ತೇಜನ ಮತ್ತು ಪ್ರಮಾಣೀಕರಣ ಕೇಂದ್ರವು ಈ ಉಪಗ್ರಹ ಉಡಾವಣಾ ಯೋಜನೆಗೆ ಅನುಮತಿ ನೀಡಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ತಂತ್ರಜ್ಞಾನದ ಸಾಮರ್ಥ್ಯವನ್ನು ಪ್ರದರ್ಶಿಸುವ ಭಾಗವಾಗಿ ಈ ಉಪಗ್ರಹದ ಉಡಾವಣೆ ನಡೆಯಲಿದೆ ಎಂದು ಕಂಪನಿಯು ಹೇಳಿದೆ.
ಬ್ರೆಜಿಲ್ ದೇಶದ ಅಲ್ಕಾಂಟರಾ ಬಾಹ್ಯಾಕಾಶ ಕೇಂದ್ರದಿಂದ ಈ ಉಡಾವಣೆ ಆಗಲಿದೆ.
‘ಗ್ರಹ ಸ್ಪೇಸ್’ ಕಂಪನಿಯು, ಕೆಳ ಭೂಕಕ್ಷೆಯಿಂದ ನ್ಯಾನೊ ಉಪಗ್ರಹಗಳ ಸುಧಾರಿತ ಸಮೂಹವನ್ನು ಬಳಸಿ, ಬೇಡಿಕೆಯನ್ನು ಆಧರಿಸಿ ಭೂವೀಕ್ಷಣಾ ದತ್ತಾಂಶವನ್ನು ಒದಗಿಸುವ ಕೆಲಸ ಮಾಡುತ್ತದೆ.
‘ಸೋಲಾರಸ್ ಎಸ್2 ಯೋಜನೆಯು ನಮ್ಮ ನ್ಯಾನೊ ಉಪಗ್ರಹ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯಲು ನಮಗೆ ಅವಕಾಶ ನೀಡುತ್ತದೆ. ಇದು ಮುಂದಿನ ಹಂತಕ್ಕೆ ನಾವು ಎಷ್ಟು ಸನ್ನದ್ಧರಾಗಿದ್ದೇವೆ ಎಂಬುದನ್ನು ಹೇಳುತ್ತದೆ’ ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ರಮೇಶ್ ಕುಮಾರ್ ವಿ. ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.