ADVERTISEMENT

ಭೂಮಿಗೆ ಅತಿ ಹತ್ತಿರದಲ್ಲಿ ಹಾಯ್ದುಹೋದ ಕ್ಷುದ್ರಗ್ರಹ ಪತ್ತೆ

ಐಐಟಿ–ಬಾಂಬೆ ವಿದ್ಯಾರ್ಥಿಗಳಿಬ್ಬರ ಸಾಧನೆ; ‘2020 ಕ್ಯೂಜಿ’ ಎಂದು ನಾಮಕರಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 7:57 IST
Last Updated 21 ಆಗಸ್ಟ್ 2020, 7:57 IST
ಭೂಮಿಗೆ ಹತ್ತಿರದಲ್ಲಿ ಹಾಯ್ದು ಹೋಗಿರುವ ‘2020ಕ್ಯೂಜಿ’ (ವೃತ್ತದಲ್ಲಿ ಕಾಣಿಸುತ್ತಿರುವುದು)ಎಂಬ ಕ್ಷುದ್ರಗ್ರಹವನ್ನು ನಾಸಾದ ಕ್ಯಾಲ್‌ಟೆಕ್ ಆಪ್ಟಿಕಲ್‌ ಆಬ್ಸರ್ವೇಟರಿ ಸೆರೆ ಹಿಡಿದಿದೆ.  
ಭೂಮಿಗೆ ಹತ್ತಿರದಲ್ಲಿ ಹಾಯ್ದು ಹೋಗಿರುವ ‘2020ಕ್ಯೂಜಿ’ (ವೃತ್ತದಲ್ಲಿ ಕಾಣಿಸುತ್ತಿರುವುದು)ಎಂಬ ಕ್ಷುದ್ರಗ್ರಹವನ್ನು ನಾಸಾದ ಕ್ಯಾಲ್‌ಟೆಕ್ ಆಪ್ಟಿಕಲ್‌ ಆಬ್ಸರ್ವೇಟರಿ ಸೆರೆ ಹಿಡಿದಿದೆ.     

ಮುಂಬೈ: ಭೂಮಿಗೆ ಅತ್ಯಂತ ಸನಿಹದಲ್ಲಿ ಕ್ಷುದ್ರಗ್ರಹವೊಂದು ಹಾಯ್ದುಹೋಗಿದ್ದನ್ನು ಐಐಟಿ–ಬಾಂಬೆಯ ಇಬ್ಬರು ವಿದ್ಯಾರ್ಥಿಗಳು ಕಂಡುಹಿಡಿದಿದ್ದಾರೆ.

ವಿದ್ಯಾರ್ಥಿಗಳಾದ ಕುನಾಲ್‌ ದೇಶಮುಖ್‌ ಹಾಗೂ ಕ್ರಿಟ್ಟಿ ಶರ್ಮಾ ಈ ಸಾಧನೆ ಮಾಡಿದ್ದಾರೆ.ಈ ಆಕಾಶಕಾಯಕ್ಕೆ ಅವರು ‘2020 ಕ್ಯೂಜಿ’ ಎಂದು ಹೆಸರಿಸಿದ್ದಾರೆ.

ಕುನಾನ್,‌ ಮೆಟಾಲರ್ಜಿ ಆ್ಯಂಡ್‌ ಮಟಿರಿಯಲ್‌ ಸೈನ್ಸ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ. ಕ್ರಿಟ್ಟಿ ಶರ್ಮಾ ಅವರು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನ ಮೂರನೇ ವರ್ಷದ ವಿದ್ಯಾರ್ಥಿ. ಭೂಮಿಗೆ ಹತ್ತಿರದ ಕ್ಷುದ್ರಗಹಗಳ ಕುರಿತ ಅಧ್ಯಯನ ನಡೆಸುವ ಪ್ರಾಜೆಕ್ಟ್‌ನಡಿ ಇವರು ಸಂಶೋಧನೆ ಕೈಗೊಂಡಿದ್ದಾರೆ.

ADVERTISEMENT

ಕ್ಯಾಲಿಫೋರ್ನಿಯಾ ಮೂಲದ ಜ್ವಿಕಿ ಟ್ರಾನ್ಸಿಯಂಟ್‌ ಫೆಸಿಲಿಟಿ (ಝಡ್‌ಟಿಎಫ್‌) ಎಂಬ ಸಂಸ್ಥೆ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆ ಸಂದರ್ಭದಲ್ಲಿ ಈ ಕ್ಷುದ್ರಗ್ರಹದ ಚಲನೆಯನ್ನು ಪತ್ತೆ ಹಚ್ಚಲಾಯಿತು.

ಈ ಆಕಾಶಕಾಯ ಕುರಿತ ಮಾಹಿತಿಯನ್ನು ‘ಇಂಟರ್‌ನ್ಯಾಷನಲ್‌ ಅಸ್ಟ್ರಾನಾಮಿಕಲ್‌ ಯೂನಿಯನ್‌ ಮೈನರ್‌ ಪ್ಲಾನೆಟ್‌ ಸೆಂಟರ್‌’ಗೆ ಒದಗಿಸಲಾಯಿತು. ಸಂಸ್ಥೆ ಸಹ ಈ ಕುರಿತು ಅಧ್ಯಯನ ನಡೆಸಿ, ಕ್ಷುದ್ರಗ್ರಹ ಹಾಯ್ದುಹೋಗಿರುವುದನ್ನು ದೃಢಪಡಿಸಿದೆ.

ಎಸ್‌ಯುವಿಯೊಂದರ ಗಾತ್ರದಷ್ಟಿರುವ ಈ ಆಕಾಶಕಾಯ ಭೂಮಿಯಿಂದ 2,950 ಕಿ.ಮೀ. ದೂರದಲ್ಲಿ ಹಾಯ್ದು ಹೋಗಿದೆ. ಇದರಿಂದ ಭೂಗ್ರಹದ ಮೇಲೆ ಯಾವುದೇ ಪರಿಣಾಮವಾಗದು ಎಂದು ಐಐಟಿ–ಬಾಂಬೆ ಪ್ರಕಟಣೆ ತಿಳಿಸಿದೆ.

‘ವರ್ಷದಲ್ಲಿ ಒಮ್ಮೆ ಇಂತಹ ಆಕಾಶಕಾಯಗಳು ಭೂಮಿಯ ಸನಿಹ ಹಾಯ್ದು ಹೋಗುತ್ತವೆ. ಕೆಲವೊಮ್ಮೆ ಅವುಗಳು ಪತ್ತೆ ಸಹ ಆಗುವುದಿಲ್ಲ’ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.