ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ. ಬಾಹ್ಯಾಕಾಶ ಸಂಶೋಧನೆ ಆರಂಭವಾದಾಗಿನಿಂದ ಚಂದ್ರನ ಹುಟ್ಟನ್ನು ಕೆಲವು ಸಿದ್ಧಾಂತಗಳ ಮೂಲಕ ಪ್ರತಿಪಾದಿಸಲಾಯಿತು. ಭೂಮಿ ಮತ್ತು ಚಂದ್ರ – ಎರಡೂ ಒಂದೇ ಪ್ರಕ್ರಿಯೆಯ ಮೂಲಕ ಹುಟ್ಟಿದ್ದು ಎನ್ನುತ್ತದೆ ಒಂದು ಸಿದ್ಧಾಂತ. ಇವೆರಡೂ ಅನಿಲ ಹಾಗೂ ದೂಳಿನ ಕಣಗಳಿಂದ ಕೂಡಿದ ಒಂದೇ ಬಗೆಯ ವಸ್ತುಗಳ ಘನೀಕರಣದಿಂದ ರೂಪುಗೊಂಡವು. ಅಂದರೆ ಭೂಮಿ ಮತ್ತು ಚಂದ್ರ ಎರಡೂ ಗ್ರಹಗಳ ವಯಸ್ಸು ಒಂದೇ!
ಅಪೊಲೊ ಹಾಗೂ ಅನಂತರದ ಬಾಹ್ಯಾಕಾಶ ಯಾನಗಳು ಸಂಗ್ರಹಿಸಿದ ಮಾಹಿತಿಗಳು ಚಂದ್ರ ಮತ್ತು ಭೂಗ್ರಹದ ರಾಸಾಯನಿಕ ಸಂಯೋಜನೆಗಳು ಭಿನ್ನವಾಗಿವೆ ಎಂದು ತೋರಿಸಿದವು. ಎರಡೂ ಒಂದೇ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದರೆ ಅವು ಹೇಗೆ ಭಿನ್ನತೆಯನ್ನು ಪಡೆದವು? ಭೂಮಿ ಹೇಗೆ ಚಂದ್ರನಿಗಿಂತ ಹೆಚ್ಚು ಗುರುತ್ವಾಕರ್ಷಣೆ ಪಡೆಯಿತು? ಈ ಪ್ರಶ್ನೆಗಳಿಗೆ ಉತ್ತರವಿರಲಿಲ್ಲ. ಅದರಿಂದ ಈ ಸಿದ್ಧಾಂತವನ್ನು ತಿರಸ್ಕರಿಸಲಾಯಿತು.
ಚಂದ್ರನ ಉಗಮದ ಕುರಿತ ಇನ್ನೊಂದು ವಿದಳನ ಸಿದ್ಧಾಂತ. ಇದರ ಪ್ರಕಾರ ಚಂದ್ರ ಒಮ್ಮೆ ಭೂಮಿಯ ಭಾಗವಾಗಿತ್ತು. ಸುತ್ತುತ್ತಿರುವ ಭೂಮಿಯ ವೇಗದಿಂದಾಗಿ ಒಂದು ಭಾಗ ಸಿಡಿದು ಭೂಮಿಯಿಂದ ಬಾಹ್ಯಾಕಾಶಕ್ಕೆ ಹೊರಬಂತು. ಭೂಮಿ ಮತ್ತು ಚಂದ್ರಗ್ರಹಗಳ ಸಂಯೋಜನೆಯ ವ್ಯತ್ಯಾಸ ಹಾಗೂ ಭೂಮಿಯ ಸುತ್ತ ಚಂದ್ರನ ಕಕ್ಷೆ ಹೇಗೆ ನಿರ್ಮಾಣವಾಯಿತು ಎಂದು ವಿವರಣೆ ನೀಡಲು ವಿದಳನ ಸಿದ್ಧಾಂತವು ವಿಫಲವಾಗಿದೆ. ‘ಸಹ-ಸಮೂಹ ಕಲ್ಪನೆ’, ‘ಕ್ಯಾಪ್ಚರ್ ಸಿದ್ಧಾಂತ’ ಎಂಬ ಸಿದ್ಧಾಂತಗಳು ಇವೆಯಾದರೂ, ಅವನ್ನು ಒಪ್ಪಲು ಸೂಕ್ತ ಪುರಾವೆಗಳಿಲ್ಲ.
‘ದೈತ್ಯ ಪ್ರಭಾವ’ (ಜಯಂಟ್ ಇಂಪ್ಯಾಕ್ಟ್ ಹೈಪಾಥೆಸಿಸ್) ಎಂಬುದು ಇನ್ನೊಂದು ಸಿದ್ಧಾಂತ. ಇದರ ಪ್ರಕಾರ, 450 ಕೋಟಿ ವರ್ಷಗಳ ಹಿಂದೆ ಚಂದ್ರ, ಭೂಮಿ ಮತ್ತು ಮಂಗಳ ಗ್ರಹಗಳ ನಡುವಿನ ಬೃಹತ್ ಘರ್ಷಣೆಯ ಪರಿಣಾಮವಾಗಿ ರೂಪುಗೊಂಡಿತು. ಹೀಗೆ ಘರ್ಷಣೆಯುಂಟಾದ ಗ್ರಹಗಳ ಹೊರಭಾಗಗಳು ಕೂಡಿ ಘನೀಕರಣಗೊಂಡು ಚಂದ್ರನ ಉಗಮವಾಯಿತಂತೆ. ಭೂಮಿಯ ತಿರುಳಿನಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಿದ್ದು, ಅದಕ್ಕೆ ಹೋಲಿಸಿದರೆ ಚಂದ್ರನ ತಿರುಳಿನಲ್ಲಿ ಕಬ್ಬಿಣದ ಅಂಶ ಕಡಿಮೆ. ಚಂದ್ರನ ಸೃಷ್ಟಿಯಾದಾಗ ಭೂಮಿಯ ಹೊರಪದರಗಳು ಮಾತ್ರ ಕೂಡಿದ್ದರಿಂದ ಚಂದ್ರನ ತಿರುಳಿನಲ್ಲಿ ಕಡಿಮೆ ಕಬ್ಬಿಣ ಸಂಗ್ರಹವಾಗಿದೆ. ಭೂಮಿ ಮತ್ತು ಚಂದ್ರನ ನಡುವಿನ ಗುರುತ್ವಾಕರ್ಷಣೆ ವ್ಯತ್ಯಾಸಕ್ಕೆ ಇದೇ ಕಾರಣ. ಭೂಮಿಯ ಗುರುತ್ವಾಕರ್ಷಣೆ ಚಂದ್ರನಿಗಿಂತ ಆರು ಪಟ್ಟು ಹೆಚ್ಚಿರುತ್ತದೆ. ಗುರುತ್ವಾಕರ್ಷಣೆಯ ವ್ಯತ್ಯಾಸದಿಂದಾಗಿಯೇ ಚಂದ್ರ, ಭೂಮಿಯ ಸುತ್ತ ತನ್ನದೇ ಕಕ್ಷೆಯಲ್ಲಿ ಸುತ್ತುತ್ತಿರುತ್ತದೆ. ಅಪೊಲೊ ಗಗನಯಾತ್ರಿಗಳು ತಂದ ಚಂದ್ರನ ಬಂಡೆಗಳ ವಿಶ್ಲೇಷಣೆಯು ಅವು ಭೂಮಿಯ ಹೊರಕವಚವನ್ನು ಹೋಲುತ್ತವೆ ಎಂದು ತೋರಿಸಿದೆ. ಇದು ದೈತ್ಯ ಪ್ರಭಾವ ಸಿದ್ಧಾಂತಕ್ಕೆ ಪ್ರಬಲವಾದ ಪುರಾವೆ ನೀಡುತ್ತವೆ. ಅದರಿಂದ ಬಹುತೇಕ ವಿಜ್ಞಾನಿಗಳು ಈ ಸಿದ್ಧಾಂತವನ್ನು ಒಪ್ಪುತ್ತಾರೆ. ಆ ಕಾಲದ ಘರ್ಷಣೆಯನ್ನು ‘ಇಂಪ್ಯಾಕ್ಟರ್’ ಎಂದೂ, ಇದರಿಂದ ಉದ್ಭವಿಸಿದ ಆಕಾಶಕಾಯವನ್ನು ‘ಥಿಯಾ’ ಎಂದು ಹೆಸರಿಸಲಾಯಿತು. ಈ ಸಿದ್ಧಾಂತದ ಪ್ರಕಾರ ಚಂದ್ರನ ವಯಸ್ಸು 450 ಕೋಟಿ ವರ್ಷಗಳು.
ಇತ್ತೀಚಿನ ಚಂದ್ರಯಾನದಿಂದ ದೊರೆತ ಕಂಪ್ಯೂಟರ್ ಅನುಕರಣಗಳು (‘ಸಿಮುಲೇಷನ್’ಗಳು) ಹೊಸದಾಗಿ ಉಗಮವಾದ ಚಂದ್ರನ ಮೇಲಿನ ಶಿಲಾಖಂಡಗಳು ಘರ್ಷಣೆಯಲ್ಲಿ ಉಂಟಾದ ಶಾಖದ ಪರಿಣಾಮವಾಗಿ ಬಿಸಿಯಾಗಿ ಕರಗಿದವು ಹಾಗೂ ಅವುಗಳ ಕೆಲವು ಶೇಷಗಳು ಚಂದ್ರನ ತಿರುಳಿನ ಕಡೆಗೆ ಸಾಗಿದವು ಎಂದು ತೋರಿಸುತ್ತವೆ. ಈ ಶಿಲಾಖಂಡಗಳಲ್ಲಿ ಕಡಿಮೆ ಕಬ್ಬಿಣದ ಅಂಶವಿದ್ದುದರಿಂದ ಚಂದ್ರನ ತಿರುಳಿನಲ್ಲಿ ಕಡಿಮೆ ಕಬ್ಬಿಣದ ಅಂಶದ ಇರುವಿಕೆಗೆ ಕಾರಣ ಎನ್ನುತ್ತವೆ, ಈ ಕಂಪ್ಯೂಟರ್ ಅನುಕರಣಗಳು.
ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದ ಭೂಮಿ ಮತ್ತು ಗ್ರಹವಿಜ್ಞಾನ ವಿಭಾಗದ ಫ್ರಾನ್ಸಿಸ್ ನಿಮ್ಮೊ ಮತ್ತು ಸಂಗಡಿಗರು ಇತ್ತೀಚಿಗೆ ‘ನೇಚರ್’ ಪತ್ರಿಕೆಯಲ್ಲಿ ಪ್ರಕಟವಾದ ಅವರ ಲೇಖನದಲ್ಲಿ ಚಂದ್ರನ ಹುಟ್ಟಿನ ಬಗ್ಗೆ ಇನ್ನಷ್ಟು ದಾಖಲೆಗಳನ್ನು ನೀಡಿದ್ದಾರೆ. ಈ ತಂಡವು ದೈತ್ಯ ಪ್ರಭಾವ ಸಿದ್ಧಾಂತವನ್ನು ಅನುಮೋದಿಸುತ್ತದೆ. ಇತ್ತೀಚಿನ ಚಂದ್ರಯಾನಗಳಲ್ಲಿ ಚಂದ್ರನ ಶಿಲಾಪಾಕಸಾಗರದಿಂದ (Lunar Molten Ocean) ಸಂಗ್ರಹಿಸಿದ ಬಂಡೆಗಳ ಆಯಸ್ಸನ್ನು ‘ಡೇಟಿಂಗ್’ ಎಂಬ ತಂತ್ರದಿಂದ ಚಂದ್ರನ ವಯಸ್ಸನ್ನು ಊಹಿಸಿದ್ದಾರೆ. ಈ ಅಧ್ಯಯನವು ದೈತ್ಯ ಪ್ರಭಾವ ಸಿದ್ಧಾಂತವನ್ನು ಒಪ್ಪುವುದರ ಜೊತೆಗೆ ಚಂದ್ರಗ್ರಹವು ಸುಮಾರು 430–450 ಕೋಟಿ ವರ್ಷಗಳ ನಡುವೆ ಉದ್ಭವವಾಯಿತು ಎಂದೂ ತೋರಿಸಿದೆ. ಫ್ರಾನ್ಸಿಸ್ ನಿಮ್ಮೊ ಮತ್ತು ಸಂಗಡಿಗರ ಪ್ರಕಾರ, ಭೂಮಿ 460 ಕೋಟಿ ವರ್ಷಗಳ ಹಿಂದೆ ಉದ್ಭವಾಯಿತು, ಚಂದ್ರನು ಭೂಮಿಯ ಉಗಮದ ಸುಮಾರು ಹದಿನೈದು ದಶಲಕ್ಷ ವರ್ಷಗಳ ನಂತರ ಉದ್ಭವವಾಯಿತು. ಎಂದರೆ ಚಂದ್ರನು ಭೂಮಿಯ ಸಹೋದರ ಎಂದಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.